ನನಗೆ ಬೆದರಿಕೆ ಕರೆ ಬಂದಾಗ ಸಿಎಂ ಬೈದು ರಕ್ಷಣೆ ಕೊಡಿಸಿದ್ದರು...: ಯು.ಟಿ.ಖಾದರ್

''ರಾಜಕೀಯಕ್ಕಾಗಿ ಸ್ನೇಹವನ್ನು ಕಳೆದುಕೊಳ್ಳಬಾರದು'' ► ಅಧಿವೇಶನದ ಕೊನೆಯ ದಿನ ಸದನದಲ್ಲಿ ವಿಪಕ್ಷ ಉಪನಾಯಕರ ಮಾತು

Update: 2023-02-24 14:45 GMT

ಬೆಂಗಳೂರು, ಫೆ. 24: ನನಗೆ ಬೆದರಿಕೆ ಕರೆ ಬಂದಾಗ ನಾನು ಪೊಲೀಸ್ ರಕ್ಷಣೆ ತೆಗೆದುಕೊಂಡಿರಲಿಲ್ಲ. ಆಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೈದು ರಕ್ಷಣೆ ಕೊಡಿಸಿದ್ದರು. ಅದರಿಂದ ನನಗೆ ಮುಕ್ತವಾಗಿ ಓಡಾಡಲು ಸಾಧ್ಯವಾಯಿತು ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ನೆನಪು ಮಾಡಿಕೊಂಡರು.

ಶುಕ್ರವಾರ ಬಜೆಟ್ ಅಧಿವೇಶನದ ಕೊನೆಯದಿನ ವಿದಾಯ ಭಾಷಣ ಮಾಡಿದ ಅವರು, ಸದನಕ್ಕೆ ಬರುವುದು ನಾವು ಜನರ ಕೆಲಸಕ್ಕಾಗಿ. ಆದರೆ, ಜನರ ಕೆಲಸ ಫುಟ್ಬಾಲ್ ರೀತಿ ಆಗದೇ, ಗೋಲ್ ಹೊಡೆಯಬೇಕು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು. 

ಸಮಾಜವನ್ನು ಕಲುಷಿತ ಮಾಡಬಾರದು. ಎಲ್ಲವನ್ನು ಗಳಿಸಿ ಪರಿಸ್ಥಿತಿ ವಿಷಮವಾದರೆ ಪ್ರಯೋಜನವಾಗುವುದಿಲ್ಲ. ಚಿಂತೆ, ಬೆದರಿಕೆ ರಹಿತ ರಾಜಕಾರಣ ಮಾಡಬೇಕು ಎಂದ ಅವರು, ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಎಲ್ಲರೂ ದ್ವೇಷ ಮುಕ್ತ ಚುನಾವಣೆ ನಡೆಸಲು ಮುಂದಾಗಬೇಕು ಎಂದರು.

ರಾಜಕೀಯಕ್ಕಾಗಿ ಹೊಡೆದಾಡುವುದು ಬೇಡ. ಪ್ರೀತಿ, ವಿಶ್ವಾಸ ಕಳೆದುಕೊಳ್ಳಬಾರದು. ರಾಜಕೀಯಕ್ಕಾಗಿ ಸ್ನೇಹವನ್ನು ಕಳೆದುಕೊಳ್ಳಬಾರದು.ಇನ್ನೂ, ನಮಗೆ ಐದು ವರ್ಷ ಅಧಿಕಾರ ಕೊಡುವ ಜನಪರ ಕೆಲಸ ಮಾಡಿದಾಗ ನೆಮ್ಮದಿ ಮುಖ್ಯಮಂತ್ರಿಯಾಗಿದ್ದ ಎಲ್ಲರೂ ಸಹಕಾರ ಕೊಟ್ಟು ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ನನಗೆ ಉಪನಾಯಕ ಸ್ಥಾನ ಕೊಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ನಮ್ಮ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದರು.

Similar News