ಪತಿಯಿಂದ 2 ವಿಚ್ಛೇದನ ಅರ್ಜಿ ಸಲ್ಲಿಕೆ: ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ಫೆ. 24: ಪಶ್ಚಿಮ ಬಂಗಾಳದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ಕರ್ನಾಟಕದಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿದ್ದ ರಾಯಚೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ರಾಯಚೂರಿನ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಪ. ಬಂಗಾಳದ ನಿವಾಸಿ ಅನಿರ್ಬನ್ ದಾಸ್ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಪತ್ನಿ ದಿಂಪಿತಾ ಭೌಮಿಕ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಎರಡೂ ರಾಜ್ಯಗಳಲ್ಲಿ ಕೌಟುಂಬಿಕ ನ್ಯಾಯಾಲಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಪ.ಬಂಗಾಳದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಪ.ಬಂಗಾಳದಲ್ಲಿ ನ್ಯಾಯಾಲಯ ಅರ್ಜಿ ರದ್ದುಪಡಿಸಿದೆ. ಆದರೆ, ರಾಯಚೂರು ನ್ಯಾಯಾಲಯ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದೆ. ಒಂದು ಕೇಸ್ ಮುಂದುವರೆಸದಿದ್ದರೂ ಮತ್ತೊಂದು ಪ್ರಕರಣದಲ್ಲಿ ಏಕಪಕ್ಷೀಯವಾಗಿ ಆದೇಶ ಪಡೆದುಕೊಂಡಿದ್ದಾರೆ. ಹೀಗಾಗಿ ಪತಿ ಪಡೆದುಕೊಂಡಿರುವ ವಿಚ್ಛೇದನ ರದ್ದುಪಡಿಸುತ್ತಿರುವುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಪೀಠವು ತಿಳಿಸಿದೆ.
ಅಲ್ಲದೇ, ರಾಯಚೂರು ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶವನ್ನು ಅಂಗೀಕರಿಸಿದಲ್ಲಿ ಅರ್ಜಿದಾರರಾದ ದಿಂಪಿತಾ ಭೌಮಿಕ್ ಅವರ ವಿರುದ್ಧ ಪೂರ್ವಾಗ್ರಹವಾಗಿ ತೀರ್ಪು ನೀಡಿದಂತಾಗಲಿದೆ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ. ಜತೆಗೆ, ರಾಯಚೂರು ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನವನ್ನು ರದ್ದುಪಡಿಸಿ ಆದೇಶಿಸಿದ್ದು, ಪ್ರಕರಣವನ್ನು ಕಾನೂನು ಪ್ರಕಾರ ನಿರ್ಧರಿಸಲು ಸೂಚನೆ ನೀಡಿ ರಾಯಚೂರು ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.