ನಾನು ಸಿಎಂ ಆಗುತ್ತೇನೆಂದು ಯಡಿಯೂರಪ್ಪ ಮಂತ್ರಿ ಮಾಡಲಿಲ್ಲ: ಶಾಸಕ ಯತ್ನಾಳ್

Update: 2023-02-24 15:38 GMT

ಬೆಂಗಳೂರು, ಫೆ.24: ‘ನೀವು(ಸ್ಪೀಕರ್) ಮಂತ್ರಿ ಆಗಬೇಕೆಂದು ಯಡಿಯೂರಪ್ಪ ಹೇಳಿದ್ದರು. ಆದರೆ, ನಿಮ್ಮನ್ನು ಮಂತ್ರಿ ಮಾಡಿಲ್ಲ, ನನ್ನನ್ನು ಮಂತ್ರಿ ಮಾಡಿಲ್ಲ’ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರ ಹಾಕಿದರು.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಮಂತ್ರಿ ಮಾಡಬಾರದು ಎಂದು ಯಡಿಯೂರಪ್ಪ ಪ್ರತಿಜ್ಞೆ ಮಾಡಿದ್ದರು. ಈ ಯತ್ನಾಳ್ ಅನ್ನು ಮಂತ್ರಿ ಮಾಡಿದರೆ ಮುಂದೆ ಮುಖ್ಯಮಂತ್ರಿ ಆಗುತ್ತಾನೆ ಎಂದು ಭಾವಿಸಿದ್ದರು. ಆದರೂ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಸಲ ಒಳ್ಳೆಯ ಜನಪ್ರತಿನಿಧಿಗಳು ಬರಲಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಯಡಿಯೂರಪ್ಪ ನಿಮ್ಮನ್ನು ಕೇಂದ್ರ ಸಚಿವ ಹಾಗೂ ನನ್ನನ್ನು ಶಿಕ್ಷಣ ಮಂತ್ರಿ ಮಾಡಿದ್ದರು ಎಂದು ನೆನಪಿಸಿದರು. 

ನಾವು, ನೀವೆಲ್ಲ 1994ರ ಬ್ಯಾಚ್‍ನವರು. ಇಲ್ಲಿ ಮುಂದಿನ ಸಾಲಿನಲ್ಲಿ ದೇವೇಗೌಡರು, ಜೆ.ಎಚ್.ಪಟೇಲರು, ನಂಜೇಗೌಡರು, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಜೀವರಾಜ್ ಆಳ್ವ, ಪುಟ್ಟಣ್ಣಯ್ಯ, ವಾಟಾಳ್ ನಾಗರಾಜ್ ಇದ್ದರು. ನಾವು-ನೀವು ಹಿಂದಿನ ಸಾಲಿನಲ್ಲಿ ಇರುತ್ತಿದ್ದೆವು. ಸ್ಪೀಕರ್ ಗಿಂತ ಹೆಚ್ಚು ಯಡಿಯೂರಪ್ಪ ನಮ್ಮನ್ನು ಸಮ್ಮನೆ ಕೂರಿಸುತ್ತಿದ್ದರು ಎಂದು ಯತ್ನಾಳ್ ಹೇಳಿದರು.

ಆ ಐದು ವರ್ಷದಲ್ಲಿ ರಮೇಶ್ ಕುಮಾರ್ ಬಹಳ ಚೆನ್ನಾಗಿ ಸದನವನ್ನು ನಿಷ್ಪಕ್ಷಪಾತವಾಗಿ, ಕೆಲವೊಮ್ಮೆ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಹಿಂದಿನ ಶಾಸಕರಿಗೆ ಪ್ರೋತ್ಸಾಹ, ಅವಕಾಶ ನೀಡುತ್ತಿದ್ದರು. ಅದೇ ರೀತಿ ನೀವು ಪಕ್ಷಾತೀತವಾಗಿ ಎಲ್ಲರಿಗೂ ಅವಕಾಶ ನೀಡಿದ್ದೀರಾ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Similar News