×
Ad

ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಬಿಗಿ ಭದ್ರತೆ ಹೆಚ್ಚಿಸಲು ಕ್ರಮ: ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ

ಚಾರ್ಮಾಡಿ ಘಾಟ್‍ನಲ್ಲಿ ಮೃತದೇಹಗಳನ್ನು ಎಸೆಯುತ್ತಿರುವ ಹಿನ್ನೆಲೆ

Update: 2023-02-24 22:26 IST

ಚಿಕ್ಕಮಗಳೂರು, ಫೆ.23: ರಾಜ್ಯದ ವಿವಿಧೆಡೆ ಹತ್ಯೆ ಮಾಡಿ ಶವಗಳನ್ನು ಜಿಲ್ಲೆಯ ಚಾರ್ಮಾಡಿ ಘಾಟ್‍ನಲ್ಲಿ ತಂದು ಎಸೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಇನ್ನಷ್ಟು ಬಿಗಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಮಾಡಿ ಘಾಟ್ ರಸ್ತೆ ತಿರುವುಗಳು ಮತ್ತು ದುರ್ಗಮವಾಗಿರುವುದು ಹಂತಕರಿಗೆ ಅನುಕೂಲಕರವಾಗಿದೆ. ಆದ್ದರಿಂದ ಹತ್ಯೆ ಮಾಡಿದ ಶವಗಳಗಳನ್ನು ಇಲ್ಲಿ ತಂದು ಎಸೆಯುತ್ತಿದ್ದಾರೆ. ಈ ಕುಕೃತ್ಯಕ್ಕೆ ಕಡಿವಾಣ ಹಾಕಲು ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಕಣ್ಗಾವಲಿರಿಸುವುದು ಮತ್ತು ಪೆಟ್ರೋಲಿಂಗ್ ವಾಹನದ ಗಸ್ತು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆ ಸೇರಿದಂತೆ ಹಲವೆಡೆ ಸೈಬರ್ ಅಪರಾಧ ಕೃತ್ಯಗಳು ಹೆಚ್ಚಾಗಿ ಅನಕ್ಷರಸ್ಥರು ನಡೆಸುತ್ತಿಲ್ಲಾ, ಬುದ್ದಿವಂತರೆನಿಸಿಕೊಂಡವರೇ ನಡೆಸುತ್ತಿದ್ದಾರೆ. ಈ ಅಪರಾಧ ತಡೆಗಟ್ಟುವಲ್ಲಿ ಜನಜಾಗೃತಿಯ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಇಲಾಖೆವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ವಂಚನೆಗೊಳಗಾದ ಗೋಲ್ಡನ್ ಹವರ್ ನ ಒಳಗಾಗಿ ಇಲಾಖೆಗೆ ದೂರು ನೀಡಿದರೆ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಕ್ಸಲೀಯ ಚಟುವಟಿಕೆಗಳು ಇಲ್ಲವಾದರೂ ಭದ್ರತಾ ಕ್ರಮಗಳನ್ನು ಮುಂದುವರೆಸಲಾಗುತ್ತಿದೆ. ಎಂದಿನಂತೆ ನಕ್ಸಲ್ ಚಟುವಟಿಕೆಗಳ ಬಗ್ಗೆ ನಿರಂತರ ಕಣ್ಗಾವಲಿರಿಸಲಾಗಿದೆ ಎಂದ ಅವರು, ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವುದು ಮತ್ತು, ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ರಕ್ಷಣಾ ಸೇವೆ ನೀಡುವ ನಿಟ್ಟಿಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಅನಧೀಕೃತವಾಗಿ ಶಸಸ್ತ್ರಗಳನ್ನು ಹೊಂದಿರುವ ಬಗ್ಗೆ  ಇಲಾಖೆ ಮಾಹಿತಿ ಪಡೆದು ಅಂತವರ ಮನೆಗೆ ಬರುವ ಮೊದಲು ತಮ್ಮ ಬಳಿಯಿರುವ ಶಸ್ತ್ರಗಳನ್ನು ಇಲಾಖೆಗೆ ಠೇವಣಿ ಮಾಡಬೇಕು. ಜಿಲ್ಲೆಯಲ್ಲಿ ಅಕ್ರಮ ಬಂದೂಕುಗಳನ್ನು ಹೊಂದಿರುವ  ಸಾರ್ವಜನಿಕರು ನಿರಂತರವಾಗಿ ಕಳ್ಳ ಬೇಟೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿಯಿದ್ದು, ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಮೂಡಿಗೆರೆ ಮತ್ತು ಎನ್ .ಆರ್.ಪುರ ತಾಲೂಕುಗಳಲ್ಲಿ ಬಂಧಿಸಿರುವ ಮೂವರು ಬಂದೂಕು ರಿಪೇರಿದಾರರನ್ನು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದರೊಂದಿಗೆ ಅಂಗಡಿಗಳಿಂದ ವಶ ಪಡಿಸಿಕೊಂಡಿರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

-  ಉಮಾ ಪ್ರಶಾಂತ್, ಎಸ್ಪಿ

Similar News