ರಮಝಾನ್ ನಲ್ಲಿ ಫಜರ್ ಅಝಾನ್ ಗೆ ಧ್ವನಿವರ್ಧಕ ಬಳಕೆಗೆ ಅವಕಾಶಕ್ಕೆ ಖಾದರ್ ಮನವಿ
Update: 2023-02-25 13:48 IST
ಬೆಂಗಳೂರು: ರಮಝಾನ್ ಉಪವಾಸ ನಡೆಯುವ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಬೆಳಗ್ಗಿನ ಆಝಾನ್ ಅನ್ನು ಧ್ವನಿವರ್ಧಕದಲ್ಲಿ ನೀಡಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ, ಕಾನೂನು ಸಚಿವರು ಹಾಗು ಗ್ರಹ ಸಚಿವರನ್ನು ಭೇಟಿಯಾಗಿ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಇದಕ್ಕೆ ಅನುಮತಿ ನೀಡಲಿದ್ದಾರೆ ಎಂದು ಖಾದರ್ ತಿಳಿಸಿದ್ದಾರೆ.
ವಿಶೇಷ ಸಂದರ್ಭಗಳು ಹಾಗು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ, ಕ್ರೀಡಾಕೂಟಗಳಿಗೆ ರಾತ್ರಿ ಹಾಗು ಮುಂಜಾನೆ ಧ್ವನಿವರ್ಧಕ ಬಳಸಲು ಸರಕಾರ ಅನುಮತಿ ನೀಡುತ್ತಿದೆ. ಇದೇ ರೀತಿ ಪವಿತ್ರ ರಮಝಾನ್ ತಿಂಗಳಲ್ಲಿ ಬೆಳಗ್ಗಿನ ಜಾವದ 5 ಗಂಟೆಯಿಂದ 5 . 30 ರೊಳಗೆ ಗರಿಷ್ಟ ಐದು ನಿಮಿಷಗಳ ಕಾಲ ಧ್ವನಿ ವರ್ಧಕದ ಮೂಲಕ ಅಝಾನ್ ನೀಡಲು ಸರಕಾರ ಅನುಮತಿ ನೀಡಬೇಕು ಎಂದು ಖಾದರ್ ಮನವಿ ಮಾಡಿದ್ದರು.