×
Ad

'ಯಡಿಯೂರಪ್ಪ ಆ್ಯಂಡ್ ಕಂಪೆನಿ'ಯಿಂದ VISL ಕಾರ್ಖಾನೆ ಜಾಗವನ್ನು ಖಾಸಗಿ ಕಂಪೆನಿಗೆ ಮಾರುವ ಹುನ್ನಾರ: H. ವಿಶ್ವನಾಥ್ ಆರೋಪ

''ಈಶ್ವರಪ್ಪಗೆ ಕಾರ್ಖಾನೆಯನ್ನು ಮುಚ್ಚುವವರ ಕೈ ಕಟ್ ಮಾಡುವೆ ಎಂದು ಹೇಳುವ ಧಮ್ ಇಲ್ಲವೇ?''

Update: 2023-02-25 17:54 IST

ಶಿವಮೊಗ್ಗ, ಫೆ.25: 'ಮಾಜಿ ಸಿಎಂ ಯಡಿಯೂರಪ್ಪ ಅಂಡ್ ಕಂಪನಿಯಿಂದ  ವಿಐಎಸ್‌ಎಲ್ ಕಾರ್ಖಾನೆಯ ಜಾಗವನ್ನು ಖಾಸಗಿ ಕಂಪನಿಗೆ ಮಾರುವ ಹುನ್ನಾರ ನಡೆದಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆರೋಪಿಸಿದ್ದಾರೆ. 

ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, 'ಭದ್ರಾವತಿಯ ಕಾರ್ಖಾನೆಗಳು ಕನ್ನಡ ನಾಡಿದ ಅಸ್ಮಿತೆಗಳು. ಅವುಗಳನ್ನು ಉಳಿಸಿಕೊಳ್ಳಲೇ ಬೇಕು. ಖಾಸಗಿ ಕಂಪನಿಗಳಿಗೆ ಬೆಲೆ ಬಾಳುವ ಭೂಮಿಯನ್ನು ಮಾರುವ ಹುನ್ನಾರ ಈ ನಿರ್ಧಾರದ ಹಿಂದೆ ಇರಬಹುದು' ಎಂಬ ಅನುಮಾನ ಬರುತ್ತಿದೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಮತ್ತು ಸಂಸದರು ಕೇಂದ್ರ ಮಟ್ಟದಲ್ಲಿ ಮಾತುಕತೆ ನಡೆಸಿ ವಿಐಎಸ್‌ಎಲ್‌ಗೆ 500 ಕೋಟಿ ರೂ.  ಬಂಡವಾಳ ತರಲಾಗಿಲ್ಲ. ಸಾವಿರಾರು ಕುಟುಂಬಗಳ ಹೆಣ್ಣುಮಕ್ಕಳ ಕಣ್ಣೀರಿನ ಶಾಪ ಇವರಿಗೆ ತಟ್ಟುತ್ತದೆ ಎಂದರು.

ಮೈಸೂರು ಅರಸರ ಕಾಲದಲ್ಲಿ ಆದ ಕಾರ್ಖಾನೆಯನ್ನು ಬಿಜೆಪಿ ಆಡಳಿತದಲ್ಲಿ ಮುಚ್ಚವ ಕೆಲಸ ಆಗುತ್ತದೆ. ಪ್ರಧಾನಿ ವಿಮಾನ ನಿಲ್ದಾಣ ಉದ್ಘಾಟನೆಗೆ ಬರುತ್ತಿದ್ದಾರೆ. ಅವರಿಗೆ ಕಾರ್ಖಾನೆ ಉಳಿಸುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಡಬೇಕಿದೆ ಎಂದು ಆಗ್ರಹಿಸಿದರು.

ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವ ಪ್ರಧಾನಿ ಮೋದಿಯವರು ಅವರ ಅಹವಾಲು ಮಾತ್ರ ಹೇಳುವುದಲ್ಲ. ಜನರ ಅಳಲನ್ನು ಆಲಿಸಬೇಕಿದೆ. ಕಾರ್ಖಾನೆ ಬಗ್ಗೆ ಹೇಳಬೇಕಿದೆ ಎಂದ ಅವರು,ಕಾರ್ಖಾನೆ ಉಳಿಸುವ ಬದಲಾಗಿ ರ್‍ಯಾಪಿಡ್ಆಕ್ಷನ್ ಪೋರ್ಸ್ ಆರಂಭಿಸಲಾಗಿದೆ. ಇದರ ಅಗತ್ಯ ಇಲ್ಲಿಗೆ ಇತ್ತೆ ?  ಇಲ್ಲೇನು ಸಮುದ್ರ ಇದೆಯಾ ಎಂದು ಪ್ರಶ್ನಿಸಿದರು.

'ಧಮ್ ಇಲ್ಲವೇ ?': 

''ಬೇರೆ ವಿಷಯಕ್ಕೆ ತಲೆ, ಕೈ ಕತ್ತರಿಸಿ ಎನ್ನುವ ಈಶ್ವರಪ್ಪಗೆ, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವವರ ಕೈ ಕಟ್ ಮಾಡುವೆ ಎಂದು ಹೇಳುವ ಧಮ್ ಇಲ್ಲವೇ ಎಂದು ಪ್ರಶ್ನಿಸಿದರು.ಯಡಿಯೂರಪ್ಪ ಆಂಡ್ ಕಂಪನಿಯವರು ಖಾಸಗಿ ಕಂಪನಿಯೊಂದಕ್ಕೆ  ವಿಐಎಸ್‌ಎಲ್ ಕಾರ್ಖಾನೆ ಕೊಡಿಸಿ ತಮ್ಮ ಪಾಲು ಪಡೆಯಲು ಹವಣಿಸುತ್ತಿದ್ದಾರೆ'' ಎಂದು ಆರೋಪಿಸಿದರು.

'ಈಗಿನ  ರಾಜಕಾರಣ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಪಾರ್ಟಿಗೆ ಅರ್ಜಿ ಹಾಕಿದವರನ್ನು ಆಕಾಂಕ್ಷಿಗಳು ಎನ್ನುವುದಕ್ಕಿಂತ ಗಿರಾಕಿಗಳು ಎಂದು ನೋಡುವಂತಾಗಿದೆ. ಯಾವ ಗಿರಾಕಿ ಹೆಚ್ಚು ಬಂಡವಾಳ ಹೊಂದಿದ್ದಾನೊ ಅವನಿಗೆ ಟಿಕೆಟ್ ಸಿಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಮಠಾಧೀಶರಿಗೆ ಟಿಕೆಟ್ ನೀಡಲು ಹೊರಟಿದ್ದಾರೆ' ಎಂದರು.

'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹಣ ಪಡೆದಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಟೀಕಿಸುವ ನೈತಿಕತೆ ನನಗಿರುತ್ತಿರಲಿಲ್ಲ. ಜನ ಬೇಕಾದ ರೀತಿ ಅರ್ಥೈಸುತ್ತಿದಾರೆ. ಆದರೆ ಹಣದ ಹಿಂದೆ ಹೋಗುವ ರಾಜಕಾರಣಿ ನಾನಲ್ಲ ಎಂದು ಪ್ರಶ್ನೆಯೊಂದಕ್ಕೆ' ಉತ್ತರಿಸಿದರು.

''ಕಾಂಗ್ರೆಸ್ ನನ್ನ ತವರು ಮನೆ''

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಅದು ನನ್ನ ತವರು ಮನೆ. ನಾನಿರುವುದು ಅಲ್ಲಿಯೇ. ವಿಧಾನ ಪರಿಷತ್‌ಗೆ ಯಾವ ಪಕ್ಷದಿಂದಲೂ ನನ್ನನ್ನು ನೇಮಕ ಮಾಡಿಲ್ಲ. ಬದಲಾಗಿ ಸಾಹಿತ್ಯ ಕೃತಿಗಳನ್ನು ಬರೆದಿರುವುದರಿಂದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಕೋಲಾರಕ್ಕೂ ಹೋಗುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ, ಕಾರ್ಯದರ್ಶಿ ನಾಗರಾಜ್ ಎಸ್., ಗೋಪಾಲ ಯಡಗೆರೆ, ಸಂತೋಷ್ ಇದ್ದರು.

Similar News