ಮೈಸೂರು | ''ನನ್ನನ್ನು ಹತ್ಯೆ ಮಾಡಿ'' ಅಭಿಯಾನ ಆರಂಭಿಸಿದ ಕಾಂಗ್ರೆಸ್: ಸಚಿವ ಅಶ್ವತ್ಥನಾರಾಯಣ ವಿರುದ್ಧ ಆಕ್ರೋಶ

Update: 2023-02-25 16:46 GMT

ಮೈಸೂರು,ಫೆ.25: ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ನಗರದಲ್ಲಿ 'ನನ್ನನ್ನು ಹತ್ಯೆ ಮಾಡಿ' ಎಂಬ ಅಭಿಯಾನದಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು  ಹಾಕಿ  ಎಂದು ನೀಡಿರುವ  ಹೇಳಿಕೆಯನ್ನು ಖಂಡಿಸಿ ಹಾಗೂ ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ನಿರ್ಲಕ್ಷತೆಯನ್ನು ವಿರೋಧಿಸಿ ಇಂದಿನಿಂದ ''ನನ್ನನ್ನು ಹತ್ಯೆ ಮಾಡಿ'' ಅಭಿಯಾನ ಆರಂಭಿಸಿದ್ದು ಅದರ ಅಂಗವಾಗಿ ಪ್ರತಿಭಟನೆ ನಡೆಸಲಾಯಿತು. 

ನಗರದ ಅರಮನೆಯ ಬಲರಾಮ ಮಹಾದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಇಂದು ಬೆಳಗ್ಗೆ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನನ್ನನ್ನು ಹತ್ಯೆ ಮಾಡಿ ಎಂಬ ಪೋಸ್ಟರ್ ಗಳನ್ನು ಪ್ರದರ್ಶಿಸಿದರಲ್ಲದೆ ಡಾ.ಅಶ್ವತ್ಥ ನಾರಾಯಣ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ ಸ್ವಾಭಿಮಾನಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹೋರಾಟ ಸಮಿತಿ, ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮತ್ತು ಇತರ ವಿವಿಧ ಸಂಘಟನೆಗಳ ಮುಖಂಡರು ನಮ್ಮ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು  ಹೊಡೆದು ಹಾಕುವಂತೆ  ಸಚಿವ ಅಶ್ವತ್ಥ ನಾರಾಯಣ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅವರು ಇಷ್ಟು ಧೈರ್ಯದಿಂದ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ದೂರುಗಳು ಸಹ ದಾಖಲಾಗಿವೆ. ಆದರೂ ಸಹ ರಾಜ್ಯದ ಬಿಜೆಪಿ ಸರ್ಕಾರ ಅವರ ವಿರುದ್ಧ ಇದುವರೆಗೂ ಯಾವುದೇ ಕಾನೂನು ಕ್ರಮಗಳನ್ನು ಜರುಗಿಸದೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, , ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಗಳಾದ ಅಯೂಬ್ ಖಾನ್, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಕೆ.ಮರೀಗೌಡ, ಅಕ್ಬರ್ ಅಲೀಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಬೀರಿಹುಂಡಿ ಬಸವಣ್ಣ, ಸುರೇಶ್, ಬಸವರಾಜು, ಕೆ.ಹರೀಶ್ ಗೌಡ, ಕೆ.ಎಸ್.ಶಿವರಾಮ್, ಶಿವು, ಎನ್.ಆರ್.ನಾಗೇಶ್, ಈಶ್ವರ್ ಚಕ್ಕಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Similar News