19.20.21: ನಾಡಿನ ಅಂಕಿ-ಕಾಡಿನ ಬೆಂಕಿ

Update: 2023-02-26 11:08 GMT

ಹರಿವು, ನಾತಿಚರಾಮಿ, ಆ್ಯಕ್ಟ್ 1978 ಚಿತ್ರಗಳ ಮೂಲಕ ಈಗಾಗಲೇ ಕನ್ನಡ ಸಿನೆಮಾ ಲೋಕದಲ್ಲಿ ತನ್ನದೇ ಭಿನ್ನ ಮಾರ್ಗವೊಂದನ್ನು ಕಂಡುಕೊಂಡವರು ಖ್ಯಾತ ನಿರ್ದೇಶಕ ಮಂಸೋರೆ. ಹರಿವು, ನಾತಿಚರಾಮಿ ಚಿತ್ರಗಳು ವಿಮರ್ಶಕರಿಂದ ಮೆಚ್ಚುಗೆ ಗಳಿಸಿವೆ ಮಾತ್ರವಲ್ಲ, ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ‘ಆ್ಯಕ್ಟ್ 1978’ ಚಿತ್ರದಲ್ಲಿ ಗಂಭೀರ ವಿಷಯವನ್ನು, ಥ್ರಿಲ್ಲರ್ ನಿರೂಪಣೆಯ ಮೂಲಕ ಎಲ್ಲ ವರ್ಗದ ಪ್ರೇಕ್ಷಕರಿಗೆ ತಲುಪಿಸಿದರು. ಈ ಚಿತ್ರದ ‘ಗೀತಾ’ ಪಾತ್ರ ಬೇರೆ ಬೇರೆ ಕಾರಣಗಳಿಗಾಗಿ ಚರ್ಚೆಗೊಳಗಾಯಿತು. ಮಧ್ಯಮ ವರ್ಗದ ತಲ್ಲಣಗಳನ್ನು ಅವರು ಮೂರು ಚಿತ್ರಗಳಲ್ಲಿ ಬೇರೆ ಬೇರೆ ದಾರಿಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.ಈ ಎಲ್ಲ ಕಾರಣ ಗಳಿಗಾಗಿ ಮಂಸೋರೆಯವರ ‘19.20.21’ ಚಿತ್ರ ಬಹು ನಿರೀಕ್ಷೆಯನ್ನು ಹುಟ್ಟಿಸಿ ಹಾಕಿದೆ. ಬಿಡುಗಡೆ ಯಾಗಿರುವ ಟ್ರೇಲರ್‌ಗಳು ಪ್ರೇಕ್ಷಕರನ್ನು ಈಗಾಗಲೇ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಕಾಡನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಹಲವು ಚಿತ್ರಗಳು ಬಂದಿವೆ. ಕಾಲ ಕಾಲಕ್ಕೆ ಅದುಬೇರೆ ಬೇರೆ ಆಯಾಮಗಳ ಮೂಲಕ ಪ್ರೇಕ್ಷಕರನ್ನು ತಲುಪಿವೆ. ಒಂದು ಕಾಲದಲ್ಲಿ ಕಾಡಿನ ಸಿನೆಮಾ ಎಂದರೆ ಮನಃಪಟಲದಲ್ಲಿ ಕಾಡು ಪ್ರಾಣಿಗಳು ಇಳಿದು ಬರುತ್ತಿತ್ತು. ಈಗ ಕಾಡು ತನ್ನ ಗುಣವನ್ನುಬದಲಿಸಿಕೊಂಡಿದೆ. ನಾಡಿನ ರಾಜಕೀಯ ಕಾಡಿನ ಒಳಗೂ ನುಗ್ಗಿದೆ. ಕಾಡಿನ ರುದ್ರ ರಮಣೀಯ ಸೌಂದರ್ಯವನ್ನು ನಾಡಿನ ಕ್ರೌರ್ಯ ಕೆಂಪಾಗಿಸಿದೆ. ಕಾಡು ಮತ್ತು ನಾಡಿನ ನಡುವಿನ ಈ ಸಂಘರ್ಷ ವನ್ನು ‘19.20.21’ ಹೆಸರಿನಲ್ಲಿ ಈ ಬಾರಿ ಮಂಸೋರೆ  ಪರದೆಗಿಳಿಸುವ ಪ್ರಯತ್ನ ನಡೆಸಿದ್ದಾರೆ. ಕನ್ನಡ ಸಿನೆಮಾಗಳ ರಮ್ಯ ಲೋಕಕ್ಕೆ ಮಂಸೋರೆ ಕಾಡಿನ ‘ಕಿಚ್ಚ’ನ್ನು ಹಚ್ಚಿದ್ದಾರೆ. ಕಾಡು ಮತ್ತು ಆದಿವಾಸಿಗಳ ಬದುಕನ್ನು ಮುಂದಿಟ್ಟುಕೊಂಡು ಕೆಲವು ವಿಭಿನ್ನ ಚಿತ್ರಗಳು ಕನ್ನಡದಲ್ಲಿ ಬಂದಿವೆ.

ಕೇಸರಿ ಹರವು ಅವರ ‘ಭೂಮಿ ಗೀತೆ’ಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಆದರೆ ಮಂಸೋರೆ ಕೈಗೆತ್ತಿಕೊಂಡ ಕಾಡು ಭೂಮಿಗೀತಕ್ಕಿಂತಲೂ ಭಿನ್ನವಾದುದು. ಕಾಡಿನ ಮುಗ್ಧ ಬದುಕಿನ ಮೇಲೆ ಎರಗುತ್ತಿರುವ ನಾಡಿನ ಮೃಗಗಳ ಕಡೆಗೆ ಅವರು ತಮ್ಮ ಕ್ಯಾಮರಾ ಕಣ್ಣನ್ನು ತಿರುಗಿಸಿದ್ದಾರೆ. ನಕ್ಸಲ್ ಕಾರ್ಯಾಚರ ಣೆಯ ಮರೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುದಮನದ ಕಡೆಗೆ ಗಮನ ಹರಿಸಿದ್ದಾರೆ. ಶ್ರೀಸಾಮಾನ್ಯರ ಗಾಯಗಳ ಕಡೆಗೆ ಬೆಳಕು ಚೆಲ್ಲುವ ಇಂತಹ ಪ್ರಯತ್ನಗಳು ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಕರ್ನಾಟಕದಲ್ಲಿ ಯಾಕೆ ನಡೆಯುತ್ತಿಲ್ಲ ಎನ್ನುವ ಪ್ರಶ್ನೆಗಳಿಗೆ ಮಂಸೋರೆ ಉತ್ತರಿಸಲು ಹೊರಟಂತಿದೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಪ್ರೇಕ್ಷಕರೇ ನಿರ್ಧರಿಸಬೇಕು. 

ಪಶ್ಚಿಮ ಘಟ್ಟದಿಂದ ಆದಿವಾಸಿಗಳ ಒಕ್ಕಲೆಬ್ಬಿಸು ವಿಕೆಯ ಪ್ರಕ್ರಿಯೆ ಪಡೆಯುತ್ತಿರುವ ರಾಜಕೀಯ ಬಣ್ಣ, ನಕ್ಸಲ್ ಕಾರ್ಯಾಚರಣೆಯ ದುರ್ಬಳಕೆ, ಅದಕ್ಕೆ ಬಲಿಪಶುವಾಗುವ ಒಬ್ಬ ಯುವಕನ ಕತೆಯೇ ಚಿತ್ರದ ಕೇಂದ್ರವಾಗಿದೆ. ಕೂಡುಮಲೆ ಎನ್ನುವ ಕಾಡು ಪ್ರದೇಶದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅದನ್ನು ವಿರೋಧಿಸುವ ವಿದ್ಯಾರ್ಥಿ ಯೊಬ್ಬನನ್ನು ‘ನಕ್ಸಲ್’ ಆರೋಪದಲ್ಲಿ ಬಂಧಿಸಲಾಗುತ್ತದೆ. ವ್ಯವಸ್ಥೆ ಆತನನ್ನು ನಕ್ಸಲ್ ಹೆಸರಿನಲ್ಲಿ ಮುಗಿ 
ಸುವುದಕ್ಕೆ ಯತ್ನಿಸುವ ಸಂದರ್ಭದಲ್ಲಿ, ಪತ್ರಕರ್ತರ, ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರ ತಂಡ ಅದನ್ನು ತಡೆದು ನ್ಯಾಯ ಕೊಡಲು ಪ್ರಯತ್ನಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿ ನಲ್ಲಿ ನಡೆದ ಸತ್ಯ ಘಟನೆಯ ಆಧಾರದಲ್ಲಿ ಮಂಸೋರೆ ‘19.20.21’ ಚಿತ್ರವನ್ನು ಕಟ್ಟಿದ್ದಾರೆ. ಇಲ್ಲಿ ಸಿನೆಮಾ ಎರಡು ರೀತಿಯಲ್ಲಿ ಬೆಳೆಯುತ್ತದೆ.

ಒಂದೆಡೆ ಕಾಡಿನಲ್ಲಿ ನಕ್ಸಲ್ ಕಾರ್ಯಾಚರಣೆಯ ಹೆಸರಿನಲ್ಲಿ ಆದಿವಾಸಿಗಳ ಮೇಲೆ ನಕ್ಸಲ್ ನಿಗ್ರಹ ದಳದ ದೌರ್ಜನ್ಯ, ಅರಣ್ಯಾಧಿಕಾರಿಗಳ ದಬ್ಬಾಳಿಕೆ ಯನ್ನು ನಿರೂಪಿಸಲಾಗಿದೆ. ಮಗದೊಂದೆಡೆ ವಿದ್ಯಾರ್ಥಿ ಮಂಜುವಿಗೆ ನ್ಯಾಯ ದೊರಕಿಸಲು ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿರು ತ್ತದೆ. ಕತೆಯನ್ನು ನಿರೂಪಿಸಲು ‘ಫ್ಲ್ಯಾಶ್ ಬ್ಯಾಕ್’ ತಂತ್ರವನ್ನು ಅನುಸರಿಸಲಾಗಿದೆ. ಈ ಚಿತ್ರದ ದೊಡ್ಡ ಸಮಸ್ಯೆಯೇ ‘ಚಿತ್ರ-ಕತೆ’. ವರದಿಗಳನ್ನು ಆಧರಿಸಿ ಚಿತ್ರಕತೆಯನ್ನು ಹೆಣೆ ಯಲಾಗಿದೆ. ವರದಿಗಳ ಹಲವು ಚೂರುಗಳನ್ನು ಒಂದಾಗಿ ಜೋಡಿಸುವ ಪ್ರಯತ್ನ ಇಲ್ಲಿ ನಡೆದಿದೆ. ಚಿತ್ರದ ಕತೆಗೆ ಸ್ಪಷ್ಟವಾದ ಒಂದು ಹರಿವು ಇಲ್ಲ. ಆದುದರಿಂದಲೇ, ಆದಿವಾಸಿ ಪಾತ್ರಗಳು ಆಯಾ ಘಟನೆಗಳಿಗೆ, ದೃಶ್ಯಗಳಿಗೆ ಸೀಮಿತವಾಗಿ ಬಂದು ಹೋಗುತ್ತವೆ. ಅವುಗಳು ಪೋಷಣೆಗಳಿಲ್ಲದೆ ಸೊರಗಿವೆ. ಪೊಲೀಸರು, ನಕ್ಸಲ್ ನಿಗ್ರಹ ತಂಡವನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಆಗಿ ತೋರಿಸಲಾಗಿದೆ.

ಬೇರೆ ಬೇರೆ ಇಸವಿಗಳಲ್ಲಿ ಸಂಭವಿಸುವ ಘಟನೆಗಳನ್ನು ನಿರೂಪಿಸುವ ಸಂದರ್ಭದಲ್ಲೂ, ಅದು ಪ್ರೇಕ್ಷಕರನ್ನು ಅನಗತ್ಯವಾಗಿ ಗೊಂದಲಕ್ಕೀಡು ಮಾಡುತ್ತದೆ. ವರದಿಗಳ ಚೂರುಗಳನ್ನೇ ಯಥಾವತ್ ಸಿನೆಮಾಕ್ಕಿಳಿಸಿದ ಕಾರಣದಿಂದ, ಹಲವು ಸಂದರ್ಭದಲ್ಲಿ ‘ಸಾಕ್ಷ್ಯ ಚಿತ್ರ’ದ ಅನುಭವವನ್ನು ನೀಡುತ್ತದೆ. 

ಛಾಯಾಗ್ರಹಣ ಅದ್ಭುತವಾಗಿ ಮೂಡಿಬಂದಿದೆ ಯಾದರೂ ಆದಿವಾಸಿಗಳ ಬದುಕು, ಭಾವನೆ, ಬವಣೆಗಳನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಸೋಲುತ್ತದೆ. ಕೋರ್ಟ್ ರೂಂನಲ್ಲಿ ನಡೆಯುವ ಬೆಳವಣಿಗೆಗಳನ್ನೂ ಇನ್ನಷ್ಟು ಪರಿಣಾಮ ಕಾರಿಯಾಗಿಸುವ ಅವಕಾಶ ಸಿನೆಮಾಕ್ಕಿತ್ತು. ಅದು ಸಿನೆಮಾವನ್ನು ಇನ್ನಷ್ಟು ಶಕ್ತಿ ಶಾಲಿಯಾಗಿಸಬಹುದಿತ್ತು. ಪತ್ರಕರ್ತರ, ಸಾಮಾಜಿಕ ಹೋರಾಟಗಾ ರರ ಪಾತ್ರಗಳೂ ನಿರೀಕ್ಷೆಯನ್ನು ತಲುಪುವುದಿಲ್ಲ. ಪಾತ್ರಗಳ ಸಂಭಾಷಣೆಗಳು ಕೃತಕವಾಗಿವೆ. ಕೋರ್ಟ್ ರೂಂನಲ್ಲಿ ನಡೆಯುವ ಮಾತುಕತೆ ಗಳೂ ಅಲ್ಲಲ್ಲಿ ಭಾಷಣಗಳಾಗುತ್ತವೆ. ಸಿನೆಮಾದ ಜೀವಾಳವೇ ಕಾಡು ಮತ್ತು ‘ಕೋರ್ಟ್ ರೂಂ’ ಆಗಿರುವುದರಿಂದ ಅದನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ಬಳಸುವ ಅವಕಾಶ ನಿರ್ದೇಶಕರಿಗಿತ್ತು.

ಚಿತ್ರಕತೆಯ ಮಿತಿ ಆ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಸಂಗೀತ ಚಿತ್ರದ ಹೆಗ್ಗಳಿಕೆಗಳಲ್ಲಿ ಒಂದು. ಕುತ್ಲೂರಿನಲ್ಲಿ ನಡೆದ ಘಟನೆಗಳ ಹಿಂದು ಮುಂದು ಗೊತ್ತಿಲ್ಲದ ಪ್ರೇಕ್ಷಕನೊಬ್ಬ ಏಕಾಏಕಿ ಬಂದು ಸಿನೆಮಾ ಥಿಯೇಟರ್‌ನಲ್ಲಿ ಕುಳಿತು ಕೊಂ ಡಾಗ ಅವನನ್ನು ಸಿನೆಮಾ ಸಲೀಸಾಗಿ ತಲುಪುವ ಸಾಧ್ಯತೆಯ ಬಗ್ಗೆ ಅನುಮಾನಗಳಿವೆ. ಇವೆಲ್ಲವುಗಳನಡುವೆಯೂ ಒಂದು ಜ್ವಲಂತ ವಿಷಯವನ್ನು ಕೈಗೆತ್ತಿಕೊಂಡು ಅದನ್ನು ಕನ್ನಡಿಗರ ಮುಂದಿಡುವ ಮಂಸೋರೆ ಪ್ರಯತ್ನ ಕನ್ನಡದ ಪಾಲಿಗೆ ತೀರಾ ಹೊಸತು. ಇದೊಂದು ದಾಖಲಾರ್ಹ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News