ಹವಾಯಿ ಚಪ್ಪಲಿ ಧರಿಸುವ ಕಡು ಬಡವರೂ ವಿಮಾನದಲ್ಲಿ ಪ್ರಯಾಣಿಸಬೇಕು: ಪ್ರಧಾನಿ ಮೋದಿ

Update: 2023-02-27 10:07 GMT

ಶಿವಮೊಗ್ಗ: '2014ರ ಮೊದಲು ದೇಶದ ದೊಡ್ಡ ನಗರಗಳಲ್ಲಿ ಮಾತ್ರ ವಿಮಾನನಿಲ್ದಾಣ ಇರುತ್ತಿತ್ತು. ಬಿಜೆಪಿ ಸರ್ಕಾರವು 9 ವರ್ಷಗಳಲ್ಲಿ ದೇಶದಲ್ಲಿ 74 ಹೊಸ ವಿಮಾನನಿಲ್ದಾಣಗಳನ್ನು ನಿರ್ಮಿಸಿತು. ಹವಾಯಿ ಚಪ್ಪಲಿ ಧರಿಸುವ ಕಡು ಬಡವರೂ ಕೂಡ ವಿಮಾನದಲ್ಲಿ ಪ್ರಯಾಣಿಸಬೇಕು.  ಇದು ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ಅವರು ಇಂದು ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ 449 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು  ಲೋಕಾರ್ಪಣೆಗೊಳಿಸಿ ಮಾತನಾಡಿದರು.  

'ಶಿವಮೊಗ್ಗದ ಜನರ ಬಹುಕಾಲದ ಕನಸು ನನಸಾಗಿದೆ. ಕರ್ನಾಟಕ ಸಂಪ್ರದಾಯ ಮತ್ತು ಪರಂಪರೆಯ ಅದ್ಭುತ ಸಂಗಮ. ಇದು ಕೇವಲ ವಿಮಾನ ನಿಲ್ದಾಣವಲ್ಲ, ಶಿವಮೊಗ್ಗ ಜನರ ಹೊಸ ಕನಸಿನ ಆರಂಭ' ಎಂದು ಹೇಳಿದರು. 

'ಡಬಲ್ ಎಂಜಿನ್ ಸರ್ಕಾರದ ಮೂಲಕ ಕರ್ನಾಟಕದ ವಿಕಾಸದ ಅಭಿಯಾನವು ಇನ್ನಷ್ಟು ಮುಂದೆ ಸಾಗಲಿದೆ. ನಾವು ಜೊತೆಯಾಗಿ ಸಾಗಬೇಕಿದೆ. ಜೊತೆಯಾಗಿ ಸಾಗುತ್ತ, ಈ ರಾಜ್ಯದ ಮತ್ತು ಶಿವಮೊಗ್ಗದ ಜನರ ಕನಸು ನನಸು ಮಾಡಬೇಕಿದೆ. ಶಿವಮೊಗ್ಗದ ಮಾತೆಯರ ಜೀವನ ಸುಲಭವಾಗಿಸಲು ಜಲ್‌ ಜೀವನ್‌ ಯೋಜನೆಯಡಿ ಡಬಲ್‌ ಎಂಜಿನ್‌ ಸರ್ಕಾರವು 4,43,510 ಮನೆಗಳಿಗೆ ಹೊಸ ನಳದ ಸಂಪರ್ಕ ನೀಡಿದೆ' ಎಂದು ವಿವರಿಸಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರು ಈ ಸಂದರ್ಭ ವೇದಿಕೆಯಲ್ಲಿದ್ದರು.

Similar News