×
Ad

ಇಡೀ ವಿಶ್ವವೇ ಮೆಚ್ಚಿದ ಆದರ್ಶ ನಾಯಕ ಪ್ರಧಾನಿ ಮೋದಿ: ಬಿ.ಎಸ್.ಯಡಿಯೂರಪ್ಪ

Update: 2023-02-27 15:24 IST

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವವೇ ಮೆಚ್ಚಿರುವಂತಹ ಆದರ್ಶ ನಾಯಕರಾಗಿದ್ದಾರೆ. ಇಂದು ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆಗೆ ಬಂದಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣದ ಉದ್ಘಾಟನೆ ಆಗಬೇಕು. ತಾವೇ ಬಂದು ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಇಂದು ಬಂದು ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. 

ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಈ ನಾಡಿನ ಅಭವೃದ್ಧಿಯ ಕನಸಿನೊಂದಿಗೆ 70ರ ದಶಕದಲ್ಲಿ ಸಾವರ್ಜನಿಕ ಬದುಕಿಗೆ ಪ್ರವೇಶಿಸಿದ ನನ್ನ ರಾಜಕೀಯ ಜೀವನದಲ್ಲಿ ನನಗೆ ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು, ಇಂದಿನ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಶಿವಮೊಗ್ಗಕ್ಕೆ ವಿಮಾನದಲ್ಲಿ ಬಂದಿಳಿದು, ವಿಮಾನ ನಿಲ್ದಾಣ ಉದ್ಘಾಟಿಸಿರುವುದು ಜಿಲ್ಲೆಯ ಜನರ ಪಾಲಿಗೆ ಸಾರ್ಥಕತೆಯ ದಿನವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ, ಇಡೀ ಮಲೆನಾಡಿನ ಹಲವಾರು ಕನಸುಗಳು ನನಸಾಗುವ ಶುಭ ಸಂಕೇತವಾಗಿದೆ' ಎಂದು ಹೇಳಿದರು.

'ಇಂದಿನಿಂದ ಅಭಿವೃದ್ಧಿಯು ಮತ್ತಷ್ಟು ವೇಗ ಪಡೆದು ಆಗಸದೆತ್ತರಕ್ಕೆ ಏರುವ ಶುಭ ಸೂಚನೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಜನ ಅದರಲ್ಲೂ ಶಿಕಾರಿಪುರದ ಜನತೆ ನನಗೆ ಧೈರ್ಯ ತುಂಬಿ, ಶಾಸಕನಾಗಿ ಆಯ್ಕೆ ಮಾಡಿ ನಾಡಿನ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಮೋದಿಯವರ ಆಶೀರ್ವಾದದಿಂದ ಸಂಸದನಾಗಿ, ವಿಧಾನ ಪರಿಷತ್​ ಸದಸ್ಯನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಕನ್ನಡ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನಾನು ಈ ನಾಡಿನ ಜನರಿಗೆ ಋಣಿಯಾಗಿದ್ದೇನೆ. ಸಂಸದ ಬಿ ವೈ ರಾಘವೇಂದ್ರ ಅವರ ವಿಶೇಷ ಕಾಳಜಿ, ಪ್ರಯತ್ನದಿಂದ ಶಿವಮೊಗ್ಗದ ವಿಮಾನ ನಿಲ್ದಾಣದ ಕಾರ್ಯ ಇಷ್ಟೊಂದು ತ್ವರಿತವಾಗಿ ಮುಗಿದಿದೆ' ಎಂದರು.

'ನಾನು 2014ರಲ್ಲಿ ಪ್ರಧಾನಿ ಮೋದಿಯವರ ಒತ್ತಾಸೆ ಮೇರೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ನಿಂತಾಗ ಮೂರೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ, ಜನ ಸೇವೆ ಮಾಡುವಂತಹ ಅವಕಾಶವನ್ನು ಮಾಡಿಕೊಟ್ಟಿದ್ದರು. 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು 7 ವರ್ಷ ಮಾತ್ರ ಅಧಿಕಾರದಲ್ಲಿದ್ದೆ, ಈ ಅವಧಿಯಲ್ಲಿ ನಾನು ನಾಡಿನಾದ್ಯಂತ ಸಂಚರಿಸಿ ಸರ್ವರಿಗೂ ಸಮಪಾಲು, ಸಮಬಾಳು ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಲಸ ಮಾಡಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಜೀ ಅವರ ಆಶೀರ್ವಾದವೂ ಕಾರಣವಾಗಿದೆ. ಪ್ರಧಾನಿ ಮೋದಿಯವರಿಗೆ ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ನಾಡು ನಮ್ಮ ಕರ್ನಾಟಕವೇ ಪ್ರೇರಣೆಯಾಗಿದೆ' ಎಂದರು.

Similar News