×
Ad

2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?

Update: 2023-02-27 17:09 IST

ಚನ್ನಪಟ್ಟಣ(ರಾಮನಗರ): 'ಮುಂಬರಲಿರುವ 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ. ಆದರೆನಾನು ರಾಜಕೀಯಕ್ಕೆ ವಿದಾಯ ಹೇಳುತ್ತಿಲ್ಲ' ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಇಂದು ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಬಮೂಲ್‌ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, 'ಈ ಬಾರಿ ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ. 2028ರ ಚುನಾವಣೆಗೆ ನಿಮ್ಮಲ್ಲೇ ಒಬ್ಬರು ಅಭ್ಯರ್ಥಿ ಆಗಬೇಕು. ಇದು ನನ್ನ ಕೊನೆಯ ಚುನಾವಣೆ' ಎಂದು ಹೇಳಿದರು. 

'2018ರ ಚುನಾವಣೆಯಲ್ಲಿ ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ನಿಲ್ಲಿ ಅಂದರು. ಇನ್ನು ಕೆಲವರು ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡ್ತಿದ್ದಾರೆ ಎಂದು ಹೇಳಿದ್ದು, ಈಗ ಅವರ ಹೆಸರು ಹೇಳಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ.? ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ. ಎಲ್ಲ ಕಾರ್ಯತರ್ಯರು ಒಗ್ಗಟ್ಟಾಗಬೇಕು' ಎಂದು ಕರೆ ನೀಡಿದರು.

''ವಿಧಾನಸಭೆಗೆ ಕೊನೆಯ ಚುನಾವಣೆ''

ಈ ಕುರಿತು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ''2028ಕ್ಕೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸುತ್ತೇನೆ. ಈ ಸಲ ಐದು ವರ್ಷದ ಸರ್ಕಾರ ತಂದು ಜನತೆಯ ಬದುಕಿಗೆ ಭರವಸೆ ಈಡೇರಿಸುತ್ತೇನೆ. ನಂತರ ನಾನು ರೆಸ್ಟ್ ತೆಗೆದುಕೊಳ್ಳ ಬೇಕಲ್ಲಾ. ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಅಂತ ಹೇಳಿದ್ದೇನೆ ಅಷ್ಟೇ. ನಾನು ರಾಜಕೀಯಕ್ಕೆ ವಿದಾಯ ಹೇಳುತ್ತಿಲ್ಲ'' ಎಂದು ಸ್ಪಷ್ಟಪಡಿಸಿದರು. 

Similar News