ಜೋಡಿ ಕೊಲೆ ಸಂದರ್ಭದಲ್ಲಿ ಸಕಾಲಕ್ಕೆ ಬಾರದ ಆ್ಯಂಬುಲೆನ್ಸ್: ಜೆಡಿಎಸ್ ವಾಗ್ದಾಳಿ

''ಲಜ್ಜೆಗೆಟ್ಟ ಸರಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ''

Update: 2023-02-27 12:31 GMT

ಬೆಂಗಳೂರು, ಫೆ. 27: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತವಾಗಿದ್ದು, ತುರ್ತು ಚಿಕಿತ್ಸೆಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ. ಆರೋಗ್ಯ ಸಚಿವ, ‘ಮೋಜುಗಾರ-ಸೊಗಸುಗಾರ' ಡಾ.ಸುಧಾಕರ್ ಅವರೆ, ಉತ್ಸವಗಳನ್ನು ಮಾಡಲು ಸಮಯ-ಶಕ್ತಿ ಮೀಸಲಿಟ್ಟು, ಆರೋಗ್ಯ ಸೇವೆ ಮರೆತಿದ್ದೀರಿ’ ಎಂದು ಜೆಡಿಎಸ್ ಟೀಕಿಸಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರೂ ತಾವೇ ಆಗಿರುವಾಗ, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೆ ಇರುವುದು ದುರಂತವಲ್ಲದೆ ಇನ್ನೇನು? ರಾಜ್ಯದ ‘ಪ್ರಭಾವಿ' ಸಚಿವರಾಗಿ ಕನಿಷ್ಠ ಆರೋಗ್ಯ ಸೇವೆ ಒದಗಿಸಲು ಸಾಧ್ಯವಿಲ್ಲದಿರುವುದು ನಾಚಿಕೆಗೇಡು. ರಾಜ್ಯ ಬಿಜೆಪಿ ಸರಕಾರಕ್ಕಂತೂ ಮರ್ಯಾದೆ ಇಲ್ಲ’ ಎಂದು ವಾಗ್ದಾಳಿ ನಡೆಸಿದೆ.

‘ವಾರದ ಹಿಂದೆ ದೊಡ್ಡವೆಂಗಲದಲ್ಲಿ ನಡೆದ ಜೋಡಿ ಕೊಲೆ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸೇವೆ ದೊರೆತಿದ್ದರೆ ಚಾಕು ಇರಿತಕ್ಕೆ ಒಳಗಾದವರನ್ನು ಉಳಿಸಿಕೊಳ್ಳಬಹುದಿತ್ತು. ಇದು ಸೇರಿ ತಾಲೂಕಿನಲ್ಲಿ ಆ್ಯಂಬುಲೆನ್ಸ್ ಸೇವೆ ಇದ್ದೂ ಇಲ್ಲದಂತಾಗಿರುವುದು ಆರೋಗ್ಯ ಸಚಿವಾಯಲದ ನಿಷ್ಕ್ರಿಯತೆ ಎದ್ದು ಕಾಣುವಂತಿದೆ’ ಎಂದು ಜೆಡಿಎಸ್ ದೂರಿದೆ.

‘ಇದ್ದ ಆ್ಯಂಬುಲೆನ್ಸ್ ಗಳಲ್ಲಿ ಕೆಲವು ದುರಸ್ತಿಗಾಗಿ ಗ್ಯಾರೇಜ್ ಸೇರಿದ್ದವು. ತಿಂಗಳುಗಳ ನಂತರವೂ ಅವೆಲ್ಲ ಸೇವೆಗೆ ವಾಪಸ್ಸಾಗಿಲ್ಲ. ಈ ಸಂಗತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೌಕರರೇ ತಿಳಿಸಿದ್ದಾರೆ. ಜನರ ಪ್ರಾಣ ರಕ್ಷಣೆ ಇಷ್ಟು ಲಘುವಾದ ವಿಷಯವೆ? ಲಜ್ಜೆಗೆಟ್ಟ ಸರಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ ಎಂಬಂತಾಗಿದೆ’ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

Similar News