ಸಿದ್ದರಾಮಯ್ಯರಿಗೆ ಕಾಂಗ್ರೆಸ್ ನೆಂಟರ ಮನೆ: ಸಚಿವ ಆರ್.ಅಶೋಕ್ ಲೇವಡಿ

Update: 2023-02-27 13:32 GMT

ಬೆಂಗಳೂರು, ಫೆ. 27: ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸ್ವಂತ (ಕ್ಷೇತ್ರ)ಮನೆಯೇ ಇಲ್ಲ. ಹೀಗಾಗಿಯೇ ಅವರು ನೆಂಟರ ಮನೆಗೆ ಹೋಗಿಬರುತ್ತಿದ್ದು, ಕಾಂಗ್ರೆಸ್ ಪಕ್ಷವೂ ಅವರಿಗೆ ನೆಂಟರ ಮನೆ ಇದ್ದಂತೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 40 ವರ್ಷಗಳಷ್ಟು ದೀರ್ಘಕಾಲ ರಾಜಕೀಯ ಮಾಡಿದವರಿಗೆ ಕ್ಷೇತ್ರ ಹುಡುಕುವ ಸ್ಥಿತಿ ಬರಬಾರದಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕ್ಷೇತ್ರ ಹುಡುಕಾಟದಲ್ಲಿದ್ದು, ಅವರ ಕುಟುಂಬದ ಸದಸ್ಯರು ಕ್ಷೇತ್ರಕ್ಕಾಗಿ ದೇವರ ಮೊರೆ ಹೋಗಿದ್ದಾರೆ’ ಎಂದು ಟೀಕಿಸಿದರು.

‘ಪ್ರವಾಹ ಬಂದಾಗ ಬಾರದ ಮೋದಿ ಈಗ ರಾಜ್ಯಕ್ಕೆ ಬರುತ್ತಿದ್ದಾರೆಂಬ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಪ್ರವಾಹ ಬಂದಿತ್ತು. ಆಗ ಅವರು ಎಲ್ಲಿದ್ದರು ಎಂದು ಗೊತ್ತಿದೆ. ಮನಮೋಹನ್ ಸಿಂಗ್ ಸರಕಾರ ಎಷ್ಟು ಮೊತ್ತದ ಪರಿಹಾರ ನೀಡಿತ್ತು, ಮೋದಿ ಸರಕಾರ ಎಷ್ಟು ಮೊತ್ತದ ಪರಿಹಾರ ನೀಡಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಅಶೋಕ್ ಸವಾಲು ಹಾಕಿದರು.

‘ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ಯೋಗಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ರಾಜ್ಯಕ್ಕೆ ಬರಲಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ ಎಂದು ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕುವವರು ಮಾತ್ರವೇ ಇದ್ದಾರೆ’ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

‘ಹಕ್ಕುಪತ್ರ ವಿತರಣೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ. ಬೇರೆಯವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಸಿಎಂ ವಿವೇಚನೆಗೆ ಬಿಟ್ಟದ್ದು, ಬಸವರಾಜ ಬೊಮ್ಮಾಯಿ ಅವರು ತಮ್ಮ ವಿವೇಚನೆ ಆಧರಿಸಿ ಉಸ್ತುವಾರಿ ಸಚಿವರ ನೇಮಕ ಮಾಡಲಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹೊಸದಿಲ್ಲಿ ಡಿಸಿಎಂ ಸಿಸೋಡಿಯ ಬಂಧನಕ್ಕೂ ಕೇಂದ್ರ ಸರಕಾರಕ್ಕೂ ಸಂಬಂಧವಿಲ್ಲ. ಸಿಬಿಐ, ಆದಾಯ ತೆರಿಗೆ(ಐಟಿ) ಸ್ವತಂತ್ರ ತನಿಖಾ ಸಂಸ್ಥೆಗಳು. ಈ ಹಿಂದೆ ಬಿಎಸ್‍ವೈ ಅಧಿಕಾರಾವಧಿಯಲ್ಲಿ ಅವರನ್ನು ಬಂಧಿಸಿದ್ದರು. ಬಿಜೆಪಿ ಯಾವುದೇ ಸಂದರ್ಭದಲ್ಲಿಯೂ ಸೇಡಿನ ರಾಜಕಾರಣ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 

Similar News