ಪ್ರಧಾನಿಗೆ 6 ಬಹಿರಂಗ ಪ್ರಶ್ನೆಗಳು | ಉತ್ತರ ಕೊಡದೆ ಪಲಾಯನ ಮಾಡುತ್ತಿರುವ ಮೋದಿ: ಸುರ್ಜೇವಾಲಾ ಟೀಕೆ

Update: 2023-02-27 13:25 GMT

ಬೆಂಗಳೂರು, ಫೆ.27: ‘ಚುನಾವಣಾ ಸಮಯದಲ್ಲಿ ರಾಜ್ಯದ ಸ್ಥಳೀಯ ನಾಯಕತ್ವದ ಕೊರತೆ ಮತ್ತು ವೈಫಲ್ಯವನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ, ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡಿ, ಸುಳ್ಳು ಮಾಹಿತಿಗಳ ಮುಖಾಂತರ ಜನಸಾಮಾನ್ಯರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿಗಾರಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈವರೆಗೆ ರಾಜ್ಯ ಬಿಜೆಪಿ ಸರಕಾರದ ವೈಫಲ್ಯಗಳಿಗೆ, ಭ್ರಷ್ಟಾಚಾರಗಳಿಗೆ, ಆಡಳಿತ ಯಂತ್ರದ ಕುಸಿತಕ್ಕೆ, ಉದ್ಯೋಗದ ಸಮಸ್ಯೆಗೆ, ಬೆಲೆ ಏರಿಕೆಗೆ ಮತ್ತು ಹಗರಣಗಳಿಗೆ ಉತ್ತರ ಕೊಡದ ಪ್ರಧಾನಿ ನರೇಂದ್ರ ಮೋದಿ, ಜನರ ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿಗೆ 6 ಬಹಿರಂಗ ಪ್ರಶ್ನೆಗಳು:

1.ಬಿಜೆಪಿ ರಾಜ್ಯದ ಉದ್ದಗಲಕ್ಕೂ ‘ಬಿಜೆಪಿಯೆ ಭರವಸೆ’ ಅನ್ನೊ ಅಭಿಯಾನ ನಡೆಸುತ್ತಿದ್ದು 40 ಪರ್ಸೆಂಟ್ ಸರಕಾರ ತನ್ನ ಅಕ್ರಮ ಗಳಿಕೆಯ ಹಣದಲ್ಲಿ ಎಲ್ಲ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಚುನಾವಣೆಗೆ ಮುಂದಾಗಿದೆ. ಕಳೆದ ಬಾರಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.10ರಷ್ಟು ಭರವಸೆಗಳನ್ನೂ ಪೂರೈಸಿಲ್ಲ ಯಾಕೆ? ಈ ಬಗ್ಗೆ ನೀವು ಪ್ರಚಾರ ಸಭೆಯಲ್ಲಾದರೂ ಜನರಿಗೆ ಉತ್ತರದಾಯಿ ಆಗಬಲ್ಲಿರಾ? ಎಂದು ಅವರು ಕೇಳಿದ್ದಾರೆ.

2.ನಿಮ್ಮ ರೋಡ್ ಶೋ(ಕಿ)ಗಾಗಿ ಇಂದು ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬೆಳಗಾವಿಯಲ್ಲಿ ರದ್ದು ಮಾಡಲಾಗಿದೆ. ಈ ಬಗ್ಗೆ ನೀವು ಉತ್ತರಿಸುವಿರಾ? ಕರ್ನಾಟಕದ 13 ಸಾವಿರ ಅನುದಾನ ರಹಿತ ಶಾಲೆಗಳ ಒಕ್ಕೂಟ ‘ರುಪ್ಸ’ ಬಿಜೆಪಿ ಸರಕಾರದಲ್ಲಿ 40 ಪರ್ಸೆಂಟ್ ಲಂಚ ನೀಡದೆ ಯಾವುದೆ ಸೇವೆ ಪಡೆಯಲು ಸಾಧ್ಯವಿಲ್ಲ ಎಂದು ತಮಗೆ ಪತ್ರ ಬರೆದು ಆರೋಪ ಮಾಡಿದ್ದರು. ಇದಕ್ಕೆ ತಾವು ಉತ್ತರವೇ ಕೊಟ್ಟಿಲ್ಲ ಯಾಕೆ? ‘ಪರೀಕ್ಷೆ ಪೇ ಚರ್ಚೆ’ ನಡೆಸುವ ತಾವು ‘ಶಿಕ್ಷಣದ ಬಗ್ಗೆ ಚರ್ಚೆಗೆ’ ಯಾವಾಗ ಬರುತ್ತೀರಾ? ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ.

3.ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷ ಸರಕಾರಿ ಮತ್ತು ಏಳುವರೆ ಲಕ್ಷ ಖಾಸಗಿ ಉದ್ಯೋಗಕ್ಕೆ ಅವಕಾಶವಿದ್ದು, ಬಿಜೆಪಿ ಸರಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ನೇಮಕಾತಿ ನಡೆಸುತ್ತಿರುವ ಹುದ್ದೆಗಳ ಹಂಚಿಕೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಶಾಸಕರು ಮತ್ತು ಮಂತ್ರಿಗಳು ಸರಕಾರದ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ. ನಿಮ್ಮದೆ ಪಕ್ಷದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಶಾಸಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಪುತ್ರ ಪಿಎಸ್ಸೈ ನೇಮಕಾತಿ ಹಗರಣದ ನೇರ ರೂವಾರಿ ಎಂದು ಆರೋಪಿಸಿದ್ದರು. ಅದರ ಬಗ್ಗೆನೂ ನಿಮ್ಮ ಭಾಷಣಕಾರರಿಗೆ ಹೇಳಿ ಒಂದು ಉತ್ತರ ಬರೆಸಿ, ಅದನ್ನು ಓದಿ ಹೇಳಿ ನೋಡೋಣ? ಎಂದು ಅವರು ಕೇಳಿದ್ದಾರೆ.

4.ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಒದಗಿಸಿದ್ದ ದೇಶದ ಮಹತ್ತರ ಕಾರ್ಖಾನೆಯಾಗಿತ್ತು. ಈ ಕಾರ್ಖಾನೆಗೆ ಯುಪಿಎ ಸರಕಾರ 2013ರಲ್ಲಿಯೆ ಬಳ್ಳಾರಿಯಲ್ಲಿ 380 ಎಕರೆ ಗಣಿ ಪ್ರದೇಶವನ್ನು ಒದಗಿಸಿತ್ತು. ಆದರೆ, ನಿಮ್ಮ ಸರಕಾರ ಆ ಗಣಿ ಪ್ರದೇಶದ ಉಪಯೋಗವನ್ನೆ ಮಾಡದೆ, ಈಗ ಈ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿದ್ದು ಯಾಕೆ ಅಂತ ಶಿವಮೊಗ್ಗದ ಜನರಿಗೆ ಉತ್ತರಿಸಲ್ಲ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

5.ಕಳೆದ ಚುನಾವಣೆಯ ವೇಳೆ ದೇಶದ ಗೃಹ ಮಂತ್ರಿ ‘ಅಮಿತ್ ಶಾ’ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಜಿಲ್ಲೆಯಲ್ಲಿ 500 ಕೋಟಿ ರೂ.ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಅದಕ್ಕೆ 5 ಪೈಸೆ ನೀಡಿಲ್ಲ ಏಕೆ? ದೇಶದಲ್ಲಿ ಬೆಳೆಸುವ ಉತ್ಕøಷ್ಟ ದರ್ಜೆಯ ಅಡಿಕೆಗೆ ಪ್ರೋತ್ಸಾಹ ನೀಡದೆ, ಹೊರ ದೇಶದಿಂದ ಆಮದಾಗುವ ಅಡಿಕೆ ಮೇಲಿದ್ದ ಆಮದು ಸುಂಕವನ್ನು ಶೇ.10ಕ್ಕೆ ಇಳಿಸಿ ದೇಶಿ ಅಡಿಕೆಯ ಮಾರುಕಟ್ಟೆಯನ್ನು ಭಸ್ಮ ಮಾಡಿದ್ದು ಏಕೆ? ಎಲೆ ಚುಕ್ಕೆ ರೋಗಕ್ಕೆ ನಿಮ್ಮ ಡಬಲ್ ಇಂಜಿನ್ ಸರಕಾರ ಔಷಧ ಕಂಡು ಹಿಡಿಯಲು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಏಕೆ? ಎಂದು ಅವರು ಕೇಳಿದ್ದಾರೆ.

6.ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪದೇ ಪದೇ ರಾಜ್ಯಗಳ ಮಧ್ಯೆ ಮಹಾರಾಷ್ಟ್ರದ ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು ಕಂದಕ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು, ನಮ್ಮ ನಾಡಿನಲ್ಲಿ ಶಾಂತಿ ಭಂಗಪಡಿಸಲು ಯತ್ನಿಸುತ್ತಿರುವವರಿಗೆ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ-ಇಲ್ಲಿ ಯಾರೂ ಅನಾವಶ್ಯಕ್ಷವಾಗಿ ಹಾಗೂ ಉದ್ದೇಶಪೂರ್ವಕವಾಗಿ ಗಡಿ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ನೀವು ಇಂದು ಘೋಷಿಸಿ, ಮಹಾರಾಷ್ಟ್ರದ ಬಿಜೆಪಿ ಶಾಸಕರಿಗೆ ಪಾಠ ಹೇಳಬಲ್ಲಿರಾ? ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ.

Similar News