ಕೃಷ್ಣರಾಜ ಒಡೆಯರ್, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹೆಸರನ್ನು ತಪ್ಪಾಗಿ ಹೇಳಿದ ಪ್ರಧಾನಿ ಮೋದಿ: ವಿಡಿಯೋ ವೈರಲ್

'ಪವನ್ ಖೇರಾರ ಹೇಳಿಕೆ ಮಾತ್ರ ಅಪರಾಧವಾಗಿದ್ದು ಹೇಗೆ?' ಎಂದು ನೆಟ್ಟಿಗರಿಂದ ತರಾಟೆ

Update: 2023-02-27 14:27 GMT

ಬೆಂಗಳೂರು: ಕೃಷ್ಣರಾಜ ಒಡೆಯರ್ ಮತ್ತು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಹೆಸರನ್ನು ತಪ್ಪಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕ್ರೋಶ ವ್ಯಕ್ತವಾಗಿದೆ. 

ಶನಿವಾರ ದಿಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ  ಅವರು, ಸ್ವಾತಂತ್ರ್ಯ ದೊರೆತ ಮೇಲೂ ಮಹಾರಾಜ ಕೃಷ್ಣರಾಜ ಒಡೆಯರ್ ಅವರಿಂದ ಹಿಡಿದು, ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ. ಭಾರತ ರತ್ನ ಎಂ ವಿಶ್ವೇಶ್ವರಯ್ಯ ಭಾರತಕ್ಕೆ ತಮ್ಮ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದರು. ಆದರೆ, ಅವರು ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಹೆಸರನ್ನು ''ಕರಿ ಬಪ್ಪ'' ಎಂದು ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕೃಷ್ಣರಾಜ 'ಅಡಿಯಾರ' ಎಂದು  ತಪ್ಪಾಗಿ ಉ್ಲಲೇಖಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.  

'ಪ್ರಧಾನಿ ನರೇಂದ್ರ ಮೋದಿಯವರು ಇಂದುನಾಲ್ವಡಿ ಕೃಷ್ಣರಾಜ ಒಡೆಯರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಹೆಸರನ್ನು ತಪ್ಪಾಗಿ ಹೇಳಿರುವುದು ಕ್ಷಮ್ಯ ಎಂದಾದರೆ, ಪ್ರಧಾನ ಮಂತ್ರಿಯವರ ಹೆಸರನ್ನು ತಪ್ಪಾಗಿ ಹೇಳಿ ತಕ್ಷಣ ತಿದ್ದಿಕೊಂಡ ಪವನ್ ಖೇರ ಅವರ ಮಾತು ಭಾರತೀಯ ದಂಡ ಸಂಹಿತೆಯ 120B, 153A, 153(1) 500 504, 505(1) (2) ಸೆಕ್ಷನ್ ಪ್ರಕಾರ ಅಪರಾಧವಾಗಿದ್ದು ಹೇಗೆ?' ಎಂದು ಪ್ರಶ್ನಿಸಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ 'ಸರ್ವಾಧಿಕಾರಿ ಎಂದರೆ ಹೀಗೆ ಇರಬೇಕು ಅಲ್ಲವೇ?' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.  

'ಪ್ರಧಾನಿ ಮೋದಿಯವರು ಹೇಗಾದರೂ ತಮ್ಮ ಅನುಕೂಲಕ್ಕಾಗಿ ಕರ್ನಾಟಕದ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ನೆಟ್ಟಿಗರೊಬ್ಬರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇನ್ನು ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ಅಡಿಯಾರ ಎಂದರೆ ಗೃಹ ಸಚಿವ ಅಮಿತ್ ಶಾ, ಕರಿ ಬಪ್ಪ ಎಂಬುದು ಮಾಜಿ ಸಚಿವ ಈಶ್ವರಪ್ಪ ಎಂದು ಬರೆದಿರುವ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ. 

Full View Full View

Similar News