ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷ : ಪ್ರಧಾನಿ ನರೇಂದ್ರ ಮೋದಿ

Update: 2023-02-27 14:55 GMT

ಬೆಳಗಾವಿ, ಫೆ. 27: ‘ರಾಜ್ಯದ ಹಿರಿಯ ನಾಯಕ, 50ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ತಮ್ಮದೆ ಆದ ರೀತಿಯಲ್ಲಿ ಜನತೆಯ ಸೇವೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅವರು ಕಾಂಗ್ರೆಸ್ ಪಕ್ಷದಲ್ಲಿ ಹೆಸರಿಗೆ ಮಾತ್ರ ಅಧ್ಯಕ್ಷರಾಗಿದ್ದು, ರಿಮೋಟ್ ಕಂಟ್ರೋಲ್ ಯಾರ ಕೈಯಲ್ಲಿದೆ ಎಂಬುದು ಇಡೀ ಜಗತ್ತು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಸೋಮವಾರ ನಗರದ ಮಾಲಿನಿ ಸಿಟಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೆ ಕಂತು ಬಿಡುಗಡೆ, ಬೆಳಗಾವಿಯ ರೈಲ್ವೆ ನಿಲ್ದಾಣದ ನವೀಕೃತ ಕಟ್ಟಡ, ಲೋಂಡಾ-ಘಟಪ್ರಭಾ ಡಬ್ಲಿಂಗ್ ಮಾರ್ಗ ಲೋರ್ಕಾಪಣೆ ಹಾಗೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ನಾಯಕರಿಗೆ ಕಾಂಗ್ರೆಸ್ ಯಾವ ರೀತಿ ಅಪಮಾನ ಮಾಡುತ್ತದೆ ಎಂಬುದಕ್ಕೆ ಇತಿಹಾಸವೆ ಸಾಕ್ಷಿ. ಕಾಂಗ್ರೆಸ್‍ನ ಒಂದು ಕುಟುಂಬದ ಎದುರು ಧ್ವನಿ ಎತ್ತಿದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರನ್ನು ಯಾವ ರೀತಿ ಅಪಮಾನ ಮಾಡಲಾಯಿತು. ಇತ್ತೀಚೆಗೆ ಛತ್ತೀಸ್‍ಗಡದಲ್ಲಿ ನಡೆದಂತಹ ಕಾಂಗ್ರೆಸ್ ಸಮಾವೇಶದ ವೇಳೆ ಬಿಸಿಲಿನಲ್ಲಿ ಕೂತಿದ್ದ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೊಡೆಯ ನೆರಳು ಇರಲಿಲ್ಲ. ಬದಲಾಗಿ, ಅವರ ಪಕ್ಕದಲ್ಲಿದ್ದವರಿಗೆ ಕೊಡೆ ಹಿಡಿಯಲಾಗಿತ್ತು ಎಂದು ಅವರು ಟೀಕಿಸಿದರು.

ಕುಟುಂಬ ರಾಜಕಾರಣ ಮಾಡುವಂತಹ ಅನೇಕ ಪಕ್ಷಗಳು ನಮ್ಮಲ್ಲಿವೆ. ಇವುಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ಕಾಂಗ್ರೆಸ್‍ನಂತಹ ಪಕ್ಷದಿಂದ ರಾಜ್ಯದ ಜನ ಎಚ್ಚರಿಕೆಯಿಂದ ಇರಬೇಕು. ಮೋದಿ ಬದುಕಿರುವವರೆಗೆ ಅವರ ಬೇಳೆ ಬೇಯುವುದಿಲ್ಲ ಎಂದು ಭಾವಿಸಿ, ಎಲ್ಲರೂ ಮೋದಿ ಸಾಯಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕೆಲವರು ಸಮಾಧಿಯನ್ನು ತೋಡುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಆದರೆ, ದೇಶ ಹೇಳುತ್ತಿದೆ, ಮೋದಿ ನಿಮ್ಮ ‘ಕಮಲ’ ಅರಳಲಿದೆ ಎಂದು. ಸತ್ಯವಾದ ನೀತಿಯಿಂದ ಕೆಲಸ ಮಾಡುವಾಗ ಸರಿಯಾದ ವಿಕಾಸ ಆಗುತ್ತದೆ. ಡಬಲ್ ಎಂಜಿನ್ ಸರಕಾರದಿಂದ ವಿಕಾಸ, ನಿಷ್ಠೆ ಎರಡು ಆಗಲಿದೆ. ಕರ್ನಾಟಕ ಸೇರಿದಂತೆ ಎಲ್ಲರ ಸಹಕಾರದಿಂದ ದೇಶವನ್ನು ಅಭಿವೃದ್ಧಿ ಮಾಡುವ ನಮ್ಮ ಕನಸು ನನಸು ಮಾಡಲು ಸಾಧ್ಯ ಎಂದು ಅವರು ಹೇಳಿದರು.

ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದೇವೆ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಷಯ ತಿಳಿಸಿದ್ದೇವೆ. ಬೆಳಗಾವಿಯಲ್ಲಿ ಸಿಕ್ಕಿರುವ ಪ್ರೀತಿ, ಆಶೀರ್ವಾದ ನೋಡಿ ಬೆರಗಾಗಿದ್ದೇನೆ. ಬೆಳಗಾವಿಯ ಜನತೆಗೆ ಒಂದು ಆಶ್ವಾಸನೆ ನೀಡುತ್ತೇನೆ, ನಿಮ್ಮ ಈ ಪ್ರೀತಿಯನ್ನು ಕರ್ನಾಟಕ ಹಾಗೂ ಬೆಳಗಾವಿಯ ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ಹಿಂತಿರುಗಿಸುತ್ತೇನೆ ಎಂದು ಅವರು ಹೇಳಿದರು.

Similar News