PM Kisan Samman Nidhi | 13ನೇ ಕಂತಿನ ಹಣ ಬಿಡುಗಡೆ: ರೈತರ ಖಾತೆಗಳಿಗೆ 16,000 ಕೋಟಿ ರೂ. ಜಮೆ ಮಾಡಿದ ಪ್ರಧಾನಿ ಮೋದಿ

Update: 2023-02-27 15:11 GMT

ಬೆಳಗಾವಿ, ಫೆ.27: ‘ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಮೂಲಕ ದೇಶದ ಕೋಟ್ಯಂತರ ರೈತರ ಖಾತೆಗಳಿಗೆ 16ಸಾವಿರ ಕೋಟಿ ರೂ.ಗಳು ಇಂದು ತಲುಪಿದೆ. ಈ ಹಿಂದೆ ಕಾಂಗ್ರೆಸ್‍ನ ಪ್ರಧಾನಿಯೊಬ್ಬರು ಹೇಳಿದ್ದರು, ನಾವು ರಾಜ್ಯಕ್ಕೆ ಒಂದು ರೂ.ಕಳುಹಿಸಿದರೆ 15 ಪೈಸೆ ತಲುಪುತಿತ್ತು ಎಂದು. ಒಂದು ವೇಳೆ ಅವರು 16 ಸಾವಿರ ಕೋಟಿ ರೂ.ಬಗ್ಗೆ ಆಲೋಚಿಸಿದ್ದರೆ 12-13 ಸಾವಿರ ಕೋಟಿ ರೂ. ಎಲ್ಲಿ ಮಾಯವಾಗುತ್ತಿತ್ತೋ ಗೊತ್ತಿಲ್ಲ. ಆದರೆ, ಇದು ಮೋದಿ ಸರಕಾರ. ಪೈಸೆ ನಿಮ್ಮದು, ನಿಮಗಾಗಿ ಇರುವಂತದ್ದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ನಗರದ ಮಾಲಿನಿ ಸಿಟಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೆ ಕಂತು ಬಿಡುಗಡೆ, ಬೆಳಗಾವಿಯ ರೈಲ್ವೆ ನಿಲ್ದಾಣದ ನವೀಕೃತ ಕಟ್ಟಡ, ಲೋಂಡಾ-ಘಟಪ್ರಭಾ ಡಬ್ಲಿಂಗ್ ಮಾರ್ಗ ಲೋರ್ಕಾಪಣೆ ಹಾಗೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.85ರಷ್ಟು ಸಣ್ಣ ರೈತರಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಸಣ್ಣ ರೈತರ ಖಾತೆಗಳಿಗೆ ಸರಿ ಸುಮಾರು 2.50 ಲಕ್ಷ ಕೋಟಿ ರೂ.ಗಳನ್ನು ಈಗಾಗಲೆ ಜಮೆ ಮಾಡಲಾಗಿದೆ. ಇದರಲ್ಲಿ 50 ಸಾವಿರ ಕೋಟಿ ರೂ.ಗಳು ರೈತ ಮಹಿಳೆಯರ ಖಾತೆಗಳಿಗೆ ಜಮೆಯಾಗಿದೆ. ಈ ಹಣ ರೈತರ ಸಣ್ಣ ಸಣ್ಣ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

2014ರಲ್ಲಿ ದೇಶದ ಕೃಷಿ ಬಜೆಟ್ 25ಸಾವಿರ ಕೋಟಿ ರೂ.ಇತ್ತು. ಈ ವರ್ಷ ಕೃಷಿ ಬಜೆಟ್ 1.25 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿದೆ. ನಾವು ತಂತ್ರಜ್ಞಾನಕ್ಕೆ ಒತ್ತು ನೀಡಿದ್ದೇವೆ. ಜನಧನ್ ಖಾತೆಗಳು, ಆಧಾರ್ ಇಲ್ಲದೆ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುತ್ತಿತ್ತೆ? ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಒತೆ ಜೋಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.

ಸಾವಯವ ಕೃಷಿಗೆ ಒತ್ತು ನೀಡಲಾಗುತ್ತಿದೆ. ಇದಲ್ಲದೆ, ‘ಪಿಎಂ-ಪ್ರಣಾಮ್’ ಯೋಜನೆಯಡಿ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡುವ ರಾಜ್ಯಗಳಿಗೆ ಕೇಂದ್ರ ಸರಕಾರದಿಂದ ನೆರವು ಸಿಗಲಿದೆ. ಹವಾಮಾನ ಬದಲಾವಣೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಆದುದರಿಂದ, ಸಿರಿಧಾನ್ಯ ಬೆಳೆಗಳಿಗೆ ‘ಸಿರಿ ಅನ್ನ’ ಯೋಜನೆ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಕರ್ನಾಟಕವು ಸಿರಿಧಾನ್ಯಗಳ ತವರು. ಯಡಿಯೂರಪ್ಪ ರೈತ ಬಂಧು ಯೋಜನೆ ಮೂಲಕ ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದ್ದರು. ಸಿರಿಧಾನ್ಯ ಬೆಳೆಸುವುದರಿಂದ ಸಣ್ಣ ರೈತರಿಗೆ ದ್ವಿಗುಣ ಲಾಭ ಆಗುತ್ತದೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ನಮ್ಮ ಸರಕಾರವು ಈ ಬಜೆಟ್ ನಲ್ಲಿ 2016-17 ಗಿಂತ ಮುಂಚಿನ ಬಾಕಿ ಬಿಲ್ ಗಳ ಮೇಲೆ ತೆರಿಗೆಗೆ ವಿನಾಯಿತಿಯನ್ನು ನೀಡಿರುವುದರಿಂದ ಕಬ್ಬು ಬೆಳೆಗಾರರ ಸಹಕಾರಿ ಸಂಘಗಳಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪರಸ್ಪರ ಸಂಪರ್ಕ ದಿಂದ ಅಭಿವೃದ್ಧಿ ಸಾಧ್ಯ. ಆದುದರಿಂದ, ಕರ್ನಾಟಕದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಲೋಂಡಾ-ಘಟಪ್ರಭಾ ಮಾರ್ಗ ಡಬ್ಲಿಂಗ್ ನಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ. ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ಈ ಬಾರಿ 7.50 ಸಾವಿರ ಕೋಟಿ ರೂ.ಇಟ್ಟಿದ್ದೇವೆ. ಬೆಳಗಾವಿಯ ಆಧುನಿಕ ರೈಲ್ವೆ ನಿಲ್ದಾಣ ಅಂತರ್‍ರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದೆ. ಅದೇ ರೀತಿ ರಾಜ್ಯದ ಮತ್ತಷ್ಟು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.

ಜಲಜೀವನ್ ಮಿಷನ್ ಯೋಜನೆಯಡಿ 2019ರಲ್ಲಿ ರಾಜ್ಯದ ಶೇ.25ರಷ್ಟು ಕುಟುಂಬಗಳಿಗೆ ಮಾತ್ರ ಮನೆಗಳಲ್ಲಿ ನಲ್ಲಿ ಮೂಲಕ ನೀರು ಲಭ್ಯವಾಗುತ್ತಿತ್ತು. ಇವತ್ತು ಶೇ.60ರಷ್ಟು ಮನೆಗಳಿಗೆ ನೀರಿನ ಸಂಪರ್ಕ ಲಭ್ಯವಾಗಿದೆ. ಬೆಳಗಾವಿಯಲ್ಲಿ 4.50 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ವೇಣುಗ್ರಾಮ ಎಂಬ ಖ್ಯಾತಿಯನ್ನು ಬೆಳಗಾವಿ ಹೊಂದಿದೆ. ನಮ್ಮ ಸರಕಾರವು ಬಿದಿರು ಬೆಳೆ ಹಾಗೂ ಕಟಾವಿಗೆ ಕಾನೂನಿಗೆ ತಿದ್ದುಪಡಿ ತಂದಿರುವುದರಿಂದ ಈ ಭಾಗದ ಕರಕುಶಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನರೇಂದ್ರ ಮೋದಿ ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಅನಿಲ್ ಬೆನಕೆ, ಅಭಯ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಶ್ವಸಂಸ್ಥೆಯು 2023ನೆ ಸಾಲನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ನವಬಗೆಯ ಸಿರಿಧಾನ್ಯಗಳನ್ನು ಮೊರದ ಮೂಲಕ ಮಣ್ಣಿನ ಮಡಿಕೆಗೆ ತುಂಬುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Similar News