ಎಚ್.ಡಿ. ರೇವಣ್ಣರ ಅನುಮತಿ ಇಲ್ಲದೇ ಇಲ್ಲಿ ಯಾವುದೂ ನಡೆಯಲ್ಲ, ನಾನ್ಯಾವ ಲೆಕ್ಕ?: ಶಾಸಕ ಎ.ಟಿ. ರಾಮಸ್ವಾಮಿ ಬೇಸರ
''ಹಾಸನದಲ್ಲಿ ಗುಲಾಮಗಿರಿ ಇದೆ, ಕೈಕಟ್ಟಿ ನಿಲ್ಲಬೇಕಿದೆ...''
ಹಾಸನ: 'ಎಚ್.ಡಿ. ರೇವಣ್ಣರವರ ಅನುಮತಿ ಇಲ್ಲದೇ ಹಾಸನ ಜಿಲ್ಲೆಯಲ್ಲಿ ಯಾವುದೂ ನಡೆಯುವುದಿಲ್ಲ. ಮನೆಯ ಹಿರಿಯ ಮುತ್ಸದ್ದಿಯನ್ನೇ ಮನೆ ಮತ್ತು ಜಿಲ್ಲೆಯಿಂದ ಆಚೆ ಕಳಿಸಿದವರು ಇನ್ನು ಇವರ ಮುಂದೆ ನಾನ್ಯಾವ ಲೆಕ್ಕ?' ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡುವುದು ಖಚಿತ. ಯಾವ ಪಕ್ಷದಿಂದ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ' ಎಂದು ಹೇಳಿದರು.
''2018ರ ಚುನಾವಣೆಯಲ್ಲು ಕೂಡ ಇನ್ನು ಚುನಾವಣಾ ಫಲಿತಾಂಶ ಅಂತಿಮ ಆಗದೆಯೇ ಮೈತ್ರಿ ಆಗಿತ್ತು. ನಾವಿನ್ನು ಮತ ಎಣಿಕೆ ಕೇಂದ್ರದಲ್ಲಿ ಇರುವಾಗಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಜೊತೆಗೆ ಮೈತ್ರಿ ಎಂದು ತೀರ್ಮಾನ ಮಾಡಲಾಗಿತ್ತು. ಚರ್ಚೆಯನ್ನೇ ಮಾಡದೆ, ಒಂದು ಭೂಮಿಕೆ ಸಿಧ್ದಮಾಡದೆ ಮೈತ್ರಿ ಮಾಡಿ ಕೇವಲ 14.ತಿಂಗಳಿಗೆ ಸರ್ಕಾರ ಪತನ ಆಯ್ತು'' ಎಂದು ಹೇಳಿದರು.
'ನಾನು ಶಾಸಕನಾಗಿದ್ದ ವೇಳೆ ನನ್ನನ್ನ ಸರ್ಕಾರಿ ಭೂಮಿ ಒತ್ತುವರಿ ತೆರವು ಸಮಿತಿಗೆ ಅದ್ಯಕ್ಷನನ್ನಾಗಿ ಮಾಡಿದ್ದಾಗ ಈ ವೇಳೆ ನನಗೆ ಯಾರೂ ಯಾವುದೇ ಒತ್ತಡ ಹೇರದ ಕಾರಣ ಉತ್ತಮ ವರದಿ ನೀಡಲು ನೆರವಾಯ್ತು. ಸರ್ಕಾರಕ್ಕೆ, ಪಕ್ಷಕ್ಕೆ, ಜನರಿಗೆ ಗೌರವ ಬರುವಂತೆ ನಾನು ನಡೆದುಕೊಂಡೆದ್ದೆನು. ನಾನು ಅಕ್ರಮಭೂ ಒತ್ತುವರಿ ತೆರವು ಮಾಡಿದ ಕಾರಣ ಭೂ ಮಾಫಿಯಾದಿಂದ ಬೆದರಿಕೆ ಬರಬಹುದು ಎಂದು ಭದ್ರತೆ ಒಡೆಯಲು ಹೇಳಿದ್ದರು. ಆದರೆ ಇದುವರೆಗೆ ನಾನು ಅಂಗರಕ್ಷಕನನ್ನ ಪಡೆದಿಲ್ಲ. ಕಾರಣ ನಾನು ನ್ಯಾಯಪರವಾಗಿ ಕೆಲಸ ಮಾಡಿದ್ದೇನೆ. ಕೆಲವರು ಸ್ವಾರ್ಥಕ್ಕಾಗಿ ಸತ್ಯವನ್ನು ಸಾಯಿಸುತ್ತಾರೆ, ಯಾರನ್ನು ಬೇಕಿದ್ದರೂ ಬಲಿ ಕೊಡ್ತಾರೆ' ಎಂದು ರೇವಣ್ಣನವರ ವಿರುದ್ಧ ಹರಿಹಾಯ್ದರು.
'ಒಂದು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಒಬ್ಬರು ನಾನೇ ಅಭ್ಯರ್ಥಿ ಎಂದು ಮೀಟಿಂಗ್ ಮಾಡುತ್ತಿದ್ದರು. ರೇವಣ್ಣರ ಅನುಮತಿ ಇಲ್ಲದೆ ಇದೆಲ್ಲವೂ ನಡೆಯಲು ಸಾದ್ಯವೇ ಎಂಬುದು ನಮ್ಮ ಪ್ರಶ್ನೆ. ಕುಮಾರಸ್ವಾಮಿ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅದರೆ ಸತ್ಯ ಮರೆ ಮಾಚಬಾರದು. ಎ.ಟಿ. ರಾಮಸ್ವಾಮಿ ಎರಡು ವರ್ಷದಿಂದ ನಮ್ಮ ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೇಸರವ್ಯಕ್ತಪಡಿಸಿದರು. ಅವರೇ ಸಭೆಗೆ ಬಂದಿರಲಿಲ್ಲ ನಾನು ಹೋಗಿದ್ದೆ. ಬೇಕಿದ್ರೆ ಸಹಿ ಪುಸ್ತಕ ತೆಗೆದು ನೋಡಿ ನಂತರ ಮಾತನಾಡಲಿ' ಎಂದು ಸವಾಲು ಹಾಕಿದರು.