ಪ್ರಧಾನಿ ಮೋದಿ ರಾಜ್ಯಕ್ಕೆ ಇನ್ನೂ 10ರಿಂದ 20 ಬಾರಿ ಬರಬಹುದು: ಕುಮಾರಸ್ವಾಮಿ ಟೀಕೆ

''2ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಪ್ರಕಟ''

Update: 2023-02-27 17:11 GMT

ಬೆಂಗಳೂರು, ಫೆ. 27: ‘ಹಾಸನ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣಾ ಅಭ್ಯರ್ಥಿ ಗೊಂದಲಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ತೆರೆ ಎಳೆಯಲಾಗುವುದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಿನ್ನೆ ಸ್ವರೂಪ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದು, ಭವಾನಿ ರೇವಣ್ಣ ಪರ ಕೆಲವರು ಮಾತನಾಡಿದ್ದಾರೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲರೂ ಒಟ್ಟಾಗಿ ಕೂತು ಸಮಸ್ಯೆ ಬಗೆಹರಿಸಲಿದ್ದು, ಸದ್ಯದಲ್ಲೇ ಜೆಡಿಎಸ್‍ನ 2ನೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದು, ಹಾಸನ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕೃಷ್ಣರಾಜ ಒಡೆಯರ್, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹೆಸರನ್ನು ತಪ್ಪಾಗಿ ಹೇಳಿದ ಪ್ರಧಾನಿ ಮೋದಿ: ವಿಡಿಯೋ ವೈರಲ್

‘ನಮ್ಮ ಮನೆಯಲ್ಲಿ ಆರು ಜನ ಇದ್ದೇವೆ. ನಮ್ಮದು ದೊಡ್ಡ ಕುಟುಂಬ. ಆದರೆ, ಪ್ರಹ್ಲಾದ್ ಜೋಶಿಗೆ ಇರುವುದು ಒಬ್ಬ ತಮ್ಮ. ಅವನನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ. ಆದರೂ ಕೆಣಕಿ ಅವರ ಬುಡಕ್ಕೆ ತಂದುಕೊಳ್ಳುತ್ತಾರೆ’ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ,’ ಪ್ರಧಾನಿ ಮೋದಿ ರಾಜ್ಯಕ್ಕೆ ಇನ್ನೂ 10ರಿಂದ 20 ಬಾರಿ ಬರಬಹುದು. ನಾನು ಅದಕ್ಕೆ ಗಮನ ನೀಡುವುದಿಲ್ಲ. ಯಾರೂ ಮಾಡದ ಕೆಲಸ ಇವರೇನು ಮಾಡಿಲ್ಲ’ ಎಂದು ಟೀಕಿಸಿದರು.

ಕಾರ್ಯಕರ್ತನನ್ನು ನಿಲ್ಲಿಸುವೆ: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದ 2028ರಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವೆ. 2023ರ ಚುನಾವಣೆಯೆ ನನ್ನ ಕೊನೆಯ ಚುನಾವಣೆ. ನಾನೂ ರಾಜಕೀಯ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು. 

Similar News