ಕೊಪ್ಪಳ: 'ಪುಲ್ವಾಮಾ ದಾಳಿ ವ್ಯವಸ್ಥಿತ ಪಿತೂರಿ' ಎಂದು ಸ್ಟೇಟಸ್ ಹಾಕಿದ್ದ ಶಾಲಾ ಶಿಕ್ಷಕ ಅಮಾನತು

Update: 2023-02-28 06:41 GMT

ಕೊಪ್ಪಳ, ಫೆ.27:  ‘ಪುಲ್ವಾಮಾ (PULWAMA) ದಾಳಿ ಒಂದು ವ್ಯವಸ್ಥಿತ ಪಿತೂರಿ’ ಎಂದು ಇತ್ತೀಚೆಗೆ ಸ್ಟೇಟಸ್ ಹಾಕಿದ್ದ ಜಿಲ್ಲೆಯ ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶೇಕ್ರಾ ನಾಯ್ಕ ಎಂಬುವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಶೇಕ್ರಾ ನಾಯ್ಕ ಸ್ಟೇಟಸ್‍ನಲ್ಲಿ ‘ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ. ಇಲ್ಲಿ ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಇದೇ ವ್ಯವಸ್ಥೆ ಮುಂದುವರಿದರೆ ಭಾರತದ ಭವಿಷ್ಯವೂ ಬ್ಲ್ಯಾಕ್ ಡೇ ಆಗಿ ಪರಿಣಮಿಸಬಹುದು. ಈಗ ನಾವು ಎಚ್ಚೆತ್ತುಕೊಳ್ಳಬೇಕು. ದೇಶ ಮೊದಲು’ ಎಂದು ಬರೆದುಕೊಂಡಿದ್ದರು. 

ಇದು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಇಲಾಖೆ ಶಿಕ್ಷಕನಿಗೆ ನೋಟಿಸ್ ಜಾರಿ ಮಾಡಿತ್ತು. ‘ಶೇಕ್ರಾ ನಾಯ್ಕ ಸರಕಾರಿ ನೌಕರನಾಗಿ ಕರ್ನಾಟಕ ನಾಗರಿಕೆ ಸೇವಾ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಆದೇಶದಲ್ಲಿ ತಿಳಿಸಿದ್ದಾರೆ.

Similar News