ಬಾಬಾಬುಡಾನ್ ದರ್ಗಾ | ಮಾ.8ರಿಂದ 10ರವರೆಗೆ ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ಉರೂಸ್: ಡಿಸಿ ಕೆ.ಎನ್. ರಮೇಶ್

Update: 2023-02-28 04:05 GMT

ಚಿಕ್ಕಮಗಳೂರು, ಫೆ.28: ಸರಕಾರದ ಆದೇಶದಂತೆ ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ಮಾ.8ರಿಂದ 10ರವರೆಗೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಉರೂಸ್ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉರೂಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ನ್ಯಾಯಾಲಯ ಮತ್ತು ಸರಕಾರದ ಮಾರ್ಗಸೂಚಿಯಂತೆ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಉರೂಸ್‌ಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಸಾರಿಗೆ, ಆಸ್ಪತ್ರೆ, ಪ್ರಸಾದ, ಕುಡಿಯುವ ನೀರು, ಸಂಸ್ಥೆ ಸುತ್ತಮುತ್ತ ಸ್ವಚ್ಛತೆ ಸುಣ್ಣ -ಬಣ್ಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.

ಉರೂಸ್‌ಗೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಅಗತ್ಯ ಇರುವ ಕಡೆ ಸಿಸಿ ಕ್ಯಾಮರಾ, ತಾತ್ಕಾಲಿಕ ತಡೆಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಗೆ ಕೆಲ ಸದಸ್ಯರು ಗೈರು ಹಾಜರಾಗಿರುವ ಬಗ್ಗೆ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಗಮನ ಸೆಳೆದರು. ಉರೂಸ್ ಸರಕಾರದ ಸುತ್ತೋಲೆಯಂತೆ ನಡೆಯಬೇಕು. ಯಾವುದೇ ಕಾರಣಕ್ಕೂ ಸರಕಾರಿ ಆದೇಶ ಉಲ್ಲಂಘನೆಯಾಗದಂತೆ ವ್ಯವಸ್ಥಾಪನ ಸಮಿತಿ ಉರೂಸ್ ಆಚರಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಡಿಸಿ ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು, ಮುಜರಾಯಿ ಇಲಾಖೆಯ ಅಧಿಕಾರಿ ಯೋಗೇಶ್ ಇದ್ದರು.

Similar News