×
Ad

ಮೋದಿ ಮಾತು ಕೊಟ್ಟ ಸ್ಥಳದಲ್ಲಿಯೇ ಕೊಟ್ಟ ಮಾತನ್ನು ಮರೆಯುವಂತಹ ವ್ಯಕ್ತಿ: ಸಿದ್ದರಾಮಯ್ಯ ವಾಗ್ದಾಳಿ

Update: 2023-02-28 18:49 IST

ಗದಗ, ಫೆ. 28: ‘ಮೋದಿ ಮಾತು ಕೊಟ್ಟ ಸ್ಥಳದಲ್ಲಿಯೇ ಕೊಟ್ಟ ಮಾತನ್ನು ಮರೆಯುವಂತಹ ವ್ಯಕ್ತಿ. ಅವರು ಆಡಿದ ಮಾತಿನಂತೆ ನಡೆದುಕೊಂಡ ಒಂದೇ ಒಂದು ಉದಾಹರಣೆ ಇಲ್ಲ. ಸ್ವತಂತ್ರ ಭಾರತ ಇಂತಹ ವಚನ ಭ್ರಷ್ಟ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ ಯಾತ್ರೆ’ಯ ಸಮಾವೇಶದಲ್ಲಿ ಮಾತನಾಡಿದ ಅವರು, ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ, ವಿದೇಶದಲ್ಲಿರುವ ಕಪ್ಪು ಹಣ ವಾಪಾಸು ತಂದು ಎಲ್ಲರ ಅಕೌಂಟಿಗೆ 15 ಲಕ್ಷ ರೂ.ಹಾಕುತ್ತೇನೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು. ಇವುಗಳಲ್ಲಿ ಯಾವುದಾದರೂ ಒಂದನ್ನು ಅವರು ಪೂರ್ತಿ ಮಾಡಿದ್ದಾರೇಯೇ? ಎಂದು ಪ್ರಶ್ನಿಸಿದರು. 

ಇದನ್ನೂ ಓದಿ: ಬಿಜೆಪಿ ಕಚೇರಿಗೆ ಆಪ್ ನಾಯಕ ಭಾಸ್ಕರ್ ರಾವ್ ಭೇಟಿ!

ಮೋದಿ, ಈಗ ವಾರಕ್ಕೊಮ್ಮೆ ರಾಜ್ಯಕ್ಕೆ ಬರಲು ಆರಂಭ ಮಾಡಿದ್ದಾರೆ. ಹಿಂದೆ ಕೊರೋನ, ಪ್ರವಾಹ ಬಂದಾಗ ರಾಜ್ಯದ ಕಡೆ ತಲೆಯೂ ಹಾಕಿರಲಿಲ್ಲ, ಚುನಾವಣೆ ಇದೆ ಎಂದು ಬರುತ್ತಿದ್ದಾರೆ. ಕೋವಿಡ್ ವೇಳೆ ರಾಜ್ಯದ ಆಕ್ಸಿಜನ್ ಅನ್ನು ಕಿತ್ತುಕೊಂಡು ಬೇರೆ ರಾಜ್ಯದವರಿಗೆ ನೀಡಲು ಹೊರಟಿದ್ದರು. ಅದೃಷ್ಟವಶಾತ್ ಸುಪ್ರೀಂ ಕೋರ್ಟ್‍ನ ಆದೇಶದಿಂದ ನಮ್ಮ ಪಾಲಿನ ಆಕ್ಸಿಜನ್ ನಮಗೆ ಸಿಕ್ಕಿತ್ತು. ಮೋದಿಜಿ ನೀವು ಜನರನ್ನು ಬದುಕಿಸುವ ಒಂದು ಕಾರ್ಯಕ್ರಮ ಜಾರಿ ಮಾಡಿದ್ದೀರ? ಎಂದು ಅವರು ಟೀಕಿಸಿದರು

‘ನಮ್ಮ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡಿದೆ ಎನ್ನುತ್ತಾರೆ, ನಾವು ಬರೀ ಟಿಪ್ಪು ಜಯಂತಿ ಮಾತ್ರವಲ್ಲ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವಾಲ್ಮಿಕಿ, ಸಂತ ಸೇವಾಲಾಲ್ ಸೇರಿದಂತೆ ಮುಂತಾದ ಮಹಾನ್ ವ್ಯಕ್ತಿಗಳ ಜಯಂತಿಯನ್ನೂ ಆಚರಣೆ ಮಾಡಿದ್ದೆವು. ಎಲ್ಲ ಸರಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಆದೇಶ ನೀಡಿದ್ದು ನಮ್ಮ ಸರಕಾರ. ಈ ಬಿಜೆಪಿಯವರು ಏನು ಮಾಡಿದ್ದಾರೆ? ಎಂದು ಅವರು ಟೀಕಿಸಿದರು.

ನಮ್ಮ ಪಕ್ಷದ ಜಿ.ಎಸ್.ಪಾಟೀಲರಿಗೆ ಮತ ನೀಡಿದರೆ ನನಗೆ ಮತ ನೀಡಿದಂತೆ. ಪಾಟೀಲರು ಒಬ್ಬ ಸಜ್ಜನ, ಪ್ರಾಮಾಣಿಕ ವ್ಯಕ್ತಿ, ಇಂತಹವರು ವಿಧಾನಸೌಧಕ್ಕೆ ಬರಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗದಗದ ನಾಲ್ಕು ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲ ಅವಕಾಶ ಇದೆ, ಕ್ಷೇತ್ರದ ಜನರು ಈ ಕೆಲಸವನ್ನು ಮಾಡಿಕೊಟ್ಟರೆ ನಿಮಗೆ ಸದಾ ಋಣಿಯಾಗಿರುತ್ತೇನೆ ಎಂದು ಅವರು ತಿಳಿಸಿದರು.

Similar News