ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಅಬ್ಬಕ್ಕ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2023-02-28 15:17 GMT

ಬೆಂಗಳೂರು: 'ಕಾಕಂಬಿ ಅಕ್ರಮ ರಫ್ತಿನ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಾಗಿದೆ. ಈ ಬಗ್ಗೆ ಚರ್ಚೆ ಮಾಡದೇ, ನಳಿನ್ ಕುಮಾರ್ ಕಟೀಲ್, ಟಿಪ್ಪು ವರ್ಸಸ್ ಸಾರ್ವಕರ್, ಟಿಪ್ಪು ವರ್ಸಸ್ ಅಬ್ಬಕ್ಕ ಅವರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಉಳ್ಳಾಳದ ವೀರ ರಾಣಿ ಅಬ್ಬಕ್ಕನ ಬಗ್ಗೆ ಗೊತ್ತಿಲ್ಲ' ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. 

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ನಾಯಕರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಟಿಪ್ಪು ವರ್ಸಸ್ ಅಬ್ಬಕ್ಕ ಎನ್ನುತ್ತಿದ್ದಾರೆ. ಈ ಬಗ್ಗೆ ಕಟೀಲ್ ಚರ್ಚೆಗೆ ಬರಲಿ' ಎಂದು ಸವಾಲೆಸೆದರು. 

‘ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡದ ರೀತಿಯಲ್ಲಿ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟಿಸ್ ನೀಡುತ್ತಾರೆ. ಕಾಕಂಬಿ ಹಗರಣದಲ್ಲಿ ಆ ಇಬ್ಬರು ಸಂಸದರು ಮತ್ತು ಮುಖ್ಯಮಂತ್ರಿಗಳ ಪಾತ್ರ ರಾಜ್ಯದ ಜನತೆಗೆ ತಿಳಿಯಬೇಕು. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕಾಲದಲ್ಲಿ ಮಾತ್ರ ಹಗರಣ ನಡೆದಿದೆ ತಾವೆಲ್ಲಾ ಪ್ರಾಮಾಣಿಕರು ಎಂದು ಹೇಳುವ ಬಿಜೆಪಿಯವರು, ಬಿಜೆಪಿ ಮತ್ತು ಕಾಂಗ್ರೆಸ್ 2 ಆರೋಪಗಳ ವಿಚಾರಣೆಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಒಂದು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ನಡೆಸಲಿ' ಎಂದು ಒತ್ತಾಯಿಸಿದರು. 

'ಚುನಾವಣೆಯನ್ನು 2 ತಿಂಗಳು ಮುಂದಕ್ಕೆ ಹಾಕಿ ಈ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ. ನೀವು ಸಿದ್ಧವಿದ್ದೀರಾ' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇದನ್ನೂ ಓದಿಆಪ್ ಮುಖಂಡ ಭಾಸ್ಕರ್ ರಾವ್ ನಾಳೆ BJP ಸೇರ್ಪಡೆ

Similar News