ಲೋಕ್ ಅದಾಲತ್‍ಗೆ ಅಡ್ಡಿ: ನಿರ್ಣಯ ಹಿಂಪಡೆದ ಮಂಡ್ಯ ವಕೀಲರ ಸಂಘ

Update: 2023-02-28 19:00 GMT

ಬೆಂಗಳೂರು, ಫೆ.28: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಒಂದೊಮ್ಮೆ ಭಾಗವಹಿಸಿದರೆ ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೈಗೊಂಡಿದ್ದನಿರ್ಣಯವನ್ನು ಮಂಡ್ಯ ವಕೀಲರ ಸಂಘವು ಹಿಂಪಡೆದಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹೈಕೋರ್ಟ್‍ಗೆ ಹೇಳಿದೆ. 

ಮಂಡ್ಯ ವಕೀಲರ ಸಂಘದ ನಿರ್ಣಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು.

ರಾಜ್ಯ ವಕೀಲರ ಪರಿಷತ್ ಪರ ವಾದಿಸಿದ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು, ಕೆಲವೊಂದು ಸಮಸ್ಯೆಗಳು ಮತ್ತು ತಪ್ಪು ಗ್ರಹಿಕೆಯಿಂದಾಗಿ ಮಂಡ್ಯ ವಕೀಲರ ಸಂಘವು ನಿರ್ಣಯ ಅಂಗೀಕರಿಸಿದೆ. ಇದೊಂದು ದುರದೃಷ್ಟಕರ ವಿಚಾರ. ಆದರೆ, ಈ ನಿರ್ಣಯವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ರಾಜ್ಯ ವಕೀಲರ ಪರಿಷತ್ತಿನ ಪರ ವಕೀಲರ ಮೌಖಿಕ ಹೇಳಿಕೆಯನ್ನು ಸ್ವಾಗತಿಸಿದ ಪೀಠವು ಈ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು. ಇದೇ ವೇಳೆ ಭಾರತೀಯ ವಕೀಲರ ಪರಿಷತ್(ಬಿಸಿಐ) ಪರ ವಾದಿಸಿದ ವಕೀಲ ಶ್ರೀಧರ್ ಪ್ರಭು ಅವರು,  ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಿಗೆ ಬಿಸಿಐನ ಸಂಪೂರ್ಣ ಸಹಕಾರ ಮತ್ತು ಬೇಷರತ್ ಬೆಂಬಲ ಇದೆ ಎಂದು ಪೀಠಕ್ಕೆ ತಿಳಿಸಿದರು. 

ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ವಕೀಲರನ್ನು ತಡೆಯುವುದು ವೃತ್ತಿ ನಡತೆಗೆ ವಿರುದ್ಧವಾದ ಕ್ರಮ. ಈ ನಿಟ್ಟಿನಲ್ಲಿ ವಕೀಲರು ಮತ್ತು ವಕೀಲರ ಸಂಘಗಳಿಗೆ ಯಾವ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಬಹುದು ಎಂಬ ಬಗ್ಗೆ ಬಿಸಿಐ ಕಾರ್ಯದರ್ಶಿಯಿಂದ ವಿವರವಾದ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು.

Similar News