ಮೂಡಿಗೆರೆ | ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ: ಕಾನ್ಸ್‌ಟೇಬಲ್ ಅಮಾನತು
Update: 2023-03-01 09:36 IST
ಚಿಕ್ಕಮಗಳೂರು, ಮಾ.1: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಮಾಡಿದ ಆರೋಪದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ವೊಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಂಜುನಾಥ್ ಅಮಾನತುಗೊಂಡವರು.
ಪ್ರಕರಣದ ವಿವರ: ಕಳ್ಳತನದ ಆರೋಪದಲ್ಲಿ ಆಟೋ ಚಾಲಕನೋರ್ವನ ಮೇಲೆ ಹಲ್ಲೆ, ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಹಿತ್ ಹಾಗೂ ವಸಂತ್ ಎಂಬವರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಇತ್ತೀಚೆಗೆ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಈ ಇಬ್ಬರು ಪೊಲೀಸ್ ಸಿಬ್ಬಂದಿಯ ವಿರುದ್ಧ ವೃಥಾರೋಪದ ದೂರು ನೀಡುವಂತೆ ಸ್ಥಳೀಯರ ಮೇಲೆ ಕಾನ್ಸ್‌ಟೇಬಲ್ ಮಂಜುನಾಥ್ ಬಲವಂತಪಡಿಸಿದ್ದರೆನ್ನಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥ್ ರನ್ನೂ ಅಮಾನತುಗೊಳಿಸಿ ಚಿಕ್ಕಮಗಳೂರು ಎಸ್ಪಿ ಆದೇಶಿಸಿದ್ದಾರೆ.