ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಆದೇಶ: ಸರಕಾರಿ ನೌಕರರ ಮುಷ್ಕರ ವಾಪಸ್

ತಕ್ಷಣ ಸರಕಾರಿ ಕಚೇರಿಗಳಿಗೆ ಹಾಜರಾಗುವಂತೆ ನೌಕರರ ಸಂಘ ಮನವಿ

Update: 2023-03-01 12:55 GMT

ಬೆಂಗಳೂರು, ಮಾ.1: ರಾಜ್ಯ ಸರಕಾರಿ ನೌಕರರಿಗೆ ಪ್ರಸಕ್ತ ಸಾಲಿನ ಎ.1ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿರುವುದರಿಂದ ರಾಜ್ಯ ಸರಕಾರಿ ನೌಕರರ ಸಂಘವು ಮುಷ್ಕರ ಹಿಂಪಡೆದಿದೆ.

ರಾಜ್ಯ ಸರಕಾರವು 7ನೆ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, 2018ರ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಪ್ರಸಕ್ತ ಸಾಲಿನ ಎ.1ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಎ.1ರಿಂದ ಜಾರಿಗೆ ಬರುವಂತೆ ಮೂಲ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಆದೇಶಿಸಲಾಗಿದೆ.

ಸರಕಾರದ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‍ಜೆಪಿಸಿ ಪಿಂಚಣಿದಾರರಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಅಲ್ಲದೆ, ಈ ಆದೇಶದ ಮೂಲಕ ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಟ ಸಂಭಾವನೆಯಾಗಿದ್ದು, ಇದು ನಿವೃತ್ತಿ ಸೌಲಭ್ಯ, ತುಟ್ಟಿ ಭತ್ತೆಯನ್ನು ನಿರ್ಧರಿಸುವಾಗ ಅಥವಾ ಬೇರೆ ಯಾವುದೆ ಉದ್ದೇಶಗಳಿಗೆ ಪರಿಗಣಿಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

ಎಸಿಎಸ್ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚನೆ: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸರಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೆ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ(ಎಸಿಎಸ್) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರಕಾರ ಆದೇಶ ಹೊರಡಿಸಿದೆ.

ಈ ಸಮಿತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ನಿರ್ಧಾರಗಳನ್ನು ಕೈಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಸೂಕ್ತ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸರಕಾರ ಸೂಚಿಸಿದೆ.

7ನೆ ವೇತನ ಆಯೋಗದಿಂದ ವರದಿ ಪಡೆಯಲು 30 ದಿನಗಳ ಕಾಲಾವಕಾಶ ಕೋರಿದ್ದಾರೆ. 15 ಲಕ್ಷ ಕುಟುಂಬಗಳಿಗೆ ಅನ್ವಯಿಸುವಂತೆ ಶೇ.17ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಿ ಆದೇಶಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ(ಒಪಿಎಸ್)ಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಿವೃತ್ತ ಮತ್ತು ಹಾಲಿ ಸರಕಾರಿ ನೌಕರರಿಗೆ ಉಚಿತ ಆರೋಗ್ಯ ಯೋಜನೆಗೆ ಆಗ್ರಹಿಸಲಾಗಿದೆ. ವೇತನದ ಆಯೋಗದ ವರದಿ ಬಂದ ಬಳಿಕವು ಜಾರಿಗೊಳಿಸದಿದ್ದರೆ ಮತ್ತೆ ಪ್ರತಿಭಟನೆ ಮುಂದುವರೆಯುತ್ತದೆ. ಸರಕಾರಿ ನೌಕರರು ಕಚೇರಿಗಳಿಗೆ ಹಾಜರಾಗುವಂತೆ ಮನವಿ ಮಾಡುತ್ತಿದ್ದೇನೆ.

ಸಿ.ಎಸ್.ಷಡಕ್ಷರಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ

ರಾಜ್ಯ ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇ.17 ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಎನ್.ಪಿ.ಎಸ್ ಕುರಿತು ಇತರೆ ರಾಜ್ಯಗಳಲ್ಲಿ ಯಾವ ರೀತಿ ಇದೆ, ಅದರ ಆರ್ಥಿಕ ಪರಿಣಾಮ ಇವುಗಳ ಕುರಿತು ಅಧ್ಯಯನ ಕೈಗೊಂಡು ವರದಿ ನೀಡಲು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ  ಸಮಿತಿ ರಚನೆ ಮಾಡಲಾಗಿದೆ. ಮುಷ್ಕರ ಕೈಬಿಟ್ಟ ಸರಕಾರಿ ನೌಕರರಿಗೆ ಧನ್ಯವಾದಗಳು.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

ಸರ್ಕಾರಿ ನೌಕರರ  ಶೇ.17ರಷ್ಟು ಹೆಚ್ಚಳದ ಆದೇಶ ಪ್ರತಿ

Similar News