ಬಿಜೆಪಿಯ ದುರಾಡಳಿತ, ಕೊಟ್ಟ ಕುದುರೆಯನ್ನೇರಲಾರದ ಜೆಡಿಎಸ್ ಬಗ್ಗೆ ಜನರಿಗೆ ಹೇಳುತ್ತೇವೆ: ಎಚ್.ಪಿ. ಮಂಜುನಾಥ್

Update: 2023-03-01 07:37 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿಯವರ ದುರಾಡಳಿತ, ಯಾವುದೇ ಜನಪರ ಕಾರ್ಯಕ್ರಮ ಇಲ್ಲದಿರುವುದು ಜನತೆಗೆ ಗೊತ್ತಾಗಿದೆ. ಸಿದ್ದರಾಮಯ್ಯ ಸರಕಾರದ ಹಲವು ಯೋಜನೆಗಳನ್ನು ತೆಗೆದುಹಾಕಿದರು. ಸಿದ್ದರಾಮಯ್ಯನವರು ಕೊಟ್ಟಿದ್ದ ಭಾಗ್ಯಗಳೇ ಒಂದು ಇತಿಹಾಸ. ಯಾರೂ ಬಂದು ಹೋರಾಟ ಮಾಡಿ ಅವರಿಂದ ಈ ಭಾಗ್ಯಗಳನ್ನು ಕೇಳಿರಲಿಲ್ಲ. ಕೇಂದ್ರದಲ್ಲೂ ಆಹಾರ ಸುರಕ್ಷತೆ ಕಾಯ್ದೆ ತಂದದ್ದು ಕಾಂಗ್ರೆಸ್. ನಾವೇನು ಮಾಡಿದ್ದೇವೆ ಅದನ್ನು ಜನಕ್ಕೆ ಹೇಳಬೇಕಾಗಿದೆ ಎಂಬುದು ಗೊತ್ತಾಗಿದೆ. ಅದನ್ನು ಪಕ್ಷ ಈಗ ಹೆಚ್ಚು ಹೆಚ್ಚು ಮಾಡುತ್ತಿದೆ.

 ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ಹೇಗೆ ನಡೆಯುತ್ತಿದೆ?

ಮಂಜುನಾಥ್: ನಮಗೆ ನಿತ್ಯವೂ ಚುನಾವಣೆಯೇ. ಹುಣಸೂರು ತಾಲೂಕು ಪ್ರಜ್ಞಾವಂತರ ಕ್ಷೇತ್ರ. ಚುನಾವಣೆ ಸಂದರ್ಭಕ್ಕೂ ಮೊದಲೇ ತಯಾರಾಗುತ್ತಿರುತ್ತೇವೆ. ಚುನಾವಣೆ ಹೊಸ್ತಿಲಲ್ಲಿ ಸ್ವಲ್ಪಜಾಸ್ತಿ ಅಷ್ಟೆ.

 ಮೈಸೂರು, ಮಂಡ್ಯ, ಹಾಸನ ಭಾಗದಲ್ಲಿ ಬಿಜೆಪಿ ಪ್ರವೇಶದ ಬಗ್ಗೆ ಏನೆನ್ನುತ್ತೀರಿ?

ಮಂಜುನಾಥ್: ಹಳೇಮೈಸೂರು ಭಾಗದಲ್ಲಿ ದಳ ಮತ್ತು ಕಾಂಗ್ರೆಸ್ ನಡುವೆಯೇ ಸಾಂಪ್ರದಾಯಿಕ ಪೈಪೋಟಿ. ಬಿಜೆಪಿಯವರು ಹೋಗುತ್ತಿರುವ ರೀತಿ ಗೊತ್ತಾಗುತ್ತಿದೆ. ಮೋದಿ, ಅಮಿತ್ ಶಾ, ನಡ್ಡಾ ಇವರನ್ನೆಲ್ಲ ಮೂರು ಮೂರು ಬಾರಿ ಕರೆದುಕೊಂಡು ಬರುತ್ತಿದ್ದಾರೆ. ಅವರೆಷ್ಟೇ ಸಲ ಬಂದರೂ ಈ ದುರಾಡಳಿತದ ವಿಚಾರ ಜನರ ಮನಸ್ಸಿನಿಂದ ದೂರವಾಗಲಾರದು.

 ಈ ಬಾರಿ ಮೋದಿ ಅಲೆ ಪ್ರಯೋಜನವಾಗದು ಎನ್ನುತ್ತೀರಾ?

ಮಂಜುನಾಥ್: ಮೋದಿ ಅಲೆ ಎರಡು ಬಾರಿ ಕೆಲಸ ಮಾಡಿದೆ. ಯಾವಾಗಲೂ ಅದೇ ನಡೆಯದು ಅನ್ನುವುದು ನಮ್ಮ ಬಲವಾದ ನಂಬಿಕೆ.

 ಈ ಬಾರಿ ಜನ ಅವರನ್ನು ಬೆಂಬಲಿಸುವುದಿಲ್ಲ ಎಂದು ಯಾಕೆ ಅನ್ನಿಸುತ್ತಿದೆ?

ಮಂಜುನಾಥ್: ಗ್ರಾಮೀಣ ಪ್ರದೇಶದಲ್ಲಿ ನಿತ್ಯವೂ ಜನಸಾಮಾನ್ಯರ ಮಧ್ಯೆಯೇ ಇರುತ್ತೇವೆ. ಅವರ ಆಕ್ರೋಶ, ವಿರೋಧ ಗೊತ್ತಾಗುತ್ತಿದೆ. ಮಹಿಳೆಯರು ತಿರಸ್ಕಾರ ಮಾಡುತ್ತಿದ್ದಾರೆ. ಮೋದಿ ಬಂದರೆ ಈ ದೇಶ ಮತ್ತಷ್ಟು ಮೆರೆಯುತ್ತದೆ ಎನ್ನುವುದೆಲ್ಲ ಸುಳ್ಳು ಎಂದು ಎಲ್ಲರಿಗೂ ಗೊತ್ತಾಗಿದೆ.

 ಆದರೆ ಹಿಂದುತ್ವದ ಅಜೆಂಡ ಇಟ್ಟುಕೊಂಡಿದ್ದಾರಲ್ಲ?

ಮಂಜುನಾಥ್: ವಿಚಾರಗಳ ಮೂಲಕ ಪ್ರೇರಣೆಯಾಗಬೇಕು, ಪ್ರಚೋದನೆಯಾಗಬಾರದು. ಪ್ರೇರಣೆಗೂ ಪ್ರಚೋದನೆಗೂ ಬಹಳ ವ್ಯತ್ಯಾಸವಿದೆ. ಪ್ರಚೋದನೆಗೆ ಒಳಗಾಗಿದ್ದ ಕೆಲವು ಯುವಕರು ತಮ್ಮನ್ನು ತಾವು ತಿದ್ದಿಕೊಂಡಿದ್ದಾರೆ. ಹೊಸ ಯುವಕರನ್ನು ಪ್ರಚೋದಿಸುವ ಕೆಲಸವಾಗುತ್ತಿದೆ. ಭಾವೋದ್ವೇಗ, ಧರ್ಮಾಂಧತೆ ಸೃಷ್ಟಿಸಿ ಪ್ರಯೋಜನ ಪಡೆದಿದ್ದಾರೆ. ಜನ ಅರ್ಥ ಮಾಡಿಕೊಳ್ಳದೆ ಬೇರೆ ಮಾರ್ಗವೇ ಇಲ್ಲ.

 ಸಮ್ಮಿಶ್ರ ಸರಕಾರ ಬಿದ್ದ ಬಳಿಕ ಕಾಂಗ್ರೆಸ್ ಗೆದ್ದಿದ್ದು ಎರಡೇ ಸೀಟು. ನಿಮ್ಮದೂ ಒಂದು. ನಿಮ್ಮ ಗೆಲುವಿಗೆ ಕಾರಣವಾದದ್ದೇನು?

ಮಂಜುನಾಥ್: ಗೆಲುವಿಗೆ ಹಲವು ಕಾರಣಗಳಿದ್ದವು. ಆಗಷ್ಟೆ ಗೆದ್ದವರು ಪಕ್ಷ ಬಿಟ್ಟು ಹೋಗಿದ್ದರು. ಜನರಿಗೆ ಭ್ರಮನಿರಸನ ಆಯಿತು. ಹುಣಸೂರು ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳನ್ನು ಯಾರೂ ಹೇಳದೆಯೂ ಹಂತಹಂತವಾಗಿ ಮಾಡಿಕೊಂಡು ಬಂದೆ. ಇನ್ನೂ ಹೆಚ್ಚಿನ ಕೆಲಸಗಳ ಅಗತ್ಯವಿದೆ. ಆ ದಿಕ್ಕಿನಲ್ಲಿ ಹೋಗುತ್ತಿದ್ದೇನೆ.

 ಸಮ್ಮಿಶ್ರ ಸರಕಾರ ಬೀಳಲು ವಿಶ್ವನಾಥ್ ಕಾರಣವೆನ್ನಲಾಗುತ್ತದೆ. ಈಗ ಅವರು ಮತ್ತೆ ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿರುವುದಕ್ಕೆ ಏನೆನ್ನುತ್ತೀರಿ?

ಮಂಜುನಾಥ್: ವಿಶ್ವನಾಥ್ ಅವರು ಪಕ್ಷ ಬಿಟ್ಟುಹೋದಾಗಲೂ ಅವರಿಗೆ ಹೇಳಿದ್ದೆ. ನೇರವಾಗಿಯೇ ಟೀಕಿಸಿದ್ದೆ. ನನಗೆ ಬಹಳಷ್ಟನ್ನು ಕಲಿಸಿದವರು ಅವರು. ಕಾಂಗ್ರೆಸ್ ತಾಯಿಯಿದ್ದ ಹಾಗೆ ಎನ್ನುತ್ತಿದ್ದವರು. ಕಾಯಾ ವಾಚಾ ಮನಸಾ ಅದು ನಿಜವೂ ಹೌದು. ರಾಜಕಾರಣದ ಸ್ಥಿತ್ಯಂತರದಲ್ಲಿ ಅವರು ಪಕ್ಷ ಬಿಟ್ಟುಹೋದರು. ಬಿಜೆಪಿಗೆ ಸೇರಿದಾಗ, ಅವರನ್ನು ಹೊಗಳಿದಾಗ ಮಾತ್ರ ನೋವಾಯಿತು. ದೇವರಾಜ ಅರಸು ಅವರಿಗೆ ಹೇಳುತ್ತಿದ್ದ ಮಾತನ್ನು ಬಿಜೆಪಿಗೆ ಹೇಳುತ್ತಿದ್ದೀರಿ ಎಂದು ಬೇಸರದಿಂದಲೇ ಹೇಳಿದ್ದೆ. ಈಗ ಮತ್ತೆ ಬದುಕಿರುವವರೆಗೆ ಕಾಂಗ್ರೆಸ್‌ನಲ್ಲಿರುತ್ತೇನೆ ಎಂದಿದ್ದಾರೆ. ಅವರನ್ನು ನಾನು ಅರ್ಥ ಮಾಡಿಕೊಂಡದ್ದಂತೂ ಸರಿ ಎಂದು ಅನ್ನಿಸುತ್ತಿದೆ.

 ಅವರು ಬಂದರೆ ಸ್ವಾಗತ ಮಾಡುತ್ತೀರಾ?

ಮಂಜುನಾಥ್: ಖಂಡಿತ. ಕಾಂಗ್ರೆಸ್‌ಗೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಅನ್ನುವುದು ಒಂದು ಚಳವಳಿ. ಅದರ ಕಾಳಜಿಯೇ ಬಡವರ ಪರ.

 ನಿಮ್ಮ ಜಿಲ್ಲೆ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದಿದೆ. ಆದರೆ ಎಲ್ಲ ನಾಯಕರ ಮೇಲೆ ಪುತ್ರ ವ್ಯಾಮೋಹದ ಆರೋಪವಿದೆ. ಕುಟುಂಬ ರಾಜಕಾರಣದ ಬಗ್ಗೆ ಏನೆನ್ನುತ್ತೀರಿ?

ಮಂಜುನಾಥ್: ಕುಟುಂಬ ರಾಜಕಾರಣ ಇರದ ಯಾವ ಪಕ್ಷವೂ ಇಲ್ಲ ದೇಶದಲ್ಲಿ. ರಾಜಕಾರಣಿಗಳ ಮಕ್ಕಳನ್ನು ಏಕಾಏಕಿ ತಂದು ಕೂರಿಸುವುದು ಕಾರ್ಯಕರ್ತರಿಗೆ ನೋವಾಗುತ್ತದೆ. ಆದರೆ ಅಪ್ಪನ ಜೊತೆ ರಾಜಕಾರಣಿಯಾಗಿ ನಡೆದುಬಂದಿದ್ದರೆ ತಪ್ಪೇನು? ಬರುವವರು ಬಡವರ ಪರ ಕಾಳಜಿ ಇಟ್ಟುಕೊಂಡು ಬರಬೇಕು ಅಷ್ಟೆ. ಎಷ್ಟೋ ಮಂದಿ ರಾಜಕಾರಣವನ್ನು ಬೈಯುತ್ತಾರೆ. ನಾನು ವೈಯಕ್ತಿಕವಾಗಿ ರಾಜಕಾರಣವನ್ನು ಪೂಜಿಸುತ್ತೇನೆ. ಅದೊಂದು ವೇದಿಕೆ, ನೂರಾರು ಜನ ಬಡವರನ್ನು ತಲುಪುವುದಕ್ಕೆ ಇರುವಂಥದ್ದು.

 ರಾಜಕಾರಣ ಮೌಲ್ಯವನ್ನು ಉಳಿಸಿಕೊಂಡಿದೆ ಎನ್ನುತ್ತೀರಾ?

ಮಂಜುನಾಥ್: ಮೊಸರಿಗೆ ನೀರು ಹಾಕಿ ಹಾಕಿ ತಿಳಿಯಾದ ಹಾಗೆ ಅಗುತ್ತಿದೆ. ಮೊಸರು ಎಂಬುದು ಇದೆಯಲ್ಲ ಎಂದು ಸಮಾಧಾನಪಡಬೇಕು. ರಾಜಕಾರಣದಲ್ಲಿ ಅರಸು ಅವರ ಕಾಲಕ್ಕೂ ನಮ್ಮ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಜನರು ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ವಾಸ್ತವಾಂಶ ಮರೆತು ರಾಜಕಾರಣ ಮಾಡಲಾಗುತ್ತಿದೆ. ಶಾಸಕನ ಪಾತ್ರ ಏನು? ಶಾಸನ ರಚನೆ, ಅದು ಅನುಷ್ಠಾನವಾಗಿದೆಯೆ ಎಂದು ನೋಡುವುದು, ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗುವುದು. ನಾವು ಇದನ್ನು ಬಿಟ್ಟು ಬೇರೆ ಮಾರ್ಗದಲ್ಲಿಯೇ ಹೋಗುತ್ತಿದ್ದೇವೆ.

 ಕಾರ್ಯಾಂಗ, ಶಾಸಕಾಂಗದ ಗುದ್ದಾಟ ಇದ್ದೇ ಇರುತ್ತದೆ. ನಿಮ್ಮ ಮತ್ತು ರೋಹಿಣಿ ಸಿಂಧೂರಿ ಮಧ್ಯೆ ಜಟಾಪಟಿ ಕೂಡ ಆಗಿತ್ತು?

ಮಂಜುನಾಥ್: ಜಟಾಪಟಿಯಲ್ಲ ಅದು. ನಾನು ಶಾಸಕನಾಗಿದ್ದೆ. ಆಗಷ್ಟೆ ಕೋವಿಡ್ ಬಂದಿತ್ತು. ಜಿಲ್ಲಾಧಿಕಾರಿಗಳಿಗೆ ಒಂದು ಕನಿಷ್ಠ ಸೌಜನ್ಯ ಇರಬೇಕಾಗುತ್ತದೆ. ಅದರ ಬಗ್ಗೆ ಎಚ್ಚರಿಸಿದ್ದೆ ಹೊರತು ಮತ್ತೇನಲ್ಲ.

 ಈಗ ಮತ್ತೆ ಚರ್ಚೆಯಲ್ಲಿದ್ದಾರೆ?

ಮಂಜುನಾಥ್: ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ವ್ಯವಸ್ಥೆಯ ಸ್ತಂಭದ ಹಾಗೆ. ಬಹಳ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದರೆ ಹೀಗೆ ಬೀದಿರಂಪ ಮಾಡಿಕೊಂಡಿರುವುದು ಖಂಡನೀಯ. ಅದೂ ವೈಯಕ್ತಿಕ ವಿಚಾರಗಳನ್ನು ತರುವುದು. ಮಾಧ್ಯಮಗಳೂ ಎಚ್ಚರಿಕೆ ವಹಿಸಬೇಕು. ಯಾವ ಕಾರಣಕ್ಕೆ ಅವು ಬೆಳಗ್ಗಿನಿಂದ ಸಂಜೆಯವರೆಗೆ ಇದನ್ನೇ ಹೇಳುತ್ತವೋ ಗೊತ್ತಿಲ್ಲ. ಅದರಿಂದ ಸಮಾಜಕ್ಕೇನಾದರೂ ಒಳ್ಳೆಯ ಸಂದೇಶ ಹೋಗುತ್ತಿದೆಯಾ?

 ಈ ಬಾರಿ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುವ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ಇದಕ್ಕೆ ಏನೆನ್ನುತ್ತೀರಿ?

ಮಂಜುನಾಥ್: ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳೂ ಮುತುವರ್ಜಿ ವಹಿಸಿ ಜನರ ಬಳಿಗೆ ಹೋಗುವ ಪ್ರಯತ್ನ ಮಾಡುತ್ತಿವೆ. ಈಗಿರುವ ಕೆಲ ದಿನಗಳಲ್ಲಿಯೇ ಅವು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಿದೆ. ನಮ್ಮಲ್ಲೂ ಪ್ರಜಾಧ್ವನಿ ಎಂದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎರಡು ತಂಡಗಳು ಸಾಗಿವೆ. ನಾವೂ ಜನರನ್ನು ಹೆಚ್ಚು ಮುಟ್ಟಲು ಯತ್ನಿಸುತ್ತಿದ್ದೇವೆ. ನಾವು ಕೊಟ್ಟ ಕಾರ್ಯಕ್ರಮಗಳು, ಬಿಜೆಪಿಯ ದುರಾಡಳಿತ, ದಳ ಕೊಟ್ಟ ಕುದುರೆಯನ್ನೇರಲಾರದೆ ಇನ್ನೊಬ್ಬರ ಕಡೆ ಬೆರಳು ತೋರಿಸಿದ್ದು, ನಿಮ್ಮಿಂದಾಗಿ ಹೋದೆವು ಎಂದೆಲ್ಲ ಹೇಳಿದ್ದರ ಬಗ್ಗೆ ತಿಳಿಸುತ್ತಿದ್ದೇವೆ.   

 ಸಿದ್ದರಾಮಯ್ಯನವರೇ ಸರಕಾರವನ್ನು ಬೀಳಿಸಿದರು ಎಂಬುದು ಅವರ ಆರೋಪ?

ಮಂಜುನಾಥ್: ಅಂಥ ರಾಜಕಾರಣವನ್ನು ಅವರೆಂದೂ ಮಾಡಿಲ್ಲ. ಜೆಡಿಎಸ್‌ಗೂ ಬಿಜೆಪಿಗೂ ಗೊತ್ತಿದೆ ಸಿದ್ದರಾಮಯ್ಯನವರನ್ನು ಟೀಕಿಸುವುದು ಮುಖ್ಯ ಎಂದು. ಅವರು ಹೆಚ್ಚು ಪ್ರಭಾವಿಯಾಗಿರುವುದರಿಂದ ಅವರಿಗೆ ಹೆಚ್ಚು ವೈರಿಗಳು. ಅವರನ್ನು ಕುಗ್ಗಿಸಬೇಕು ಎಂದುಕೊಳ್ಳುತ್ತವೆ. ಮೊನ್ನೆ ಇದ್ದಕ್ಕಿದ್ದ ಹಾಗೆ ಲೋಕಾಯುಕ್ತ ತನಿಖೆಯ ಮಾತು ಹೇಳುತ್ತಾರೆ. ಇಷ್ಟು ವರ್ಷ ಏನು ಮಾಡುತ್ತಿದ್ದರು? ವಿರೋಧ ಪಕ್ಷದಲ್ಲಿದ್ದಾಗಲೂ ಒಮ್ಮೆಯೂ ಟೀಕೆ ಮಾಡದೆ, ವಿರೋಧ ವ್ಯಕ್ತಪಡಿಸದೆ, ಕಳೆದ ನಾಲ್ಕು ವರ್ಷಗಳಲ್ಲೂ ಏನೂ ಮಾಡದೆ, ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೆ ಲೋಕಾಯುಕ್ತ ತನಿಖೆ ಎಂದರು.

 ಆದರೆ, ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧೆ ಮಾಡುವಂತಾದುಕ್ಕೆಲ್ಲ ಏನು ಕಾರಣ?

ಮಂಜುನಾಥ್: ಎಲ್ಲಿ ಪಕ್ಷ ದುರ್ಬಲವಿದೆ ಅಲ್ಲಿ ಪ್ರಬಲ ನಾಯಕರು ಹೋಗುವ ಕೆಲಸ ಆಗುತ್ತಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಅವರ ಹೆಸರಿನಿಂದಲೇ ಪ್ರಬಲವಾಗಿದೆ. ವಿರೋಧಿಗಳು ಒಂದು ರೀತಿ ಟೀಕೆ ಮಾಡುತ್ತಿದ್ದರೆ ಕಾಂಗ್ರೆಸ್ ಒಂದು ರೀತಿಯಲ್ಲಿ ಯೋಚಿಸುತ್ತಿರುತ್ತದೆ.

 ಅತಿ ಆಪ್ತರಾಗಿ ಸಿದ್ದರಾಮಯ್ಯ ಜೊತೆಗಿದ್ದವರೇ ಸರಕಾರ ಬೀಳಿಸಲು ಕಾರಣರಾದರು?

ಮಂಜುನಾಥ್: ಒಳಗಡೆಯದ್ದನ್ನು ಮಾತನಾಡಲು ಹೋದರೆ ಬಹಳ ಇದೆ. ಆಗ ನಾನು ಕೂಡ ಸೋತಿದ್ದೆ. ಏನಾಗಿದೆ ಎಂದು ಗೊತ್ತಿದೆ. ಮಾತನಾಡುವುದರಿಂದ ಪ್ರಯೋಜನವಿಲ್ಲ. ಹೋದವರೆಲ್ಲ ಆಪ್ತರೇ ಆಗಿದ್ದರು. ಪಕ್ಷದ ಸಿದ್ಧಾಂತ ಬಿಟ್ಟುಹೋದರಲ್ಲ ಎಂಬ ಬೇಸರವಿದೆ.

 ಮುಂದೆಯೂ ಆಪರೇಷನ್ ಕಮಲ ಸಾಧ್ಯತೆ ಇಲ್ಲದೇ ಇಲ್ಲ?

ಮಂಜುನಾಥ್: ಈಗಲ್ಲ, ಕಳೆದ ೧೫-೨೦ ವರ್ಷಗಳಿಂದಲೂ ಮಾಡಿಕೊಂಡೇ ಬಂದಿದ್ದಾರೆ. ಮುಂದೆ ಹಾಗೆ ಆಗುವುದಿಲ್ಲ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂಬ ಆಶಾಭಾವನೆ ಇದೆ. ರಾಜ್ಯದ ಜನ ಮುಗ್ಧರಲ್ಲ. ದೇಶದಲ್ಲಿ ಏನೇನೋ ಆದಾಗಲೂ ರಾಜ್ಯದ ಮತದಾರರು ಸರಿಯಾದ ನಿರ್ಣಯವನ್ನೇ ತೆಗೆದುಕೊಂಡವರು.

 ಯಾಕೆ ಕಾಂಗ್ರೆಸ್‌ಗೆ ಜನ ಮತ ಹಾಕುತ್ತಾರೆ ಎನ್ನಿಸುತ್ತಿದೆ?

ಮಂಜುನಾಥ್: ಬಿಜೆಪಿಯವರ ದುರಾಡಳಿತ, ಯಾವುದೇ ಜನಪರ ಕಾರ್ಯಕ್ರಮ ಇಲ್ಲದಿರುವುದು ಜನತೆಗೆ ಗೊತ್ತಾಗಿದೆ. ಸಿದ್ದರಾಮಯ್ಯ ಸರಕಾರದ ಹಲವು ಯೋಜನೆಗಳನ್ನು ತೆಗೆದುಹಾಕಿದರು. ಸಿದ್ದರಾಮಯ್ಯನವರು ಕೊಟ್ಟಿದ್ದ ಭಾಗ್ಯಗಳೇ ಒಂದು ಇತಿಹಾಸ. ಯಾರೂ ಬಂದು ಹೋರಾಟ ಮಾಡಿ ಅವರಿಂದ ಈ ಭಾಗ್ಯಗಳನ್ನು ಕೇಳಿರಲಿಲ್ಲ. ಕೇಂದ್ರದಲ್ಲೂ ಆಹಾರ ಸುರಕ್ಷತೆ ಕಾಯ್ದೆ ತಂದದ್ದು ಕಾಂಗ್ರೆಸ್. ನಾವೇನು ಮಾಡಿದ್ದೇವೆ ಅದನ್ನು ಜನಕ್ಕೆ ಹೇಳಬೇಕಾಗಿದೆ ಎಂಬುದು ಗೊತ್ತಾಗಿದೆ. ಅದನ್ನು ಪಕ್ಷ ಈಗ ಹೆಚ್ಚು ಹೆಚ್ಚು ಮಾಡುತ್ತಿದೆ.

 ನಿಮ್ಮ ಕ್ಷೇತ್ರದಲ್ಲಿ ಯಾವ ವಿಚಾರ ಇಟ್ಟುಕೊಂಡು ಮತ ಕೇಳುತ್ತೀರಿ?

ಮಂಜುನಾಥ್: ಪ್ರತೀ ಬಾರಿಯೂ ನನ್ನ ಸೇವೆ, ನಾನು ಜನರನ್ನು ತಲುಪಿದ ರೀತಿಯೇ ಮುಖ್ಯ. ಬಿಜೆಪಿಯ ತಾರತಮ್ಯವೂ ನಡೆದಿದೆ. ಬೇರೆಯವರಿಗೆಲ್ಲ ನೂರಾರು ಕೋಟಿ ರೂ. ಕೊಟ್ಟರೆ ನನ್ನ ಕ್ಷೇತ್ರಕ್ಕೆ ೧೦ ಕೋಟಿ ರೂ. ಮಾತ್ರ ಕೊಟ್ಟರು. ಜನರಿಗೆ ನಾನು ಮಾಡಿರುವುದು ಗೊತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ತಾಲೂಕಿನಲ್ಲಿ ಶಾಂತಿ ಕಾಪಾಡಿಕೊಂಡು ಬಂದಿರುವುದು. ಧರ್ಮಧರ್ಮಗಳ ಸಂಘರ್ಷವಿದ್ದಾಗಲೂ ಹುಣಸೂರಿನಲ್ಲಿ ಅದಕ್ಕೆ ಆವಕಾಶವಾಗದಂತೆ ನೋಡಿಕೊಂಡಿದ್ದೇನೆ. ಜನರ ಮನಸ್ಸಿನಲ್ಲಿ ವೈಮನಸ್ಸು ತುಂಬದೆ ವಿಶ್ವಾಸದಿಂದ ತೆಗೆದುಕೊಂಡು ಹೋಗಿದ್ದೇನೆ. ಯುವಕರಿಗೆ ಉದ್ಯೋಗ ಭದ್ರತೆಯಂಥ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ಆ ದಿಕ್ಕಿನಲ್ಲಿ ಮತ್ತೊಂದು ಅವಕಾಶಕ್ಕಾಗಿ ಕೇಳುತ್ತೇನೆ.

Full View