ಉಡುಪಿ ರೈಲು ನಿಲ್ದಾಣದಲ್ಲಿ ವೇಳಾಪಟ್ಟಿ ಫಲಕವಿಲ್ಲ

Update: 2023-03-01 07:57 GMT

ಕೊಂಕಣ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್ ಪಕ್ಕದಲ್ಲಿಯೇ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ (ಉತ್ತರದಿಂದ ದಕ್ಷಿಣಕ್ಕೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ) ಎಲ್ಲಾ ರೈಲುಗಳ ವಿವರವು ಇರುವ ವೇಳಾಪಟ್ಟಿಯನ್ನು ಹಾಕಿದ್ದಾರೆ. ಆದರೆ ಪ್ರತಿದಿನ ೩೨ ಜೋಡಿ ರೈಲುಗಳು ನಿಲುಗಡೆ ಹೊಂದಿರುವ ಉಡುಪಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾದ ಉಡುಪಿಯಲ್ಲಿ ಈ ವೇಳಾಪಟ್ಟಿ ಫಲಕವೇ ಇಲ್ಲ.

ಪ್ರತೀ ವೇಳಾಪಟ್ಟಿ ಫಲಕದಲ್ಲಿ ರೈಲು ಸಂಖ್ಯೆ,  ಹೊರಡುವ ಹಾಗೂ ತಲುಪುವ ಸ್ಥಾನದ ನಿಲ್ದಾಣಗಳ ಹೆಸರು, ಸ್ಟೇಷನ್‌ಗೆ ಆಗಮನ-ನಿರ್ಗಮನ ವೇಳೆ, ರೈಲಿನ ಹೆಸರು, ವಾರದ ಯಾವ ದಿನಗಳಂದು ಬರುತ್ತದೆ, ಯಾವ ಪ್ಲ್ಯಾಟ್ ಫಾರ್ಮಿಗೆ ಬರುತ್ತದೆ,  ನಿಲ್ದಾಣದಿಂದ ಇರುವ ದೂರ, ವಿಶೇಷ ರೈಲುಗಳ ವಿವರ, ರದ್ದಾದ ರೈಲುಗಳ ಸೂಚಿ ಇತ್ಯಾದಿ ಇರುತ್ತದೆ.

ಈ ವೇಳಾಪಟ್ಟಿ ಫಲಕವನ್ನು ನೋಡಿ, ನಾಲ್ಕು ತಿಂಗಳ ಮುಂಚೆಯೇ ರೈಲು ಪ್ರಯಾಣಿಕರು ಮುಂಗಡ ಕಾದಿರಿಸಬೇಕಾದ ಟಿಕೆಟ್ ವಿವರಗಳನ್ನು ಅರ್ಜಿಯಲ್ಲಿ ತುಂಬಿ ಟಿಕೆಟ್ ಬುಕಿಂಗ್ ಮಾಡುತ್ತಾರೆ.

ಅಂತರ್ಜಾಲದ ಮೂಲಕ ಟಿಕೆಟ್ ಕಾದಿರಿಸಬಹುದಾದರೂ, ತಮಗೆ ಬೇಕಾದ ಕೋಚ್ ಹಾಗೂ ಸೀಟುಗಳನ್ನು ಪ್ರಯಾಣಿಕರು ಆರಿಸಲು ಸಾಧ್ಯವಿಲ್ಲ. ಯಾಕೆಂದರೆ ಅಂತರ್ಜಾಲದಲ್ಲಿ ಮೊದಲು ವಿವರಗಳನ್ನು ತುಂಬಿ, ಹಣ ಜಮೆ ಮಾಡಿದ ನಂತರ ಕೋಚ್ ಹಾಗೂ ಸೀಟುಗಳನ್ನು ನಮಗೆ ತಿಳಿಸಲಾಗುತ್ತದೆ. ಅಲ್ಲದೆ ಅಂತರ್ಜಾಲದಲ್ಲಿ ಬುಕಿಂಗ್ ಮಾಡುವಾಗ ನಾವು ವೃದ್ಧರು, ಗರ್ಭಿಣಿಯರು, ರೋಗಿಗಳು ಆಗಿದ್ದಲ್ಲಿ ಕೆಳ ಬರ್ತ್ ಎಂದು ನಮೂದಿಸಿದರೂ, ಅದು ಖಾಲಿ ಇದ್ದರೆ ಮಾತ್ರ ಸಿಗುತ್ತದೆ. ಇಲ್ಲವಾದಲ್ಲಿ ಮಧ್ಯಮ ಅಥವಾ ಮೇಲಿನ ಬರ್ತ್ ಸಿಗುತ್ತದೆ.

ಆದರೆ ಕೌಂಟರ್ ಟಿಕೆಟ್‌ನಲ್ಲಿ, ರೈಲ್ವೆ ಗಣಕಯಂತ್ರದ ಆ್ಯಪ್‌ಗಳಲ್ಲಿ, ಟಿಕೆಟಿಗೆ ಹಣ ನೀಡುವ ಮೊದಲೇ ನಮ್ಮ ಪ್ರಾಶಸ್ತ್ಯದ ಟಿಕೆಟ್ ನಮಗೆ ಸಿಗುತ್ತದೆಯೋ ಇಲ್ಲವೋ ಎಂದು ಮೊದಲೇ ಬುಕಿಂಗ್ ಮಾಸ್ಟರ್‌ನಲ್ಲಿ ಕೇಳಿ ತಿಳಿದುಕೊಳ್ಳಬಹುದಾಗಿದೆ.

ಹೀಗೆ ತೀರಾ ಅಗತ್ಯವಾದ ರೈಲು ವೇಳಾಪಟ್ಟಿಯನ್ನು, ಉಡುಪಿ ರೈಲು ನಿಲ್ದಾಣದಲ್ಲಿ ಪ್ರದರ್ಶಿಸದೆ ಇರುವುದು ರೈಲು ನಿಯಮಾವಳಿಗಳ ಪ್ರಕಾರ ಅಕ್ಷಮ್ಯ ಅಪರಾಧ.

ಉಡುಪಿ ರೈಲು ನಿಲ್ದಾಣವು ಇನ್ನಂಜೆಯಲ್ಲಿದ್ದು, ಉಡುಪಿ ಬಸ್ ನಿಲ್ದಾಣವು ದೂರದಲ್ಲಿರುವುದರಿಂದ, ಉಡುಪಿಯ ಬಸ್ಸು ನಿಲ್ದಾಣದಲ್ಲಿ ಕೂಡ, ರೈಲು ವೇಳಾಪಟ್ಟಿಯನ್ನು ಪ್ರದರ್ಶಿಸಿದರೆ ಉಡುಪಿ ರೈಲು ಪ್ರಯಾಣಿಕರಿಗೆ ತುಂಬಾ ಉಪಯೋಗವಾಗುತ್ತದೆ.

ಅಲ್ಲದೆ ಉಡುಪಿ ರೈಲು ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಕಾರ್ಯಾಚರಿಸುವುದು ಹೊರೆಯಾಗುತ್ತದೆಂದು; ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಎರಡರ ತನಕ ಕೇವಲ ಒಂದೇ ಒಂದು ಕೌಂಟರನ್ನು ನಡೆಸುತ್ತಿದೆ.

ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಉಡುಪಿ ರೈಲು ಪ್ರಯಾಣಿಕರ ಇಂತಹ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಕೂಡಲೇ ಪರಿಹಾರ ಒದಗಿಸಲು ಕಾರ್ಯಪ್ರವೃತ್ತರಾಗ ಬೇಕಾಗಿದೆ.