ರಾಜ್ಯದಿಂದ 4.50 ಲಕ್ಷ ಕೋಟಿ ರೂ.ಸುಲಿಗೆ ಮಾಡುತ್ತಿರುವ ಕೇಂದ್ರ ಸರಕಾರ: ಸಿದ್ದರಾಮಯ್ಯ ವಾಗ್ದಾಳಿ
''ಮೊಸರು, ಪೆನ್ನು, ಪೆನ್ಸಿಲ್ ಮೇಲೆ ಜಿಎಸ್‍ಟಿ ಹಾಕಿ ಜನರ ರಕ್ತ ಕುಡಿಯುತ್ತಿದ್ದಾರೆ...''
ಬೆಳಗಾವಿ, ಮಾ.1: ರಾಜ್ಯದಿಂದ ಪ್ರತಿ ವರ್ಷ 4.50 ಲಕ್ಷ ಕೋಟಿ ಹಣ ಕೇಂದ್ರ ಸರಕಾರಕ್ಕೆ ಸಂಗ್ರಹವಾಗುತ್ತದೆ. ಅದರಲ್ಲಿ ನಮಗೆ ತೆರಿಗೆ ಪಾಲಿನ ರೂಪದಲ್ಲಿ 37,500 ಕೋಟಿ ಮತ್ತು ಸಹಾಯಧನದ ರೂಪದಲ್ಲಿ 13 ಸಾವಿರ ಕೋಟಿ ಒಟ್ಟು 50 ಸಾವಿರ ಕೋಟಿ ವಾಪಸ್ ಬರುತ್ತಿದೆ. ರಾಜ್ಯದ ಜನರಿಂದ ನಾಲ್ಕೂವರೆ ಲಕ್ಷ ಕೋಟಿ ಸುಲಿಗೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬುಧವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತಬಾಳೇಕುಂದ್ರಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಬರುತ್ತಿರುವ ಅನುದಾನ ಕಡಿಮೆಯಾಗಿ ರಾಜ್ಯ ಸರಕಾರ ಸಾಲ ಮಾಡಬೇಕಾಗಿ ಬಂದಿದೆ. ಮುಂದಿನ ವರ್ಷ ರಾಜ್ಯ ಸರಕಾರ 77,750 ಕೋಟಿ ರೂ.ಸಾಲ ಮಾಡುತ್ತಿದೆ ಎಂದು ಕಿಡಿಗಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಪ್ರತಿ ಕನ್ನಡಿಗನ ಮೇಲೆ 78 ಸಾವಿರ ರೂ. ಸಾಲದ ಹೊರೆ ಹೊರಿಸಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿದವರು ಅಧಿಕಾರದಲ್ಲಿ ಇರಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಂದಿನಿಂದ ಸಿಲಿಂಡರ್ ಬೆಲೆ ಮತ್ತೆ 50 ರೂ. ಜಾಸ್ತಿಯಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಿಲಿಂಡರ್ ಬೆಲೆ 414ರೂ. ಇತ್ತು, ಇಂದು 1200 ರೂ. ಗೆ ಬಂದು ನಿಂತಿದೆ. ಬೆಳಗಾವಿಗೆ ಬಂದಿದ್ದ ವೇಳೆ ನರೇಂದ್ರ ಮೋದಿ ನಮ್ಮ ಸರಕಾರ ರೈತರಿಗೆ 6 ಸಾವಿರ ರೂಪಾಯಿ ಕೊಟ್ಟಿದೆ ಎಂದು ಹೇಳಿದರು. ರೈತರಿಗೆ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಮಜ್ಜಿಗೆ, ಹಾಲು, ಮೊಸರು, ಪೆನ್ನು, ಪೆನ್ಸಿಲ್ ಹೀಗೆ ಎಲ್ಲದರ ಮೇಲೆ ಜಿಎಸ್‍ಟಿ ಹಾಕಿ ಜನರ ರಕ್ತ ಕುಡಿಯುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಏನು ಮಾಡಿದ್ದೇನೆ ಎಂದು ಜನರ ಮುಂದೆ ಪಟ್ಟಿ ಇಟ್ಟಿದ್ದಾರೆ. ಬಿಜೆಪಿಯವರು ಕೊಡುವ ಸರ್ಟಿಫಿಕೇಟ್ ಅವರಿಗೆ ಬೇಡ, ನೀವು ಕೊಡುವ ಸರ್ಟಿಫಿಕೇಟ್ ಅಷ್ಟೇ ಮುಖ್ಯ. ಇವರು ನಿರ್ಮಾಣ ಮಾಡಿರುವ ಶಿವಾಜಿ ಪ್ರತಿಮೆಯನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಮತ್ತು ಈ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಬರುತ್ತಾರೆ ಎಂದರೆ ಎಂಥಾ ನಾಚಿಕೆಗೇಡಿನ ವಿಷಯ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂಜಯ್ ಪಾಟೀಲ್ ಮುಖವನ್ನೆ ನಾನು ಇದುವರೆಗೆ ನೋಡಿಲ್ಲ. ಆದರೂ ಆ ಮನುಷ್ಯ ಶಿವಾಜಿ ಪ್ರತಿಮೆ ಮಾಡಲು ಸಿದ್ದರಾಮಯ್ಯ ಬಳಿ 50 ಲಕ್ಷ ರೂ.ಕೇಳಿದ್ದೆ, ಅವರು ಕೊಡಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ನನಗೂ ಶಿವಾಜಿ ಮಹರಾಜರ ಬಗ್ಗೆ ಅಪಾರವಾದ ಗೌರವ ಇದೆ, ನನ್ನ ಬಳಿ ಬಂದೇ ಇರಲಿಲ್ಲ ಗಿರಾಕಿ, ಈಗ ಸುಳ್ಳು ಹೇಳಿಕೊಂಡು ತಿರುಗಾಡುತ್ತಾ ಇದ್ದಾನೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇಂದ ಯಾರೇ ಲಕ್ಷ್ಮಿ ಹೆಬ್ಬಾಳ್ಕರ್ ಎದುರಾಳಿಯಾಗಿ ನಿಂತರೂ ಅವರ ಠೇವಣಿ ಹೋಗಬೇಕು ಅಂಥಾ ತೀರ್ಪನ್ನು ನೀವು ನೀಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ. ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದು, ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ ಆರಂಭ ಮಾಡಿದ್ದು ನಮ್ಮ ಸರಕಾರ ಎಂದು ಸಿದ್ದರಾಮಯ್ಯ ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ 40 ಪರ್ಸೆಂಟ್ ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬಿಲ್ ಹಣ ಕೊಡಲಿಲ್ಲವೆಂದು ಆತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದರು. ರುಪ್ಸಾ ಸಂಸ್ಥೆಯವರು ಹಾಗೂ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ, ಒಬ್ಬ ಸ್ವಾಮೀಜಿ ಮಠಕ್ಕೆ ನೀಡುವ ಅನುದಾನದಲ್ಲೂ ಲಂಚ ಕೇಳುತ್ತಾರೆ ಎಂಬ ಆರೋಪ ಮಾಡಿದರು. ಏನಪ್ಪಾ ಬೊಮ್ಮಾಯಿ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಅವರು ಪ್ರಶ್ನಿಸಿದರು.
ನಾವು ರಾಜ್ಯದ ಜನರಿಗೆ 3 ಭರವಸೆಗಳನ್ನು ನೀಡಿದ್ದೇವೆ. ಪ್ರತಿ ಬಡಕುಟುಂಬದ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ, ರಾಜ್ಯದ ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನಂತೆ ವರ್ಷಕ್ಕೆ 24 ಸಾವಿರ ರೂ. ನೀಡುತ್ತೇವೆ. ರಾಜ್ಯದ ಜನ ನೆಮ್ಮದಿಯಿಂದ, ಅಣ್ಣ ತಮ್ಮಂದಿರಂತೆ ಬದುಕಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.