20-20 ಸರಕಾರದಲ್ಲಿ ಬಿಎಸ್‍ವೈಗೆ ಅಧಿಕಾರ ತಪ್ಪಲು ಆರೆಸ್ಸೆಸ್, ಬಿಜೆಪಿಯ ಕೆಲ ಮುಖಂಡರು ಕಾರಣ: ಕುಮಾರಸ್ವಾಮಿ

Update: 2023-03-01 14:27 GMT

ಚಿಕ್ಕಮಗಳೂರು, ಮಾ.1: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಜೆಪಿಯ ಕೆಲ ಮುಖಂಡರು ಮತ್ತು ಆರೆಸ್ಸೆಸ್ ನವರ ಕೈವಾಡದಿಂದ ಬಿಎಸ್‍ವೈಗೆ ಅಧಿಕಾರ ಕೈತಪ್ಪಿತು. ಆದರೆ ಬಿಜೆಪಿಯವರು ನನಗೆ ವಚನಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ರಾತ್ರಿ ನಗರದ ಆಝಾದ್‍ಪಾರ್ಕ್ ವೃತ್ತದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಯ ಬಹಿರಂಗಸಭೆಯಲ್ಲಿ ಮಾತನಾಡಿದ ಅವರು, ಅಂದು ಬಿಜೆಪಿಯ ಕೆಲ ಮುಂಖಡರು ಮತ್ತು ಆರೆಸೆಸ್ ಮುಖಂಡರ ಪಿತೂರಿಯಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲು ಸಾಧ್ಯವಾಗಲಿಲ್ಲ. ಆದರೆ ಈ ವಿಚಾರದಲ್ಲಿ ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಲವು ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಮದ ಫಸಲ್‍ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ, ಈ ಯೋಜನೆ ಕಂಪೆನಿಗಳನ್ನು ಉದ್ದಾರ ಮಾಡುತ್ತಿವೆಯೇ ಹೊರತು ರೈತರನ್ನು ಉದ್ದಾರ ಮಾಡುತ್ತಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪೂರ್ಣ ಪ್ರಮಾಣದ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ತೆಲಂಗಾಣ ಮಾದರಿಯ ರೈತ ಬಂಧು ಯೋಜನೆ ಸೇರಿದಂತೆ ಅದಕ್ಕೂ ಉತ್ತಮವಾದ ಯೋಜನೆಗಳನ್ನು ಜಾರಿ ಮಾಡುತ್ತೇನೆ. ಪ್ರತೀ ಎಕರೆಗೆ 10ಸಾವಿರ ರೂ. ಅನುದಾನ ನೀಡುತ್ತೇನೆ ಎಂದು ತಿಳಿಸಿದರು.

ಸಿ.ಟಿ.ರವಿ ವಿರುದ್ಧ ಹರಿಹಾಯ್ದ ಹೆಚ್ಡಿಕೆ, ಸಿ.ಟಿ.ರವಿ ಇಲ್ಲಿನ ಕೆರೆ ಮತ್ತಿತರರ ಕಾಮಗಾರಿಗಳಲ್ಲಿ ಎಷ್ಟು ಕೋಟಿ ಹೊಡೆದಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನ ಬಗ್ಗೆ, ನನ್ನ ಕೈ ಬಗ್ಗೆ ಗೋಲ್ಡನ್ ಹ್ಯಾಂಡ್ ಎಂದು ಹೇಳಿದ್ದ ವ್ಯಕ್ತಿ, ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾನೆ. ಆ ಮನುಷ್ಯ ಏನೇನು ಮಾಡಿದ್ದಾನೆ ಎನ್ನುವುದು ನನಗೆ ಗೊತ್ತಿದೆ, ಎಲ್ಲವನ್ನೂ ಕಕ್ಕಿಸುವ ಕಾಲ ಬಂದಿದೆ ಎಂದು ಕಿಡಿಕಾರಿದರು.

ಬಿಜೆಪಿಯವರು ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ. ಇಲ್ಲಿ ಬಿಜೆಪಿ ಸರಕಾರದ ಸಚಿವರು ನಡೆಸಿರುವ ಅಕ್ರಮ ಮತ್ತು ಭ್ರಷ್ಟಚಾರದ ತನಿಖೆ ನಡೆಸಿದರೇ ಪರಪ್ಪನ ಅಗ್ರಹಾರ ಜೈಲು ಸಾಕಾಗುವುದಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ನಿಜಕ್ಕೂ ಧಮ್ಮು, ತಾಕತ್ತು ಇದ್ದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಸವಾಲು ಹಾಕಿದರು.

Similar News