ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ | ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ

ಮಂಡ್ಯ ಬಳಿ ಹೆದ್ದಾರಿಯಲ್ಲೇ ಲ್ಯಾಂಡ್ ಆಗಲಿದೆ ಪ್ರಧಾನಿ ಹೆಲಿಕಾಪ್ಟರ್

Update: 2023-03-01 17:06 GMT

ಮೈಸೂರು,ಮಾ.1: ಇದೇ ತಿಂಗಳ ಮಾರ್ಚ್ 12ರಂದು ಬೆಳಗ್ಗೆ 11 ಗಂಟೆಗೆ ಮೈಸೂರು -ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನ ಮಂಡಕಳ್ಳಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಂಡ್ಯ ಬಳಿ ಗೆಜ್ಜೆಲೆಗೆರೆ ಹೈವೇನಲ್ಲೇ  ಚಾಪರ್ ಲ್ಯಾಂಡ್ ಆಗಲಿದೆ. ಬಳಿಕ ಪಕ್ಕದಲ್ಲೇ ಸಾರ್ವಜನಿಕ  ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಅವರು ರೋಡ್ ಶೋ ನಡೆಸಲು ಅನುಮತಿ ಕೇಳಿದ್ದೇವೆ. ಎಸ್‍ಪಿಜಿ ಅವರು ಅಕಾಶ ನೀಡಿದರೆ ರೋಡ್ ಶೋ ಮಾಡುತ್ತೇವೆ. ಸದ್ಯ ಅವರ ಅನುಮತಿಗಾಗಿ ಕಾಯುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಅನುಮತಿ ನೀಡಬಹುದು ಎಂದರು.

ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಹೆದ್ದಾರಿಯ ಸರ್ವಿಸ್ ರಸ್ತೆ ಬಗ್ಗೆ ಕೆಲವರು ಹೈಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಈ ಹಿನ್ನೆಲೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಕೆಲಸ ವಿಳಂಬವಾಗುತ್ತಿದೆ. ಸ್ಟೇ ತೆರವು ಬಗ್ಗೆ ವಕೀಲರ ಬಳಿ ಮಾತುಕತೆ ನಡೆಸಿದ್ದೇವೆ. ಆದಷ್ಟು ಬೇಗ ತಡೆಯಾಜ್ಞೆ ತೆರವುಗೊಳಿಸಿ ಸರ್ವಿಸ್ ರೋಡ್ ನಿರ್ಮಾಣ ಮಾಡುತ್ತೇವೆ ಎಂದರು.

ಸರ್ವೀಸ್ ರಸ್ತೆ ನಿರ್ಮಾಣ ಮಾಡದೆ ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆ ಮಾಡಿದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಸರ್ವೀಸ್ ರಸ್ತೆ ಮಾಡಲಾಗಿದಿಯೇ, ಸುಮ್ಮನೆ ಕಾಂಗ್ರೆಸ್ ನವರು ಆರೋಪ ಮಾಡಬಾರದು. ರಾಷ್ಟ್ರೀಯ ಹೆದ್ದಾರಿ ಎಂದರೆ ಎಲ್ಲಾ ಒಂದೇ ಇವರು ಸರ್ವೀಸ್ ರಸ್ತೆ ಮಾಡದೇ ನಮ್ಮ ಬಗ್ಗೆ ಹೇಳುವುದು ಬೇಡ. ನಾವು ರಾಷ್ಟ್ರೀಯ ಹೆದ್ದಾರಿ ನಿಯಮಗಳಿಗೆ ಅನುಗುಣವಾಗಿಯೇ ಉದ್ಘಾಟನೆ ಮಾಡಲಿದ್ದೇವೆ ಎಂದು ಹೇಳಿದರು.

ಮಾರ್ಚ್ 14 ರವರೆಗೆ ಟೋಲ್ ಸಂಗ್ರಹ ಮಾಡುವುದಿಲ್ಲ. ಇದಾದ ನಂತರ ಬೆಂಗಳೂರು-ನಿಡಗಟ್ಟದವರೆಗೆ ಮಾತ್ರ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.

Similar News