ಹಾಸನ | ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Update: 2023-03-02 00:16 IST
ಅರಸೀಕೆರೆ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಬುಧವಾರ ರಾತ್ರಿ ವರದಿಯಾಗಿದೆ.
ಚಿಕ್ಕಗಂಡಸಿ ಗ್ರಾಮದ ನಿವಾಸಿ ರಮೇಶ್ (45) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಬುಧವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಸಚಿವರು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಪೆಟ್ರೋಲ್ ಬಂಕ್‌ನಿಂದ ಬೈಕ್ ಸವಾರ ಬೆಂಗಾವಲು ವಾಹನಕ್ಕೆ ದಿಢೀರ್ ಅಡ್ಡ ಬಂದಿದ್ದಾರೆ. ಇದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.