ಪಿಎಂ-ಕಿಸಾನ್ ಯೋಜನೆಯ ಬಗ್ಗೆ ಪ್ರಧಾನಿ ಹೇಳಿದ ಸುಳ್ಳುಗಳು

Update: 2023-03-02 05:20 GMT

2023ರ ಫೆಬ್ರವರಿ 7ರಂದು ಮೋದಿ ಸರಕಾರ ರಾಜ್ಯ ಸಭೆಯಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರವೇ ಒಟ್ಟು 12 ಕಂತುಗಳಲ್ಲಿ ಪಿಎಂ ಕಿಸಾನ್ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿದ್ದು 11ನೇ ಕಂತಿನಲ್ಲಿ 10.45 ಕೋಟಿ ರೂ. ರೈತರಿಗೆ ವರ್ಗಾವಣೆಯಾದದ್ದೇ ಈವರೆಗಿನ ಅತಿ ಹೆಚ್ಚು ವರ್ಗಾವಣೆ. ಆದರೆ 12ನೇ ಕಂತಿನಲ್ಲಿ ಅದು 8.55 ಕೋಟಿ ರೂ.ಗೆ ಕುಸಿಯಿತು. ಬೆಳಗಾವಿಯಲ್ಲಿ ಮೋದಿಯವರೇ ಘೋಷಣೆ ಮಾಡಿದಂತೆ 13ನೇ ಕಂತಿಗೆ ಬಿಡುಗಡೆ ಮಾಡಿರುವುದು ಕೇವಲ 16,000 ಕೋಟಿ ರೂ. ಅಂದರೆ ಹೆಚ್ಚೆಂದರೆ ಅದು ತಲುಪುವುದು 8 ಕೋಟಿ ಜನರಿಗೆ ಮಾತ್ರ!

ಸರಕಾರದ ಅಂಕಿಅಂಶಗಳನ್ನು ನೋಡಿದಾಗ 2019ರ ನಂತರ ಯಾವ್ಯಾವ ರಾಜ್ಯಗಳಲ್ಲಿ ಯಾವ ವರ್ಷ ಚುನಾವಣೆಗಳು ನಡೆಯಲಿವೆಯೋ ಅದರ ಹಿಂದಿನ ಪಿಎಂ ಕಿಸಾನ್ ಕಂತುಗಳ ಫಲಾನುಭವಿಗಳು ಆ ರಾಜ್ಯದಲ್ಲಿ ಹಲವಾರು ಪಟ್ಟು ಹೆಚ್ಚಾಗುತ್ತಾರೆ. ಮತ್ತು ಒಂದು ವೇಳೆ ಆ ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ಫಲಿತಾಂಶ ಬರದಿದ್ದರೆ ಮರು ಕಂತಿನಿಂದಲೇ ಆ ರಾಜ್ಯಗಳ ಫಲಾನುಭವಿಗಳ ಸಂಖ್ಯೆ ದಿಢೀರನೆ ಕುಸಿದಿರುವುದನ್ನು ಗಮನಿಸಬಹುದು.

ಚುನಾವಣೆ ಮುಗಿಯುವ ತನಕ ಕರ್ನಾಟಕದಲ್ಲೇ ಮೊಕ್ಕಾಂ ಹಾಕುವಂತಿರುವ ಪ್ರಧಾನಿ ಮೋದಿಯವರು ಮೊನ್ನೆ ಶಿವಮೊಗ್ಗದಲ್ಲಿ ಕರ್ನಾಟಕದ ಜನಜಾತಿಯ ಹೆಮ್ಮೆಯೆಂದು ‘ಅಡಿಯರ್’ ಮತ್ತು ‘ಕರಿಬಪ್ಪ’ ಎಂಬವರನ್ನು ನಾಡಿನ ಜನತೆಗೆ ಪರಿಚಯಿಸಿದ್ದಾರೆ. ಹಾಗೆಯೇ ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತನ್ನು ಬಿಡುಗಡೆ ಮಾಡುತ್ತಾ ತಮ್ಮ ಸರಕಾರದ ರೈತಪರತೆಯ ಬಗ್ಗೆ ಬಾಯಿಗೆ ಬಂದ ಹಾಗೆ ಕೊಚ್ಚಿಕೊಂಡಿದ್ದಾರೆ.

ಪಿಎಂ ಕಿಸಾನ್ ಯೋಜನೆಯ ಹಿಂದಿನ ಮೋದಿ ಸರಕಾರದ ಉದ್ದೇಶಗಳು ಮತ್ತು ಅದರ ಸಾಧನೆಗಳನ್ನು, ಅದರ ಬಗ್ಗೆ ಮೋದಿ ಸರಕಾರವೇ ಬೇರೆಬೇರೆ ಸಂದರ್ಭದಲ್ಲಿ ನೀಡಿರುವ ಅಂಕಿಅಂಶಗಳ ಜೊತೆ ಹೋಲಿಕೆ ಮಾಡಿದರೂ ಬೆಳಗಾವಿಯ ಪ್ರಧಾನಿ ಭಾಷಣ ಎಷ್ಟು ಸುಳ್ಳೆಂದು ಗೊತ್ತಾಗುತ್ತದೆ.

1. ಪಿಎಂ-ಕಿಸಾನ್ ಯೋಜನೆ ಫಲಾನುಭವಿಗಳು ಕೆಲವೊಮ್ಮೆ 8 ಕೋಟಿ ರೈತಾಪಿಯೇ ವಿನಾ ಎಂದಿಗೂ 14 ಕೋಟಿಯಲ್ಲ.  

ಈ ಯೋಜನೆಯನ್ನು ಶುರು ಮಾಡಿದ್ದೇ 2019ರ ಸಾರ್ವತ್ರಿಕ ಚುನಾವಣೆಯ ಮುನ್ನ. ಆಗ ಪುಲ್ವಾಮ ಬಾಂಬ್ ದಾಳಿ-ಅದಕ್ಕೆ ಬಾಲಾಕೋಟ್ ಪ್ರತೀಕಾರಗಳು ಸಂಭವಿಸಿರಲಿಲ್ಲ. ದೇಶದೆಲ್ಲೆಡೆ ರೈತರು ದೊಡ್ಡ ಹೋರಾಟ ನಡೆಸಿದ್ದರು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಅರ್ಹ ಫಲಾನುಭವಿಗಳಿಗೆ ವರ್ಷಕ್ಕೆ 72,000 ರೂ. ವರ್ಗಾಯಿಸುವ ನ್ಯಾಯ ಯೋಜನೆಯನ್ನು ಪ್ರಕಟಿಸಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಮೋದಿ ಸರಕಾರ ಘೋಷಿಸಿತ್ತು. 

ಚುನಾವಣೆಗೆ ಸ್ವಲ್ಪಮುನ್ನ ಘೋಷಿತವಾದ ಈ ಯೋಜನೆಯ ಮೂಲಕ ದೇಶದ ಶೇ.85ರಷ್ಟು ರೈತ ಕುಟುಂಬಗಳ ಅಕೌಂಟಿಗೆ ಮೂರು ಕಂತಿನಲ್ಲಿ 6,000 ರೂ. ವರ್ಗಾಯಿಸಲಾಗುವುದು ಎಂದು ದೊಡ್ಡದಾಗಿ ಘೋಷಿಸಲಾಗಿತ್ತು. 2015ರ ಕೃಷಿ ಸೆನ್ಸಸ್ ಪ್ರಕಾರ ದೇಶದಲಿ 14.5 ಕೋಟಿ ರೈತ ಕುಟುಂಬಗಳಿವೆ. 2019ರ ಸರಕಾರಿ  ಘೋಷಣೆಯೊಂದು ಅಷ್ಟೂ ರೈತರಿಗೆ ಪಿಎಂ ಕಿಸಾನ್ ಹಣ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿತ್ತು.

ಹಾಗೆಯೆ ಆಗಿದ್ದಲ್ಲಿ ಬಜೆಟ್‌ನಲ್ಲಿ ಈ ಬಾಬತ್ತಿಗೆ 87,000 ಕೋಟಿ ರೂ. ಎತ್ತಿಡಬೇಕಿತ್ತು. ಆದರೆ ಸರಕಾರವೇ ನೀಡಿರುವ ಅಂಕಿಅಂಶಗಳನ್ನು ನೋಡಿದರೆ 2019ರಿಂದಾಚೆಗೆ ಯಾವ ವರ್ಷವೂ ಸರಕಾರ ಅದರ ಶೇ.75ಕ್ಕಿಂತ ಹೆಚ್ಚು ಹಣವನ್ನು ಬಜೆಟ್‌ನಲ್ಲಿ ಎತ್ತಿಡಲಿಲ್ಲ. ಉದಾಹರಣೆಗೆ ಇದಕ್ಕಾಗಿ 2019-20ರಲ್ಲಿ ವೆಚ್ಚ ಮಾಡಲಾದ ವಾಸ್ತವಿಕ ಮೊತ್ತ 48,000 ಕೋಟಿ ರೂ. (ಅಂದರೆ ಘೋಷಿಸಲಾದ ಯೋಜನೆಗೆ ಬೇಕಾದ ಮೊತ್ತದ ಅರ್ಧದಷ್ಟು ಮಾತ್ರ), 2020-21ರಲ್ಲಿ 60,990 ಕೋಟಿ ರೂ., 2021-22ರಲ್ಲಿ 66,825 ಕೋಟಿ ರೂ., 2023-24ರ ಬಜೆಟ್‌ನಲ್ಲಿ ಈ ಬಾಬತ್ತಿಗೆ ಕೇವಲ 60,000 ಕೋಟಿ ರೂ. ವೆಚ್ಚವೆಂದು ಅಂದಾಜು ಮಾಡಲಾಗಿದೆ. ಅಂದರೆ ಇದರ ಶೇ. 75ರಷ್ಟು ಮಾತ್ರ ಸರಾಸರಿ ವೆಚ್ಚವಾಗಲಿದೆ.

ಇದಲ್ಲದೆ 2023ರ ಫೆಬ್ರವರಿ 7ರಂದು ಮೋದಿ ಸರಕಾರ ರಾಜ್ಯ ಸಭೆಯಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರವೇ ಒಟ್ಟು 12 ಕಂತುಗಳಲ್ಲಿ ಪಿಎಂ ಕಿಸಾನ್ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿದ್ದು 11ನೇ ಕಂತಿನಲ್ಲಿ 10.45 ಕೋಟಿ ರೂ. ರೈತರಿಗೆ ವರ್ಗಾವಣೆಯಾದದ್ದೇ ಈವರೆಗಿನ ಅತಿ ಹೆಚ್ಚು ವರ್ಗಾವಣೆ. ಆದರೆ 12ನೇ ಕಂತಿನಲ್ಲಿ ಅದು 8.55 ಕೋಟಿ ರೂ.ಗೆ ಕುಸಿಯಿತು. ಬೆಳಗಾವಿಯಲ್ಲಿ ಮೋದಿಯವರೇ ಘೋಷಣೆ ಮಾಡಿದಂತೆ 13ನೇ ಕಂತಿಗೆ ಬಿಡುಗಡೆ ಮಾಡಿರುವುದು ಕೇವಲ 16,000 ಕೋಟಿ ರೂ. ಅಂದರೆ ಹೆಚ್ಚೆಂದರೆ ಅದು ತಲುಪುವುದು 8 ಕೋಟಿ ಜನರಿಗೆ ಮಾತ್ರ!

ರಾಜ್ಯಸಭೆಯಲ್ಲಿ ಸರಕಾರ ಕೊಟ್ಟಿರುವ ಉತ್ತರದ ಬಗ್ಗೆ ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆಯಬಹುದು: https://pqals.nic.in/annex/1711/AU719.pdf

2. ಆದರೆ 11ನೇ ಕಂತಿನ ಫಲಾನುಭವಿಗಳು ಕೇವಲ 3.87 ಕೋಟಿ ಹೊರತು 10.45 ಕೋಟಿಯಲ್ಲ!

ಸರಕಾರದ ಅಂಕಿಅಂಶಗಳ ಪ್ರಕಾರ ಈವರೆಗೆ ಪಿಎಂ ಕಿಸಾನ್ ಯೋಜನೆಯ ಕಂತುಗಳಲ್ಲಿ 11ನೇ ಕಂತಿನಲ್ಲಿ ಅತಿ ಹೆಚ್ಚು ಫಲಾನುಭವಿಗಳು-10.45 ಕೋಟಿ ಲಾಭ ಪಡೆದಿದ್ದಾರೆ.

ಆದರೆ ಇದು ಮತ್ತೊಂದು ದೊಡ್ಡ ಸುಳ್ಳು.

11ನೇ ಕಂತಿನ ಹಣವನ್ನು 2022ರ ಮೇ ತಿಂಗಳಲ್ಲಿ ವರ್ಗಾಯಿಸಲಾಯಿತು. ಇದರ ಬಗ್ಗೆ 2022ರ ಸೆಪ್ಟಂಬರ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಕನ್ಹಯ್ಯ ಕುಮಾರ್ ಆರ್‌ಟಿಐ ನಡಿ ಕೇಳಿದ ಪ್ರಶ್ನೆಗೆ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯೇ ನೀಡಿದ ಉತ್ತರದ ಪ್ರಕಾರ 11ನೇ ಕಂತಿನ ಫಲಾನುಭವಿಗಳು ಕೇವಲ 3.87 ಕೋಟಿ ಮಾತ್ರ!

ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆಯಬಹುದು: https://www.thehindu.com/news/national/pm-kisan-payout-dropped-67-in-three-years-rti-reply/article66156846.ece

ಈ ವರದಿಯ ಪ್ರಕಾರ ಕರ್ನಾಟಕದಲ್ಲಿ 55 ಲಕ್ಷ ಫಲಾನುಭವಿಗಳು ರಿಜಿಸ್ಟರ್ ಆಗಿದ್ದರೂ, 11ನೇ ಕಂತಿನ ಲಾಭ ಪಡೆದದ್ದು ಕೇವಲ 2.5 ಲಕ್ಷ ರೈತರು ಮಾತ್ರ. ಮಹಾರಾಷ್ಟ್ರದಲ್ಲಿ 88 ಲಕ್ಷ ರೈತರು ರಿಜಿಸ್ಟರ್ ಆಗಿದ್ದರೂ 11ನೇ ಕಂತಿನ ಲಾಭ ಪಡೆದವರು ಕೇವಲ 12,000 ರೈತರು.

ಇದು ಸಾಕ್ಷಾತ್ ಕೇಂದ್ರ ಸರಕಾರದ ಕೃಷಿ ಇಲಾಖೆಯೇ ಕೊಟ್ಟ ಉತ್ತರ. ಆದರೆ ಯಾವಾಗ ಈ ಉತ್ತರದಿಂದ ಸರಕಾರದ ಮುಖಭಂಗವಾಯಿತೋ ಕೂಡಲೇ ಮೋದಿ ಸರಕಾರ ಅದಕ್ಕೊಂದು ತಿದ್ದುಪಡಿಯನ್ನು ನೀಡಿತು:

ಫಲಾನುಭವಿಗಳ ಪಟ್ಟಿ ತಯಾರಿಸುವುದು ರಾಜ್ಯ ಸರಕಾರಗಳ ಕರ್ತವ್ಯ. ಇದರಲ್ಲಿ ಯಾವುದೇ ಸೋರಿಕೆ ಮತ್ತು ದುರ್ಬಳಕೆಯಾಗದಿರುವಂತೆ ಆಧಾರ್ ತಪಾಸಣೆ, ಪಹಣಿ ತಪಾಸಣೆ ಇತ್ಯಾದಿಗಳನ್ನೇ ಮಾಡಿಯೇ ಕೊಡಲಾಗುವುದೆಂದು ಸಬೂಬು ಹೇಳಿತು. ಹಾಗೂ ಯಾವುದೇ ಪುರಾವೆಯಿಲ್ಲದೆ ತನ್ನ ಕಡತಗಳಲ್ಲಿ 11ನೇ ಕಂತಿನ ಫಲಾನುಭವಿಗಳ ಸಂಖ್ಯೆಯನ್ನು ಅನಾಮತ್ತು 3.87 ಕೋಟಿಯಿಂದ 10.45 ಕೋಟಿ ರೂ.ಗೆ ಏರಿಸಿಬಿಟ್ಟಿತು!!

3. ಪಿಎಂಕಿಸಾನ್ ಯೋಜನೆ ಎಂಬುದು ಮೋದಿ ಸರಕಾರ ಮಾಡುತ್ತಿರುವ ಚುನಾವಣಾ ಭ್ರಷ್ಟಾಚಾರ?

ಹೀಗೊಂದು ಅನುಮಾನ ರಾಜ್ಯಸಭೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಬಗ್ಗೆ ಸರಕಾರವೇ ನೀಡಿರುವ ಅಂಕಿಅಂಶಗಳನ್ನು ನೋಡಿದಾಗ ಬಲವಾಗಿ ಹುಟ್ಟುತ್ತದೆ.

ಸರಕಾರದ ಅಂಕಿಅಂಶಗಳನ್ನು ನೋಡಿದಾಗ 2019ರ ನಂತರ ಯಾವ್ಯಾವ ರಾಜ್ಯಗಳಲ್ಲಿ ಯಾವ ವರ್ಷ ಚುನಾವಣೆಗಳು ನಡೆಯಲಿವೆಯೋ ಅದರ ಹಿಂದಿನ ಪಿಎಂ ಕಿಸಾನ್ ಕಂತುಗಳ ಫಲಾನುಭವಿಗಳು ಆ ರಾಜ್ಯದಲ್ಲಿ ಹಲವಾರು ಪಟ್ಟು ಹೆಚ್ಚಾಗುತ್ತಾರೆ. ಮತ್ತು ಒಂದು ವೇಳೆ ಆ ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ಫಲಿತಾಂಶ ಬರದಿದ್ದರೆ ಮರು ಕಂತಿನಿಂದಲೇ ಆ ರಾಜ್ಯಗಳ ಫಲಾನುಭವಿಗಳ ಸಂಖ್ಯೆ ದಿಢೀರನೆ ಕುಸಿದಿರುವುದನ್ನು ಗಮನಿಸಬಹುದು.

ಉದಾಹರಣೆಗೆ ತಮಿಳುನಾಡಿನಲ್ಲಿ 2021ರ ಎಪ್ರಿಲ್‌ನಲ್ಲಿ ಚುನಾವಣೆ ನಡೆಯಿತಷ್ಟೆ. ಅಲ್ಲಿ ಬಿಜೆಪಿಯು ಎಐಡಿಎಂಕೆ ಜೊತೆಗೂಡಿ ಅಧಿಕಾರ ಪಡೆದುಕೊಳ್ಳಲು ಪಕ್ಷ ಬಲದ ಜೊತೆಗೆ ಕೇಂದ್ರದ ಬಲವನ್ನು ಬಳಸಿತು.

ಹೀಗಾಗಿ 2020-21ರಲ್ಲಿ ನೀಡಲಾದ ಪಿಎಂ ಕಿಸಾನ್ ಕಂತುಗಳ ಫಲಾನುಭವಿಗಳ ಸಂಖ್ಯೆ 30ಲಕ್ಷದಿಂದ 44 ಲಕ್ಷದವರೆಗೆ ಏರಿತು. ಈಗ ತಮಿಳುನಾಡಿನ ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆ ಕೇವಲ 22 ಲಕ್ಷಕ್ಕೆ ಇಳಿಸಲಾಗಿದೆ.

ಹಾಗೆಯೇ 2021ರ ಎಪ್ರಿಲ್‌ನಲ್ಲಿ ಅಸ್ಸಾಮಿನಲ್ಲೂ ಚುನಾವಣೆ ನಡೆಯಿತಷ್ಟೆ. 2020ರುದ್ದಕ್ಕೂ ಅಲ್ಲಿ ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆ 24ಲಕ್ಷಗಳಷ್ಟಿತ್ತು. ಫಲಾನುಭವಿಗಳ ನೋಂದಾವಣೆಯಲ್ಲಿ ರಾಜ್ಯ ಬಿಜೆಪಿ ಸರಕಾರ ನಡೆಸಿರುವ ಹೇರಾಫೇರಿಗಳ ಬಗ್ಗೆ ಹೈಕೋರ್ಟಿನಲ್ಲೂ ದೂರು ಸಲ್ಲಿಸಿ ಕೋರ್ಟ್ ಬಿಜೆಪಿ ಸರಕಾರಕ್ಕೆ ಛೀಮಾರಿಯನ್ನು ಹಾಕಿತ್ತು. ಅದೇನೇ ಇರಲಿ ಈಗ ಅಲ್ಲಿನ ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆ 4.88 ಲಕ್ಷಕ್ಕೆ ಇಳಿದಿದೆ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಅಸ್ಸಾಮಿನಲ್ಲಿ ಪಿಎಂ ಕಿಸಾನ್ ಹಣವನ್ನು ಬೇಕಾಬಿಟ್ಟಿಯಾಗಿ, ಚುನಾವಣಾ ಉದ್ದೇಶಗಳಿಂದ ಐದು ಪಟ್ಟು ಹೆಚ್ಚು ಹಂಚಿತ್ತು ಎಂದಾಗಲಿಲ್ಲವೇ?!

ಕೇರಳದ ಶಾಸನಸಭೆಗೆ 2021ರ ಎಪ್ರಿಲ್‌ನಲ್ಲಿ ಚುನಾವಣೆ ನಡೆಯಿತು. ಅದಕ್ಕೆ ಮುಂಚೆ 2020ರ ಡಿಸೆಂಬರ್ ಹಾಗೂ 2021ರ ಮಾರ್ಚ್‌ನಲ್ಲಿ ನೀಡಲಾದ ಪಿಎಂ ಕಿಸಾನ್ ಕಂತುಗಳಲ್ಲಿ ಕೇರಳ ರಾಜ್ಯದ ಫಲಾನುಭವಿಗಳ ಸಂಖ್ಯೆ 34 ಲಕ್ಷ. ಈಗ ಚುನಾವಣೆಯಾದ ಮೇಲೆ ಕೇವಲ 20 ಲಕ್ಷ

ಉತ್ತರಪ್ರದೇಶದಲ್ಲಿ 2022ರ ಎಪ್ರಿಲ್‌ನಲ್ಲಿ ಚುನಾವಣೆ ನಡೆಯಿತು. ಅದಕ್ಕೆ ಮುನ್ನ 2022ರ ಮಾರ್ಚ್‌ನಲ್ಲಿ ನೀಡಲಾದ ಪಿಎಂ ಕಿಸಾನಿನ  10ನೇ ಕಂತಿನಲ್ಲಿ ಉತ್ತರಪ್ರದೇಶದ ಫಲಾನುಭವಿಗಳ ಸಂಖ್ಯೆ 2.41 ಕೋಟಿ. ಚುನಾವಣೆಯ ನಂತರ 12ಮೇ ಕಂತಿನ ವೇಳೆಗೆ ಆ ಸಂಖ್ಯೆ 1.84 ಕೋಟಿಗೆ ಇಳಿಯಿತು.

ಹಾಗೆಯೇ ಪಂಜಾಬಿನಲ್ಲಿ 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಿತಷ್ಟೆ. ಅದಕ್ಕೆ ಪೂರ್ವಭಾವಿಯಾಗಿ 2021ರ ನವೆಂಬರ್‌ನಲ್ಲಿ ನೀಡಲಾದ ಪಿಎಂ ಕಿಸಾನಿನ 8ನೇ ಕಂತಿನಲ್ಲಿ ಪಂಜಾಬಿನ ಫಲಾನುಭವಿಗಳ ಸಂಖ್ಯೆ 19.04 ಲಕ್ಷ. ಚುನಾವಣೆಯಾದ ನಂತರ ಈಗ ಪಿಎಂ ಕಿಸಾನ್‌ನ 12ನೇ ಕಂತಿನ ಫಲಾನುಭವಿಗಳ ಸಂಖ್ಯೆ 2.07ಲಕ್ಷ!

ಇವೆಲ್ಲವೂ ಸ್ಪಷ್ಟಪಡಿಸುವಂತೆ ಮೋದಿ ಸರಕಾರ ಪಿಎಂ ಕಿಸಾನ್ ಯೋಜನೆಯನ್ನು ಮತದಾರರನ್ನು ಬಿಜೆಪಿಗೆ ವೋಟು ನೀಡುವಂತೆ ಪುಸಲಾಯಿಸುವ ಭ್ರಷ್ಟ ಸಾಧನವನ್ನಾಗಿ ಬಳಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲವೇ??

ಆಸಕ್ತರು ಈ ವೆಬ್ ವಿಳಾಸದಲ್ಲಿ ಕೇಂದ್ರ ಸರಕಾರವೇ ರಾಜ್ಯವಾರು ಹಾಗೂ ಕಂತುವಾರು ಕೊಟ್ಟಿರುವ ಫಲಾನುಭವಿಗಳ ಸಂಖ್ಯೆಯನ್ನು ಹೋಲಿಸಿ ನೋಡಬಹುದು: https://pqals.nic.in/annex/1711/AU719.pdf

4. ಗೇಣಿ ರೈತರು ಮತ್ತು ರೈತ ಕೂಲಿಗಳು ಫಲಾನುಭವಿಗಳಲ್ಲ!

ಅಷ್ಟು ಮಾತ್ರವಲ್ಲ.. ಪಿಎಂ ಕಿಸಾನ್ ಯೋಜನೆಯ ನೀತಿ ಘೋಷಣೆಯೇ ಹೇಳುವಂತೆ ಇದು ಕೇವಲ ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿರುವ ರೈತರಿಗೆ ಮಾತ್ರ ದಕ್ಕುವ ಯೋಜನೆ. ಗೇಣಿ ರೈತರಿಗೆ ಮತ್ತು ರೈತ ಕೂಲಿಗಳಿಗೆ ಈ ಯೋಜನೆಯಿಂದ ಕಿಂಚಿತ್ತೂ ಲಾಭವಿಲ್ಲ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 55ರಷ್ಟು ಜನರು ಈವರ್ಗಕ್ಕೆ ಸೇರಿದವರೇ ಆಗಿದ್ದಾರೆ.

5. ಸಬ್ಸಿಡಿ ಕಡಿತದ ಯುಗದಲ್ಲಿ ಫಲಾನುಭವಿ ರೈತರ ಸಂಖ್ಯೆ ಹೆಚ್ಚುವುದೇ?

ಚುನಾವಣೆಯ ಫಲವನ್ನು ಮೋದಿ ಸರಕಾರ ಉಂಡ ಮೇಲೆ ಪಿಎಂ ಕಿಸಾನಿನ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿರುವುದನ್ನು ಮೇಲಿನ ಅಂಕಿಅಂಶಗಳು ಸಾಬೀತು ಪಡಿಸುತ್ತವೆ. ಏಕೆಂದರೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸರಕಾರದಿಂದ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಕತ್ತರಿಸಬೇಕೆಂಬುದೇ ಮೋದಿ ಸರಕಾರದ ಆರ್ಥಿಕ ನೀತಿ.

ಹೀಗಾಗಿ 13ನೇ ಕಂತಿನ ಪಿಎಂ ಕಿಸಾನ್ ಮೊತ್ತವನ್ನು ಘೋಷಿಸಿದ್ದರೂ ಫಲಾನುಭವಿಗಳು ಅರ್ಹರಾಗಲು ಅನಕ್ಷರಸ್ಥ ಹಾಗೂ ಹಳ್ಳಿಗಾಡಿನ ರೈತಾಪಿಗಳು ಸುಲಭವಾಗಿ ಪೂರೈಸಲಾಗದ ಹಲವಾರು ಶರತ್ತುಗಳನ್ನು ಈ ಬಾರಿ ವಿಧಿಸಲಾಗಿದೆ.

ಅದರಲ್ಲಿ ಅಕೌಂಟುದಾರರ ದೃಢೀಕರಿಸಿದ ವಿವರಗಳನ್ನು, ಭೂ ಒಡೆತನದ ವಿವರಗಳನ್ನು ಮತ್ತೊಮ್ಮೆ ಇಲೆಕ್ಟ್ರಾನಿಕ್‌ರೂಪದಲ್ಲಿ ಭರ್ತಿ ಮಾಡಬೇಕಾದ, ಆಧಾರ್ ಖಾತರಿ ಕಡ್ಡಾಯವಾಗಿ ಪುನರ್ ದೃಢೀಕರಿಸಬೇಕಾದ ಹಲವಾರು ಅಂಶಗಳನ್ನು ಸೇರಿಸಲಾಗಿದೆ. ಇದನ್ನು ಪೂರೈಸದವರನ್ನು ಪಟ್ಟಿಯಿಂದ ತಾನಾಗಿಯೇ ಕೈಬಿಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಇತರ ಎಲ್ಲಾ ಸರಕಾರಿ ಯೋಜನೆಗಳಂತೆ ಈ ಯೋಜನೆಯಲ್ಲೂ ಲಕ್ಷಾಂತರ ಅರ್ಹ ಬಡ ಫಲಾನುಭವಿಗಳನ್ನು ಉದ್ದೇಶಪೂರ್ವಕವಾಗಿ ಅನರ್ಹಗೊಳಿಸಲಾಗುತ್ತದೆ. 

ಈ ಮುಂದಾಲೋಚನೆಯಿಂದಲೇ ಮೋದಿ ಸರಕಾರ 11.4 ಕೋಟಿ ಜನರು ಪಿಎಂ ಕಿಸಾನ್ ಫಲಾನುಭವಿಗಳೆಂದು ಹೇಳುತ್ತಿದ್ದರೂ ಸರಳ ಗಣಿತದ ಲೆಕ್ಕಾಚಾರದಂತೆ 11.4 ಕೋಟಿ ರೈತರಿಗೆ ತಲಾ 6,000 ರೂ.ಗಳಂತೆ ಬೇಕಾಗುವ ಕನಿಷ್ಠ ರೂ. 70,000 ಕೋಟಿಯನ್ನು ಯಾವ ಬಜೆಟ್‌ನಲ್ಲೂ ಎತ್ತಿಟ್ಟಿಲ್ಲ. ಈಗಾಗಲೇ ನೋಡಿದಂತೆ ಈ ಬಾಬತ್ತಿನಲ್ಲಿ 48,000-60,000 ಕೋಟಿ ರೂ. ಮಾತ್ರ ಎತ್ತಿಡಲಾಗುತ್ತಿದೆ. ಅದರಲ್ಲೂ ಶೇ. 70 ಭಾಗವನ್ನು ಮಾತ್ರ ವೆಚ್ಚ ಮಾಡಲಾಗುತ್ತದೆ. ಹಾಗೂ ಅದನ್ನು ಚುನಾವಣೆ ಇರುವ ರಾಜ್ಯಗಳಲ್ಲಿ ಮಾತ್ರ ಬಿಜೆಪಿಯ ಲಾಭಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಚುನಾವಣೆಯಾದ ನಂತರ ದಿಢೀರನೇ ಆ ರಾಜ್ಯಗಳ ಫಲಾನುಭವಿಗಳ ಸಂಖ್ಯೆ ಕುಸಿಯುತ್ತದೆ.

ಹೀಗಾಗಿ ಬೆಳಗಾವಿ ಭಾಷಣದಲ್ಲಿ ಪ್ರಧಾನಿ ಸುಳ್ಳು ಹೇಳಿದ್ದು ಮಾತ್ರವಲ್ಲದೆ ದೇಶದ ಮಣ್ಣಿನ ಮಕ್ಕಳಿಗೆ ದ್ರೋಹವನ್ನೇ ಮಾಡಿದ್ದಾರೆ. ಅಲ್ಲವೇ?