ಸಮ್ಮಿಶ್ರ ಸರಕಾರದಲ್ಲಿ ನಾನು ಮುಳ್ಳಿನ ಹಾಸಿಗೆಯಲ್ಲಿದ್ದೆ: ಎಚ್.ಡಿ.ಕುಮಾರಸ್ವಾಮಿ

ರಾಜ್ಯದ ಜನತೆ ನೆಮ್ಮದಿಯಿಂದ ಬದುಕಲು ಜೆಡಿಎಸ್‍ಗೆ ಬಹುಮತ ಕೊಡಿ

Update: 2023-03-02 11:17 GMT

ಮೂಡಿಗೆರೆ, ಮಾ.2: ಜೆಡಿಎಸ್ ಪಕ್ಷಕ್ಕೆ 120 ಸ್ಥಾನ ಗೆಲ್ಲಿಸಿಕೊಟ್ಟರೆ ಪಂಚರತ್ನ ಯೋಜನೆಯನ್ನು ಜಾರಿ ಮಾಡುವ ಮೂಲಕ ರಾಜ್ಯದ ಜನತೆ ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ಸೃಷ್ಟಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 

ಬುಧವಾರ ಸಂಜೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪಂಚರತ್ನ ರಥಯಾತ್ರೆ ಅಂಗವಾಗಿ ಆಯೋಜಿಸಿದ್ದ ಬಹಿರಂಗಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರಕಾರ ನಡೆಸುವ ಆಸೆ ನನಗಿರಲಿಲ್ಲ. ತನ್ನ ರೈತರು ಸಂಕಷ್ಟಕ್ಕೀಡಾಗಬಾರದು, ಅಧಿಕಾರವಿದ್ದರೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಅವರ ವಿರೋಧದ ನಡುವೆಯೂ 26 ಲಕ್ಷ ರೈತ ಕುಟುಂಬಗಳ ಸಾಲ ಮನ್ನಾ ಮಾಡಿದ್ದೇನೆ. ಅಂದು ತಾನು ಮುಳ್ಳಿನ ಹಾಸಿಗೆಯಲ್ಲಿದ್ದೆ. ಎಲ್ಲವನ್ನೂ ಸಹಿಸಿಕೊಂಡು ರೈತರ ಹಾಗೂ ಈ ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಶ್ರಮಿಸಿದ್ದೇನೆ ಎಂದರು.

ಈ ಬಾರಿ ರಾಜ್ಯದಲ್ಲಿ 120ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಹೊರಟಿದ್ದೇನೆ. ಬಿಜೆಪಿ, ಕಾಂಗ್ರೆಸ್ ಆಡಳಿತವನ್ನು ದೇವೇಗೌಡರ ಆಡಳಿತದ ಬಗ್ಗೆ ಜನರು ತಾಳೆ ಹಾಕಿ ನೋಡಿದ್ದಾರೆ. ಜೆಡಿಎಸ್ ಸ್ವತಂತ್ರ ಸರಕಾರ ರಚಿಸಬೇಕೆಂದು ಜನ ತೀರ್ಮಾನ ಮಾಡಿದ್ದಾರೆ.  ನನಗೆ ಆಶೀರ್ವಾದ ಮಾಡಿದರೆ ಜನರ ಋಣ  ತೀರಿಸುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಬದಲಾಗಿ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವ ರೀತಿಯಲ್ಲಿ ಹಾಗೂ ರೈತ ಕುಟುಂಬ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆಗೆ 2.5 ಲಕ್ಷ ಕೋಟಿ ಹಣ ಕ್ರೂಢೀಕರಿಸುವ ಮೂಲಕ ಕೂಲಿ ಕಾರ್ಮಿಕರು,  ಯುವಜನರು, ದಲಿತರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದು ಹೇಳಿದರು.  

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೊರ ದೇಶಕ್ಕೆ ಹೋದರೂ ಈ ದೇಶದ ಸಂಸ್ಕೃತಿ ಬಿಡಲಿಲ್ಲ. ಆದರೆ ಬಿಜೆಪಿಯವರ ಸಂಸ್ಕೃತಿ ಏನೆಂದು ಜನರು ಗಮನಿಸುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ನೆಹರು, ಗಾಂಧಿ ಮಾತ್ರವಲ್ಲ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಏಕೆ ಬರೆದಿದ್ದಾರೆಂದು ಸಿ.ಟಿ.ರವಿ ತಿಳಿದುಕೊಳ್ಳಬೇಕು. ಕುಪ್ಪಳ್ಳಿಯಲ್ಲಿ 15 ದಿನ ತಪಸ್ಸು ಮಾಡಿ ಬರಲಿ. ಆಗಲಾದರೂ ಸಿ.ಟಿ.ರವಿಗೆ ಒಳ್ಳೆ ಬುದ್ದಿ ಬರಬಹುದು. ಸಿ.ಟಿ.ರವಿ ಅವರೇ ನಮ್ಮ ನಾಯಕ ಕುಮಾರಣ್ಣ ಮುಖ್ಯಮಂತ್ರಿ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ನೀನು ನಿವೃತ್ತಿ ಹೊಂದಲು ತಯಾರಿದ್ದೀಯಾ ಎಂದು ಸಿ.ಟಿ.ರವಿಗೆ ಸವಾಲು ಹಾಕಿದರು. 

ದೇವೇಗೌಡ ಅವರು ಪ್ರಧಾನಿಯಾದಾಗ ಕೇವಲ 16 ತಿಂಗಳಲ್ಲಿ 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. 18ಸಾವಿರ ಕೋಟಿ ರೂ. ನೀರಾವರಿಗೆ ಕೊಟ್ಟರು. ಇದು ಮೋದಿಯಿಂದ ಸಾಧ್ಯವಾಯಿತೇ?, ಬಿಜೆಪಿ ಅವರ ಎಂಟ್ರಿಯಿಂದಾಗಿ ವಿಧಾನಸೌಧ ಸಂಪೂರ್ಣ ಮೈಲಿಗೆ ಆಗಿದೆ. ಮೇ ತಿಂಗಳಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಆದ ಮೇಲೆ ಕಾವೇರಿ ನೀರು ತಂದು ನವಗಹ್ರಹ ಪೂಜೆ ಮಾಡಿ ವಿಧಾನಸೌಧ ಸ್ವಚ್ಛಗೊಳಿಸಿ ನಂತರ ಸಿಎಂ ಖುರ್ಚಿಯಲ್ಲಿ ಕೂರಲಿದ್ದಾರೆಂದು ಹೇಳಿದರು. 

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದ ಬಳಿಕ ಜನಪರವಾದ ಯೋಜನೆ ರೂಪಿಸಿಕೊಂಡು ಬಂದಿರುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಎಚ್.ಡಿ.ಕುಮಾರಸ್ವಾಮಿ. ಪಕ್ಷ ಅಧಿಕಾರದಲ್ಲಿಲ್ಲದಿದ್ದರೂ ರೈತರ ಸಂಕಷ್ಟಕ್ಕೆ ಕುಮಾರಣ್ಣ ಆಗಮಿಸಿದ್ದಾರೆ. ಕಳಸ ತಾಲೂಕು ಘೋಷಣೆ ಮಾಡಿದ್ದಾರೆ. ಇನಾಂ ಭೂಮಿ ವಿಚಾರ ಬಂದಾಗ ಜನರ ಕಷ್ಟ ಸುಖಕ್ಕೆ ಆಗಮಿಸಿದ್ದಾರೆ. ತಾಲೂಕಿನಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕುಮಾರಣ್ಣ ಮುಖ್ಯಮಂತ್ರಿಯಾಗಲೇಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದಿಂದ ಹೇಮಾವತಿ ನದಿ ಮೂಲ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸರಕಾರಿ ನೌಕರರ ಸಂಘದ ವತಿಯಿಂದ ಹಳೆ ಪಿಂಚಣಿ ಜಾರಿಗಾಗಿ ಮನವಿ ಸಲ್ಲಿಸಲಾಯಿತು. ರೈತ ಸಂಘದ ಮುಖಂಡರು, ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಮನವಿ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್‍ಗೌಡ ವಹಿಸಿದ್ದರು. ಎಂಎಲ್‍ಸಿ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಬಿ.ಎಸ್.ಕನ್ಯಾಕುಮಾರಿ, ಎಂ.ಎಸ್.ಭಾಲಕೃಷ್ಣಗೌಡ, ಎಚ್.ಡಿ.ಜ್ವಾಲನಯ್ಯ, ಡಿ.ಬಿ.ಅಶೋಕ್‍ಗೌಡ, ಬಿಎಸ್.ಅಜಿತ್ಕುಮಾರ್, ಎಂ.ಎ.ಮಹಮ್ಮದ್, ನೂರುಲ್ಲಾ ಮಹಮ್ಮದ್, ಡಿ.ಆರ್.ವಸಂತಕುಮಾರಿ, ಪ್ರೇಮ್‍ಕುಮಾರ್, ಜಕರಿಯಾ ಜಾಕೀರ್, ಕೆ.ಪಿ.ಭಾರತಿ, ನಾಸೀರ್ ಮತ್ತಿತರರಿದ್ದರು. 

Similar News