ಭ್ರಷ್ಟಾಚಾರಕ್ಕೂ ಔಷಧಿ ಇದೆ ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ: ರಾಜನಾಥ್ ಸಿಂಗ್

Update: 2023-03-02 13:45 GMT

ಬೆಳಗಾವಿ, ಮಾ.2: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದರೆ, ಐದು ವರ್ಷಗಳಲ್ಲಿ ಕರ್ನಾಟಕವು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಗುರುವಾರ ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ಬಿಜೆಪಿಯ ಎರಡನೆ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 50 ವರ್ಷ ಮಾಡಲು ಅಸಾಧ್ಯವಾದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರಕಾರ ಮಾಡಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ, ವಿಮಾನನಿಲ್ದಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿದೆ. ರಕ್ಷಣಾ ಕ್ಷೇತ್ರದಲ್ಲೂ ನಾವು ಸ್ವಾವಲಂಬನೆಯತ್ತ ಮುನ್ನಡೆದಿದ್ದು, ಜಗತ್ತಿಗೂ ರಫ್ತು ಮಾಡಲು ಶಕ್ತರಾಗಿದ್ದೇವೆ ಎಂದು ಅವರು ತಿಳಿಸಿದರು.

ಎಚ್‍ಎಎಲ್, ಕೈಗಾರಿಕಾ ಕಾರಿಡಾರ್‍ಗಳ ಮೂಲಕ ಉದ್ಯೋಗಾವಕಾಶ ಹೆಚ್ಚಲಿದೆ. ದೇಶದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಮಾಡಿದ ಕೆಲಸವನ್ನು ಗಮನಿಸಿ ಬಿಜೆಪಿಯನ್ನು ಬೆಂಬಲಿಸಿ. ಪ್ರತಿ ಮನೆಗೆ ನೀರು, ಭೂಮಿಗೆ ನೀರಾವರಿ ಕೊಡಲು ನಾವು ಬದ್ಧರಿದ್ದೇವೆ. ಕಾಂಗ್ರೆಸ್ ಹೇಳುವುದು ಒಂದು, ಮಾಡುವುದು ಇನ್ನೊಂದು. ಆದರೆ, ಬಿಜೆಪಿ ಹೇಳಿದ್ದನ್ನೆ ಮಾಡಿ ತೋರಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಹಣ ಕೊಡಲಾಗಿದೆ. ದೇಶದ 8 ಕೋಟಿ ಮನೆಗಳಿಗೆ ನಳ್ಳಿ ನೀರನ್ನು ನೀಡಿದ್ದೇವೆ. 80 ಕೋಟಿ ಜನರಿಗೆ ಉಚಿತ ಪಡಿತರ ಕೊಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ. ಭ್ರಷ್ಟಾಚಾರಕ್ಕೂ ಔಷಧಿ ಇದೆ ಎಂಬುದನ್ನು ಬಿಜೆಪಿ, ಮೋದಿ ತೋರಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸವನ್ನು, ತುಷ್ಟೀಕರಣದ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಬಡತನ, ನಿರುದ್ಯೋಗ, ಭ್ರಷ್ಟಾಚಾರ ದೂರ ಮಾಡಲು ಮುಂದಾಗಲಿಲ್ಲ. ಈ ಸವಾಲನ್ನು ಎದುರಿಸುವ ದಿಟ್ಟ ನಾಯಕತ್ವವನ್ನು ಮೋದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ಪಥದಲ್ಲಿ ರಾಜ್ಯ, ಭಾರತವು ಮುಂದುವರಿಯಲು ಬಿಜೆಪಿಗೆ ಮತ ಕೊಡಿ. 4 ದಶಕಗಳ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ. ಆದರೆ, ಸಾಮಾಜಿಕ ನ್ಯಾಯಕ್ಕೆ ದಿಟ್ಟ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆ. ಜನಪರ, ಜನಕಲ್ಯಾಣ ಸರಕಾರ ರಚಿಸಲು ಬದ್ಧತೆ ಪ್ರದರ್ಶಿಸಿ ಎಂದು ಅವರು ಮನವಿ ಮಾಡಿದರು.

ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಶಶಿಕಲಾ ಜೊಲ್ಲೆ, ಬಿ.ಎ.ಬಸವರಾಜ, ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

''ಆರೋಗ್ಯದ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರ ತ್ಯಜಿಸಿದರು''

ಬಿ.ಎಸ್.ಯಡಿಯೂರಪ್ಪ ರಾಜ್ಯದ ಅತ್ಯುನ್ನತ ನಾಯಕ. ಅವರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದೇವೆ. ಕರ್ನಾಟಕಕ್ಕೆ ಅವರ ಸೇವೆಯನ್ನು ಬಿಜೆಪಿ ಮರೆಯುವುದಿಲ್ಲ. ಯಡಿಯೂರಪ್ಪ ಆರೋಗ್ಯದ ಕಾರಣಕ್ಕಾಗಿ ಅಧಿಕಾರ ತ್ಯಜಿಸಿದರು. ಬಳಿಕ ಸಜ್ಜನ, ಪ್ರಾಮಾಣಿಕ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

Similar News