×
Ad

ಅಕ್ರಮ ರಿವಾಲ್ವರ್ ಪ್ರಕರಣ | BJP ಶಾಸಕ ಸೋಮಶೇಖರ ರೆಡ್ಡಿ ದೋಷಿ: ಆದೇಶ ಎತ್ತಿ ಹಿಡಿದ ಜನಪ್ರತಿನಿಧಿಗಳ ಕೋರ್ಟ್

Update: 2023-03-02 21:39 IST

ಬೆಂಗಳೂರು, ಮಾ.2: ಪರವಾನಗಿ ನವೀಕರಿಸದೇ ಅಕ್ರಮವಾಗಿ ರಿವಾಲ್ವಾರ್ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.  

ಶಾಸಕ ಸೋಮಶೇಖರರೆಡ್ಡಿ ಅವರು ಅನಧಿಕೃತವಾಗಿ ರಿವಾಲ್ವರ್ ಹೊಂದಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಕುರಿತು ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಸೋಮಶೇಖರ್ ರೆಡ್ಡಿ ಅವರನ್ನು ದೋಷಿ ಎಂದು ತೀರ್ಮಾನಿಸಿ ಆದೇಶ ನೀಡಲಾಗಿತ್ತು.

ಈ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿದ್ದ ಸೋಮಶೇಖರ್ ರೆಡ್ಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಕೂಡ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಪೀಠವು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪು ಎತ್ತಿ ಹಿಡಿದಿದೆ.

ಅಕ್ರಮ ರಿವಾಲ್ವರ್ ಹೊಂದಿದ್ದಕ್ಕೆ ಶಿಕ್ಷೆ ಪ್ರಕಟ: 2022ರ ಅ.10ರಂದು ಅಕ್ರಮ ರಿವಾಲ್ವರ್ ಹೊಂದಿದ್ದ ಆರೋಪದಲ್ಲಿ ಶಾಸಕ ಸೋಮಶೇಖರ ರೆಡ್ಡಿಗೆ ಶಿಕ್ಷೆಯಾಗಿತ್ತು.  ಪಿಒ ಆಕ್ಟ್ ಸೆಕ್ಷನ್ 4ರ ಅಡಿ ಷರತ್ತು ವಿಧಿಸಿ ಹಾಗೂ ಉತ್ತಮ ನಡೆತ ಆಧಾರದಲ್ಲಿ ಷರತ್ತು ವಿಧಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಬಿಡುಗಡೆ ಮಾಡಿತ್ತು.

ಅವಧಿ ಮುಗಿದಿದ್ದರೂ ರಿವಾಲ್ವರ್ ಹೊಂದಿದ್ದ ಶಾಸಕ: ಈಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಕೂಡ ಮ್ಯಾಜೀಸ್ಟ್ರೇಟ್ ಕೋರ್ಟ್ ಆದೇಶ ಎತ್ತಿಹಿಡಿಯಲಾಗಿದ್ದು, 2009ರಲ್ಲಿ ಪರವಾನಗಿ ಅವಧಿ ಮುಗಿದರೂ ರಿವಾಲ್ವರ್ ಇಟ್ಟುಕೊಂಡಿದ್ದ ಸೋಮಶೇಖರ್ ರೆಡ್ಡಿ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪೊಲೀಸರು ಸಲ್ಲಿಸಿದ್ದ ಚಾರ್ಜ್‍ಶೀಟ್ ಆಧರಿಸಿ ಸೋಮಶೇಖರ್ ರೆಡ್ಡಿಗೆ ಶಿಕ್ಷೆ ಪ್ರಕಟವಾಗಿತ್ತು. 

Similar News