ಮೋದಿ ಕಾರ್ಯಕ್ರಮಕ್ಕೆ 500 ಕೊಟ್ಟು ಜನ ಕರೆಸಿದ್ದಾರೆ ಎಂದು ಹೇಳಿದ್ದನ್ನು ತಿರುಚಲಾಗಿದೆ: ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ

Update: 2023-03-02 16:31 GMT

ಬೆಂಗಳೂರು, ಮಾ. 2: ‘ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಜನರನ್ನು ದುಡ್ಡು ಕೊಟ್ಟು ಕರೆಸಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿದ್ದನ್ನು ಬಿಜೆಪಿಯ ಕೆಲವರು ವಿಡಿಯೊ ತಿರುಚಿ ಅಪಪ್ರಚಾರ ಮಾಡಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ದೂರಿದ್ದಾರೆ.

ಗುರುವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಹಮ್ಮಿಕೊಂಡಿರುವ ‘ಪ್ರಜಾಧ್ವನಿ ಯಾತ್ರೆ’ಗೆ 500 ರೂ.ಕೊಟ್ಟು ಜನರನ್ನು ಕರೆತರಬೇಕು ಎಂದು ಸಿದ್ದರಾಮಯ್ಯನವರು ಹೇಳಿಲ್ಲ. ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆಸುತ್ತಿದ್ದಾರೆಂದು ಹೇಳಿದ್ದು’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಇದನ್ನು ಸಹಿಸಲಾಗದೇ ಕೆಲವರು ಸಿದ್ದರಾಮಯ್ಯನವರದ್ದು ಎಂದು ವಿಡಿಯೊ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ವಿನಾಕಾರಣ ಅಪಪ್ರಚಾರ ನಡೆಸಿದ್ದಾರೆ. ಜನ ಇಂತಹ ಸುದ್ದಿಗೆ ಜನತೆ ಕಿವಿಗೊಡಬಾರದು’ ಎಂದು ಸತೀಶ್ ಜಾರಕಿಹೊಳಿ ಕೋರಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿಯಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ’ ಯಾತ್ರೆಗೆ ಆಗಮಿಸುವ ವೇಳೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಸ್‍ನಲ್ಲಿ ತೆರಳುವ ಸಂದರ್ಭದಲ್ಲಿ ಸಂಭಾಷಣೆ ನಡೆಸಿದ್ದ ವಿಡಿಯೋ ವೈರಲ್ ಆಗಿದೆ.

ಸಿದ್ದರಾಮಯ್ಯರಿಂದ ಸತ್ಯ ಬಹಿರಂಗ: ಸಿಎಂ ಬೊಮ್ಮಾಯಿ

‘ಕಾಂಗ್ರೆಸ್ ಮೊದಲಿನಿಂದಲೂ 500ರೂ.ಕೊಟ್ಟು ಜನರನ್ನು ಸೇರಿಸುತ್ತಿದ್ದು, ಈಗ ಸತ್ಯ ಬಹಿರಂಗವಾಗಿದೆ. ಅದರಲ್ಲಿ ಆಶ್ಚರ್ಯವಿಲ್ಲ. ಇದು ಅವರ ಪರಂಪರೆ. ಮೊದಲಿನಿಂದಲೂ ಅವರದ್ದು ಇದೇ ಪರಿಸ್ಥಿತಿ. ಅವರ ಮಾತುಗಳಿಂದ ಸತ್ಯ ಬಹಿರಂಗವಾಗಿದೆ. ಜನರಿಗೆ ಈ ಬಗ್ಗೆ ತಿಳಿಸಿದೆ. ಕೋಟೆಯ ಅಭಿವೃದ್ಧಿಗೆ 50ಲಕ್ಷ ರೂ.ನೀಡಿರುವುದು ನಮ್ಮ ಸರಕಾರ. ಕೆಲಸ ಮಾಡಿದ್ದು ನಾವೇ, ಜನರಿಗೆ ಸಮರ್ಪಣೆ ಮಾಡಿದ್ದೂ ನಾವೇ ಇದು ನಮ್ಮ ಹಕ್ಕು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

Similar News