ನಾಪತ್ತೆಯಾದ ವಸಂತ ಕಾಲ ಮತ್ತು ಪಕ್ಷಿಗಳ ವಲಸೆ

Update: 2023-03-02 19:30 GMT

ಆಸ್ಟ್ರೇಲಿಯದ ಪವನವಿಜ್ಞಾನ ಬ್ಯೂರೋದ ಸಂಶೋಧಕರ ಪ್ರಕಾರ, ವಸಂತ ಕಾಲದಲ್ಲಿ ಆಗಮಿಸಬೇಕಿದ್ದ ಹಕ್ಕಿಗಳು ಸ್ವಲ್ಪಮೊದಲೇ ಬರುತ್ತಿವೆ. ಪಕ್ಷಿಗಳ ವಲಸೆಯ ಕಾಲ ಋತುಗಳ ಬದಲಾವಣೆಯ ಬಹುಮುಖ್ಯ ಸೂಚನೆ. ಅದು ಬದಲಾಗಿದೆ ಎಂದರೆ, ಋತುಗಳು ಕೂಡ ಬದಲಾಗುತ್ತಿವೆ ಎಂದರ್ಥ. ಇದು ಪರಾಗಸ್ಪರ್ಶದ ಮೇಲೆ ಹಾಗೂ ಆಹಾರ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವು ಹಕ್ಕಿಗಳು ವಲಸೆಯನ್ನೇ ನಿಲ್ಲಿಸಿರುವುದೂ ಕಂಡುಬಂದಿದೆ.


‘ಚಳಿಗಾಲದ ಬಳಿಕ ವಸಂತ ಬಾರದೆ ಇರುವುದೇ’ ಎಂದು ಪ್ರಶ್ನಿಸಿದ್ದ ಪ್ರಖ್ಯಾತ ಕವಿ ಪರ್ಸಿ ಬಿಸ್ಸಿ ಶೆಲ್ಲಿ, ಅಂಧಕಾರದ ನಡುವೆಯೂ ಮಾನವ ಕುಲಕ್ಕೆ ಭವ್ಯ ಭವಿಷ್ಯವಿದೆ ಎಂದು ನಂಬಿದ್ದ ಆಶಾವಾದಿ. ತಮ್ಮ ನಿಲುವುಗಳಿಂದಾಗಿ ವಿವಾದಗ್ರಸ್ತರಾಗಿದ್ದರು. ಆದರೆ, ಶೆಲ್ಲಿ ಹೇಳಿದ್ದ ‘ಚಳಿಗಾಲದ ನಂತರ ಬರಬೇಕಿದ್ದ ವಸಂತ’ದ ಬದಲು ದೇಶದ ಹಲವು ಭಾಗಗಳಲ್ಲಿ ಈ ವರ್ಷ ನೇರವಾಗಿ ಬೇಸಿಗೆ ರಂಗಪ್ರವೇಶ ಮಾಡಿದೆ. ಫೆಬ್ರವರಿ ಮಧ್ಯದಲ್ಲೇ ಬಿಸಿಲು ಬಾರಿಸುತ್ತಿದೆ. ಕಳೆದ ವರ್ಷ ಮಾರ್ಚ್‌ನಲ್ಲೇ ಬಿಸಿಲು ಆರಂಭವಾಗಿ, ಚಳಿಗಾಲದ ಬೆಳೆಗಳಿಗೆ ಹಾನಿಯುಂಟಾಗಿತ್ತು. ಗೋಧಿ ಉತ್ಪಾದನೆ ಕುಸಿಯಿತು. ಉಕ್ರೇನ್ ಯುದ್ಧ ಇದರೊಟ್ಟಿಗೆ ಸೇರಿಕೊಂಡು, ಆಹಾರ ಪದಾರ್ಥಗಳ ಬೆಲೆ ಹೆಚ್ಚಿತು; ಹಣದುಬ್ಬರ ಅಧಿಕಗೊಂಡಿತು. ಕರಾವಳಿ ಕರ್ನಾಟಕ, ಗುಜರಾತ್ ಹಾಗೂ ಗೋವಾದಲ್ಲಿ ಈಗಾಗಲೇ ಉಷ್ಣಾಂಶ ಹೆಚ್ಚಳ ಕಂಡುಬಂದಿದೆ.

ಋತುಮಾನವೇ ಕಣ್ಮರೆಯಾಗುವ ಇಂಥ ಪ್ರವೃತ್ತಿಯಿಂದ ಜನಾರೋಗ್ಯ ಮತ್ತು ಕೃಷಿ ಮೇಲೆ ಪರಿಣಾಮವಲ್ಲದೆ, ಕಾಡಿನ ಬೆಂಕಿ ಪ್ರಕರಣಗಳು ಹೆಚ್ಚುತ್ತವೆ, ಮಂಜುಗಡ್ಡೆಗಳು ಬೇಗ ಕರಗುತ್ತವೆ ಮತ್ತು ಜಲಮೂಲಗಳು ಬತ್ತುತ್ತವೆ. ಹಕ್ಕಿಗಳ ಉಳಿವು ಹಾಗೂ ವಲಸೆ ದುಸ್ತರವಾಗುತ್ತದೆ. ಸಂರಕ್ಷಣಾ ಸಂಘಟನೆ ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಪ್ರಕಾರ, ವಲಸೆ ಹಕ್ಕಿಗಳು ತೀವ್ರ ಸಂಕಷ್ಟದಲ್ಲಿವೆ. ಋತುಮಾನ/ಹವಾಮಾನ ಬದಲಾವಣೆ ಹಾಗೂ ಮನುಷ್ಯರ ಚಟುವಟಿಕೆಗಳಿಂದ ಪಕ್ಷಿಗಳ ಖಂಡಾಂತರ ವಲಸೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಹಕ್ಕಿಗಳೇಕೆ ಮುಖ್ಯ?
ನಮ್ಮ ಸುತ್ತಮುತ್ತ ಇರುವ ಹಲವು ಹಕ್ಕಿಗಳು, ಮನುಷ್ಯರಿಗೆ ಹೊಂದಿಕೊಂಡಂಥವು; ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರಿಗೆ ಪ್ರೀತಿಪಾತ್ರವಾಗಿದ್ದ ಕಾಗೆ, ಎಲ್ಲೆಡೆ ಗಬ್ಬು ಎಬ್ಬಿಸುವ ಪಾರಿವಾಳಗಳು, ಅಪರೂಪವಾಗಿರುವ ಚೆಂದದ ಗುಬ್ಬಿಗಳನ್ನು ಬಿಟ್ಟರೆ, ಉಳಿದ ಹಕ್ಕಿಗಳು ನಗರಗಳನ್ನು ತೊರೆದಿವೆ. ಕೆರೆಗಳು, ಜೌಗುತಾಣಗಳ ನಾಶವಲ್ಲದೆ, ಬದಲಾದ ಮನೆಗಳ ವಿನ್ಯಾಸ ಇದಕ್ಕೆ ಕಾರಣ.

ಆರಂಭದ ದಿನಗಳಲ್ಲಿ ಗಣಿಗಳಲ್ಲಿ ತುಂಬಿದ್ದ ವಿಷದ ಗಾಳಿ(ಇಂಗಾಲದ ಆಕ್ಸೈಡ್, ಮಿಥೇನ್ ಇತ್ಯಾದಿ)ಯಿಂದ ಉಸಿರು ಕಟ್ಟಿ ಕಾರ್ಮಿಕರು ಸಾಯುತ್ತಿದ್ದರು. ಗಾಳಿಯನ್ನು ಪರೀಕ್ಷಿಸಲು ಹಕ್ಕಿಗಳನ್ನು ಗಣಿಯೊಳಗೆ ಇಳಿಸಲಾಗುತ್ತಿತ್ತು. ಆನಂತರ ಬಂದಿದ್ದು-ಡೇವಿಯ ಲಾಂದ್ರ. ದೀಪ ಗಣಿಯೊಳಗೆ ಉರಿದರೆ, ಕಾರ್ಮಿಕರು ಇಳಿಯುತ್ತಿದ್ದರು. ಮೊದಲ ಮಹಾಯುದ್ಧದಲ್ಲಿ ಅನಿಲಗಳ ದಾಳಿಯನ್ನು ಪತ್ತೆ ಹಚ್ಚಲು ಕೂಡ ಹಕ್ಕಿಗಳನ್ನು ಬಳಸಲಾಗಿತ್ತು.
ಹಕ್ಕಿಗಳ ವೈಶಿಷ್ಟ್ಯ-ಹಾರಾಟ. ಈ ಹಾರುವಿಕೆ ಎನ್ನುವುದು ಮೀಸೋಜೋಯಿಕ್ ಯುಗ ಅಂದರೆ, ಅಂದಾಜು 22.5 ಕೋಟಿ ವರ್ಷಗಳ ಹಿಂದೆಯೇ ಇತ್ತು. ಆಗ ನೆಲ, ನೀರು ಸೇರಿದಂತೆ ಎಲ್ಲೆಡೆ ಡೈನೋಸಾರ್‌ಗಳು ಇದ್ದವಂತೆ. ಒಂದು ದಿನ ಇದ್ದಕ್ಕಿದ್ದಂತೆ ಡೈನೋಸಾರ್‌ಗಳು ನೆಗೆ ನೆಗೆದು ಹಾರಲಾರಂಭಿಸಿದವು. ಈ ಡೈನೋಸಾರ್‌ಗಳೇ ಆಧುನಿಕ ಹಕ್ಕಿಗಳ ಮೂಲ ಎಂದು ಹೇಳಿದವರು ಜರ್ಮನಿಯ ಪಳೆಯುಳಿಕೆಶಾಸ್ತ್ರಜ್ಞ ಹರ್ಮನ್ ವಾನ್ ಮೇಯರ್. 1860ರಲ್ಲಿ ಜರ್ಮನಿಯ ಸಾಲ್‌ಹೋಫೆನ್‌ನ ಸುಣ್ಣದ ಗಣಿಯಲ್ಲಿ ಸಿಕ್ಕ ಪಳೆಯುಳಿಕೆಗೆ ಅವರಿಟ್ಟ ಹೆಸರು-ಆರ್ಕಿಟೆರಿಕ್ಸ್ (ಪುರಾತನ ರೆಕ್ಕೆಗಳು). ಇದರಿಂದ ಸರೀಸೃಪಗಳು ಹಕ್ಕಿಗಳ ಮೂಲ ಎಂದು ಸಾಬೀತಾಯಿತು.

ಹಾರಾಟವೆಂಬ ವರದಿಂದ ಹಕ್ಕಿಗಳು ಪರಾಗಸ್ಪರ್ಶ ಮಾಡಿದವು ಮತ್ತು ಜಗತ್ತಿನೆಲ್ಲೆಡೆ ಬೀಜಗಳನ್ನು ಹರಡಿದವು. ಡೈನೋಸಾರ್‌ಗಳ ಯುಗ ಮುಗಿದ ಬಳಿಕ ಸಸ್ತನಿಗಳು, ಬಳಿಕ ಮನುಷ್ಯರು ಭೂಮಿ ಮೇಲೆ ಆಗಮಿಸಿದರು. ಮನುಷ್ಯ ತನ್ನ ‘ಕಬ್ಬಿಣದ ಕಾಲು’ ಇಟ್ಟ ಬಳಿಕ ಜಗತ್ತಿನ ಚರಿತ್ರೆ ಮತ್ತು ಭೂಗೋಳದ ಚರ್ಯೆಯೇ ಬದಲಾಯಿತು. ಅವನ ಬಾಯಿ ರುಚಿಗೆ ಪ್ಯಾಸೆಂಜರ್ ಪಿಜನ್, ಡೋಡೋ, ಮೋಆ ಸೇರಿದಂತೆ ಹಲವು ಪಕ್ಷಿ ಪ್ರಭೇದ ಗಳು ನಿರ್ವಂಶವಾದವು. ಡಾರ್ವಿನ್ ಹೇಳಿದಂತೆ, ‘ಬಲಿಷ್ಠ ಉಳಿದುಕೊಂಡ’. ಇದಕ್ಕೊಂದು ಉತ್ತಮ ಉದಾಹರಣೆ-ಗುಬ್ಬಚ್ಚಿ(ವೈಜ್ಞಾನಿಕ ಹೆಸರು-ಪಾಸರ್ ಡೊಮೆಸ್ಟಿಕಸ್; ಲ್ಯಾಟಿನ್‌ನಲ್ಲಿ ಡೊಮಸ್ ಎಂದರೆ ಮನೆ). ಹಿಂದೆ ಹಿಂಡುಗಟ್ಟಲೆ ಇದ್ದ ಇವು ಈಗ ನಗರಗಳಲ್ಲಿ ಕಣ್ಮರೆ ಆಗಿಬಿಟ್ಟಿವೆ. ನಗರಾರಣ್ಯದ ಮನೆಗಳಲ್ಲಿ ಅವುಗಳಿಗೆ ಗೂಡು ಕಟ್ಟಲು ಸ್ಥಳವಿಲ್ಲ. ಎಲ್ಲರೂ ದವಸ-ಧಾನ್ಯದ ಪೊಟ್ಟಣಗಳನ್ನು ತರುವುದರಿಂದ, ಮನೆಗಳಲ್ಲಿ ಧಾನ್ಯಗಳನ್ನು ಶುದ್ಧಗೊಳಿಸುವ ಪ್ರವೃತ್ತಿ ನಿಂತಿದೆ. ನೆಲವನ್ನು ಕಾಂಕ್ರಿಟ್‌ನಿಂದ ಮುಚ್ಚಿರುವುದರಿಂದ, ಹುಳಗಳು ಇಲ್ಲವಾದವು. ಡೀಸೆಲ್‌ನ ಸೂಕ್ಷ್ಮ ಧೂಳಿನ ಕಣ ಅವುಗಳಿಗೆ ಮಾರಕವಾಯಿತು. ‘ಸಾಕಪ್ಪಮನುಷ್ಯರ ಸಹವಾಸ’ ಎಂದು ಓಡಿದವು. ಅವುಗಳ ಜಾಗಕ್ಕೆ ಬಂದ ಪಾರಿವಾಳಗಳಿಗೆ ಕಾಂಕ್ರಿಟ್ ಅರಣ್ಯ ಎಂದರೆ ಖುಷಿ. ಇವುಗಳ ಹಿಕ್ಕೆಯಿಂದ ಉಸಿರಾಟದ ತೊಂದರೆಯಲ್ಲದೆ, ರೋಗಕಾರಕಗಳಿಂದ 60 ವಿಧದ ಕಾಯಿಲೆಗಳು ಬರುತ್ತದೆ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು.

ಹಲವು ಉತ್ತಮಾಂಶಗಳ ಮೂಲ:
ಹಕ್ಕಿಗಳು ಉಪಯುಕ್ತ ಜೀವಿಗಳು. ಅವುಗಳ ಹಿಕ್ಕೆಯದು ಇನ್ನೊಂದು ಕಥೆ. ಲ್ಯಾಟಿನ್ ಅಮೆರಿಕದ ಪೆರುವಿನ ಗ್ವಾನೋ ದ್ವೀಪಗಳಲ್ಲಿ ಸಮುದ್ರದ ಹಕ್ಕಿಗಳ ತ್ಯಾಜ್ಯದ ಗುಡ್ಡೆಗಳನ್ನು ಯುರೋಪಿಯನ್ನರು ಪತ್ತೆ ಹಚ್ಚುವುದಕ್ಕಿಂತ ಸಾವಿರಾರು ವರ್ಷ ಮೊದಲೇ ಇಂಕಾ ಸಾಮ್ರಾಜ್ಯದಲ್ಲಿ ಅದನ್ನು ಬಳಸಲಾಗುತ್ತಿತ್ತು. ಇಂಕಾದ ರಾಜರು ಪ್ರತೀ ನಗರಕ್ಕೂ ಒಂದು ದ್ವೀಪವನ್ನು ನಿಗದಿಪಡಿಸಿ, ಪ್ರತಿಯೊಂದು ಮನೆಯ ಅಗತ್ಯಕ್ಕೆ ಅನುಗುಣವಾಗಿ ಗೊಬ್ಬರವನ್ನು ಹಂಚಿಕೆ ಮಾಡಿದ್ದರು. ಕಟ್ಟುಪಾಡು ಉಲ್ಲಂಘಿಸಿದರೆ ಇಲ್ಲವೇ ಪಕ್ಷಿಗಳು ಮೊಟ್ಟೆಯಿಡುವ ಸಮಯದಲ್ಲಿ ದ್ವೀಪಕ್ಕೆ ಹೋದರೆ, ಅವರ ತಲೆಯನ್ನು ಕತ್ತರಿಸಲಾಗುತ್ತಿತ್ತು!
ಪೆರುಗೆ ಆಗಮಿಸಿದ್ದ ಪ್ರಷ್ಯಾದ ಭೂಗೋಳಶಾಸ್ತ್ರಜ್ಞ ಅಲೆಕ್ಸಾಂಡರ್ ವಾನ್ ಹಂಬೋಲ್ಟ್‌ನನ್ನು ಸ್ವಾಗತಿಸಿದ್ದು ಇದೇ ಹಿಕ್ಕೆಯ ಗುಡ್ಡೆಗಳು. 1804ರಲ್ಲಿ ಯುರೋಪಿಗೆ ಮರಳಿದ ಆತ ಸಂಗ್ರಹಿಸಿದ್ದ ಹಿಕ್ಕೆಯನ್ನು ರಸಾಯನಶಾಸ್ತ್ರಜ್ಞನಿಗೆ ಪರಿಶೀಲನೆಗೆಂದು ಕೊಟ್ಟ. ಆತ ಕಡುಜಾಣ. ಆ ವೇಳೆಗೆ ಯುರೋಪಿನ ನೆಲ ನಿರಂತರ ಕೃಷಿಯಿಂದ ಸತ್ವಹೀನವಾಗಿತ್ತು. ನೆಲದ ಫಲವತ್ತತೆ ಹೆಚ್ಚಿಸಲು ಮೂತ್ರ, ಮರದ ಪುಡಿ ಇತ್ಯಾದಿ ಸೇರ್ಪಡೆ ಸರ್ಕಸ್ ನಡೆದಿತ್ತು. ಸಾರಜನಕ, ಪೊಟಾಷಿಯಂ ಮತ್ತು ರಂಜಕಾಂಶವಿದ್ದ ಹಿಕ್ಕೆ ರೈತರಿಗೆ ವರವಾಗಿ ಪರಿಣಮಿ ಸಿತು. ಮಹಾಯುದ್ಧದ ವೇಳೆ ಶಸ್ತ್ರಾಸ್ತ್ರ ತಯಾರಿಸಿ ಜೀವಹರಣ ಮಾಡಿದ್ದ ಉದ್ಯಮಗಳು, ಯುದ್ಧಾನಂತರ ರಾಸಾಯನಿಕ ಗೊಬ್ಬರವನ್ನು ಉತ್ಪಾದಿಸಲು ಆರಂಭಿಸಿದವು. ಬಳಿಕ ಪಕ್ಷಿಗಳ ತ್ಯಾಜ್ಯ ನೇಪಥ್ಯಕ್ಕೆ ಸರಿಯಿತು. ಇತಿಹಾಸದ ವ್ಯಂಗ್ಯ ನೋಡಿ: ಈಗ ರಾಸಾಯನಿಕಗಳ ಬಳಕೆಯಿಂದ ಗಾರೆದ್ದಿರುವ ಭೂಮಿಯನ್ನು ಉಳಿಸಲು ಸಾವಯವದ ಭಜನೆ ನಡೆಯುತ್ತಿದೆ. ರಾಸಾಯನಿಕ ಗೊಬ್ಬರಗಳನ್ನು ಶಿಫಾರಸು ಮಾಡಿದ್ದವರೆಲ್ಲ ಸಾವಯವದ ಬಂಡಿ ಹತ್ತಿದ್ದಾರೆ. ಇತಿಹಾಸ ಒಂದು ಸುತ್ತು ಬಂದಿದೆ. ಹಕ್ಕಿಗಳ ಹಿಕ್ಕೆಗೆ ಬೇಡಿಕೆ ಬಂದಿದೆ!

ಹಕ್ಕಿಗಳ ವಲಸೆ
ಹಕ್ಕಿಗಳು ಭೂಗ್ರಹದ ಸುಂದರ ಸೃಷ್ಟಿ. ವಲಸೆ ಅವುಗಳಿಗೆ ಸಂತಸದ ಕೆಲಸವೇನಲ್ಲ; ಒಂದರ್ಥದಲ್ಲಿ ‘ಅನಿವಾರ್ಯ ಕರ್ಮ’. ವಲಸೆಗೆ ಪ್ರಾಥಮಿಕ ಕಾರಣ-ಆಹಾರ ಲಭ್ಯತೆ. ಸಂತಾನೋತ್ಪತ್ತಿ, ಆಹಾರದ ಲಭ್ಯತೆ ಆಧರಿಸಿ, ಉತ್ತರ ಮತ್ತು ದಕ್ಷಿಣದಿಂದ ಹಕ್ಕಿಗಳು ವಲಸೆ ಹೋಗುತ್ತವೆ. ಗ್ರೀಕರು 3,000 ವರ್ಷಗಳ ಹಿಂದೆ ಬಕಗಳು, ಯುರೋಪಿಯನ್ ಟರ್ಟಲ್ ಪಾರಿವಾಳ ಮತ್ತು ಸ್ವಾಲೋಗಳು ವಲಸೆ ಹೋಗುವುದನ್ನು ದಾಖಲಿಸಿದ್ದಾರೆ. ಹೋಮರ್, ಹೆಸಿಯಾಡ್, ಹೆರೋಡೋಟಸ್, ಅರಿಸ್ಟಾಟಲ್ ಈ ಬಗ್ಗೆ ಉಲ್ಲೇಖಿಸಿದ್ದಾರೆ. 1749ರಲ್ಲಿ ಫಿನ್ಲೆಂಡ್‌ನ ಜೋಹಾನೆಸ್ ಲೀಚ್ ತನ್ನ ದೇಶಕ್ಕೆ ಹಕ್ಕಿಗಳು ಆಗಮಿಸುವುದನ್ನು ದಾಖಲಿಸಿದರು. ವಲಸೆ ಸಾಮಾನ್ಯವಾಗಿ ಬೇಸಿಗೆ ಹಾಗೂ ಚಳಿಗಾಲದಲ್ಲಿ ನಡೆಯುತ್ತದೆ. ಅಕ್ಟೋಬರ್‌ನಿಂದ ಆರಂಭವಾಗಿ, ಮಾರ್ಚ್ ವರೆಗೆ ಮುಂದುವರಿಯುತ್ತದೆ. ಬಳಿಕ ತಾಯಿ ಹಕ್ಕಿ ಮರಿಗಳೊಂದಿಗೆ ಸ್ವದೇಶಕ್ಕೆ ಮರಳುತ್ತದೆ.

ಭಾರತಕ್ಕೆ 29 ದೇಶಗಳ ಪಕ್ಷಿಗಳು ಆಗಮಿಸುತ್ತವೆ. ಇಲ್ಲಿನ ಪ್ರಸಿದ್ಧ ವಲಸೆ ತಾಣಗಳೆಂದರೆ, ಸುಲ್ತಾನ್‌ಪುರ(ಹರ್ಯಾಣ), ಭರತ್‌ಪುರ(ರಾಜಸ್ಥಾನ), ಚಿಲಿಕಾ ಸರೋವರ(ಒಡಿಶಾ), ನಳ ಸರೋವರ(ಗುಜರಾತ್), ರಂಗನತಿಟ್ಟು(ಕರ್ನಾಟಕ) ಮತ್ತು ತಟ್ಟೆಕಾಡ್(ಕೇರಳ). ರಾಜ್ಯದಲ್ಲಿ ಮ್ಯಾಂಗ್ರೋವ್ ಕಾಡು, ಉದ್ದದ ಕರಾವಳಿ ತೀರ, ಅಸಂಖ್ಯ ನದಿ/ತೊರೆ/ಹಳ್ಳ/ಕೆರೆಗಳು ಇರುವುದರಿಂದ, ಪ್ರಪಂಚದೆಲ್ಲೆಡೆಯಿಂದ ಹಕ್ಕಿಗಳು ಆಗಮಿಸುತ್ತವೆ. ವಸಂತ ಋತುವಿನಲ್ಲಿ ಉತ್ತರದಿಂದ ಆರ್ಕಟಿಕ್ ಕಡೆಗೆ ಮರಿ ಮಾಡಲು ತೆರಳಿ, ಬಳಿಕ ಶರತ್ಕಾಲದಲ್ಲಿ ದಕ್ಷಿಣಕ್ಕೆ ಹಿಂದಿರುಗುತ್ತವೆ. ದಕ್ಷಿಣ ಗೋಳಾರ್ಧದಲ್ಲಿ ಇದಕ್ಕೆ ತದ್ವಿರುದ್ಧ. ಆದರೆ, ದಕ್ಷಿಣದಲ್ಲಿ ಭೂಪ್ರದೇಶ ಕಡಿಮೆ ಇರುವುದರಿಂದ, ವಲಸೆ ದೀರ್ಘವಾಗಿರುವುದಿಲ್ಲ. ಬೆಟ್ಟದ ಸಾಲುಗಳು ಇಲ್ಲವೇ ಕರಾವಳಿ ತೀರ, ಕೆಲವೊಮ್ಮೆ ನದಿಗಳ ಮೇಲೆ ಹಾರಾಟ ನಡೆಸುತ್ತವೆ. ಗಾಳಿಯ ಬೀಸುವಿಕೆ, ಸಮುದ್ರದ ಉಬ್ಬರ-ಇಳಿತದ ಪ್ರಯೋಜನ ಪಡೆದುಕೊಳ್ಳುತ್ತವೆ. ಉತ್ತರ ಗೋಳದ ಕಡೆಯಿಂದ ಮೆಡಿಟರೇನಿಯನ್ ಮತ್ತು ಕೆರಿಬಿಯನ್ ಸಮುದ್ರಗಳ ಮೂಲಕ ಹಕ್ಕಿಗಳು ಪ್ರಯಾಣ ಮಾಡುತ್ತವೆ. ಕಾಲಿಗೆ ಬಳೆ ತೊಡಿಸುವುದು, ಉಪಗ್ರಹಗಳ ಮೂಲಕ ಹಕ್ಕಿಗಳ ವಲಸೆ ಮಾರ್ಗವನ್ನು ಕರಾರುವಾಕ್ಕಾಗಿ ಹೇಳಲಾಗುತ್ತದೆ.

ವಲಸೆಯ ವೈಶಿಷ್ಟ್ಯ:
ಹಕ್ಕಿಗಳು ನಿರ್ದಿಷ್ಟ ಪಥದಲ್ಲಿ ಸಂಚರಿಸುತ್ತವೆ. ಈ ಮಾರ್ಗದ ಅರಿವು ವಂಶಪಾರಂಪರ್ಯವಾಗಿ ಇಲ್ಲವೇ ಕಲಿಕೆಯಿಂದ ಬರುವಂಥದ್ದು. ದೀರ್ಘ ಕಾಲ ಬದುಕುವ ಪ್ರಭೇದ(ಉದಾಹರಣೆಗೆ, ಬಿಳಿ ಬಕ (ಸಿಕೋನಿಯಾ ಸಿಕೋನಿಯಾ)ಗಳಲ್ಲಿ ಗುಂಪಿನ ಹಿರಿಯರು ಮುಂದೆ ಹಾರಿ ಮಾರ್ಗದರ್ಶನ ಮಾಡುತ್ತವೆ. ಕಡಿಮೆ ಜೀವಿತಾವಧಿಯ ಹಕ್ಕಿಗಳು ಒಂಟಿಯಾಗಿ ಸಂಚರಿಸುತ್ತವೆ. ಭೂಮಿಯ ಕಾಂತೀಯ ಕ್ಷೇತ್ರ ಹಕ್ಕಿಗಳಿಗೆ ದಿಗ್ದರ್ಶನ ಮಾಡುತ್ತದೆ. ಗುರಿ ತಲುಪಲು ನಕ್ಷತ್ರ, ಸೂರ್ಯ, ಗಾಳಿಯ ಚಲನೆ ಮತ್ತು ಭೂಮಿಯಲ್ಲಿನ ವ್ಯತ್ಯಾಸವನ್ನು ಬಳಸಿಕೊಳ್ಳುತ್ತವೆ. ವಲಸೆ ಹೋಗುವ ಮತ್ತು ವಾಪಸಾಗುವ ದಾರಿಗಳು ಹಲವು ಬಾರಿ ಬೇರೆಬೇರೆ ಆಗಿರುತ್ತವೆ. ಸಂಚಾರ ಮಾರ್ಗ ನೇರವಾಗಿಯೇ ಇರುವುದಿಲ್ಲ. ಕೊಕ್ಕೆಯಂತೆ ಇಲ್ಲವೇ ಕಾಮನ ಬಿಲ್ಲಿನ ಆಕಾರ ಇಲ್ಲವೇ ವೃತ್ತಾಕಾರ ಇರುತ್ತದೆ. ಅಡೆತಡೆಗಳಿಗೆ ಅನುಗುಣವಾಗಿ ಮಾರ್ಗ ಬದಲಿಸಿಕೊಳ್ಳುತ್ತವೆ. ಹೆಚ್ಚು ದೂರ ಸಂಚರಿಸುವ ಪಕ್ಷಿಗಳ ದೈಹಿಕ ಗಡಿಯಾರ ಆನುವಂಶೀಯವಾಗಿ ಸಿದ್ಧವಾಗಿರುತ್ತದೆ. ಆದರೆ, ಕಡಿಮೆ ದೂರದ ಹಕ್ಕಿಗಳಿಗೆ ಇದು ಅಗತ್ಯವಿಲ್ಲ. ದಕ್ಷಿಣ ಅಮೆರಿಕದಲ್ಲಿ ಗಡಿಯಾರದ ಚಲನೆಯ ಮಾದರಿ ವಲಸೆ ನಡೆಯುತ್ತದೆ. ಅಂದರೆ, ಉತ್ತರದೆಡೆಗೆ ತೆರಳುವ ಪಕ್ಷಿಗಳು ಇನ್ನಷ್ಟು ಪಶ್ಚಿಮದೆಡೆಗೆ ಹಾಗೂ ದಕ್ಷಿಣದೆಡೆಗೆ ತೆರಳುವಂಥವು ಪೂರ್ವಕ್ಕೆ ಸ್ಥಳಾಂತರ ಮಾಡುತ್ತವೆ.

ವಲಸೆ ಗುಂಪಿನಲ್ಲೇ ಆಗುವಂಥದ್ದು. ಇದರಿಂದ ದೊಡ್ಡ ಹಕ್ಕಿಗಳಿಗೆ ಶ್ರಮ ಉಳಿಯುತ್ತದೆ. ಇಂಗ್ಲಿಷ್‌ನ ‘ವಿ’ ಆಕಾರದಲ್ಲಿ ಹಾರಿದರೆ, ಶೇ. 12-20 ರಷ್ಟು ಶಕ್ತಿ ಉಳಿಯುತ್ತದೆ ಎನ್ನುತ್ತಾರೆ ಪಕ್ಷಿಶಾಸ್ತ್ರಜ್ಞರು. ಹಾರಾಟದ ಎತ್ತರ ಕೂಡ ಹಕ್ಕಿಯಿಂದ ಹಕ್ಕಿಗೆ ಬದಲಾಗುತ್ತದೆ. ಅನ್ಸರ್ ಇಂಡಿಕಸ್(ಒಂದು ಪ್ರಭೇದದ ಹಂಸ) ಹಿಮಾಲಯ ಪ್ರದೇಶದಲ್ಲಿ 6,540 ಮೀಟರ್ ಎತ್ತರದಲ್ಲಿ ಹಾರಿದ ದಾಖಲೆಯಿದೆ. ಕೆಲವು ಸಮುದ್ರ ಪಕ್ಷಿಗಳು ನೀರಿನ ಮೇಲೆ ಕಡಿಮೆ ಎತ್ತರದಲ್ಲಿ, ನೆಲದ ಮೇಲೆ ಹೆಚ್ಚು ಎತ್ತರದಲ್ಲಿ ಹಾರುತ್ತವೆ. ಭೂಮಿ ಮೇಲಿನ ಹಕ್ಕಿಗಳ ಹಾರಾಟದ ಎತ್ತರ 150ರಿಂದ 600 ಮೀಟರ್. ಉಷ್ಣ ವಲಯದಲ್ಲಿ ವರ್ಷವಿಡೀ ಹಗಲಿನ ಕಾಲಾವಧಿಯಲ್ಲಿ ಹೆಚ್ಚೇನೂ ಬದಲಾವಣೆ ಇರುವುದಿಲ್ಲ. ಹೀಗಾಗಿ, ಆಹಾರ ಪೂರೈಕೆಗೆ ಸಾಕಷ್ಟು ಉಷ್ಣಾಂಶ ಇರುತ್ತದೆ. ಆದರೆ, ಕೆಲ ಉಷ್ಣ ವಲಯದ ಎತ್ತರ ಪ್ರದೇಶದ ಹಕ್ಕಿಗಳು ವಲಸೆ ಹೋಗುತ್ತವೆ. ಅವುಗಳಿಗೆ ಬೇಕಾದ ಹಣ್ಣುಗಳು ಸಿಗುತ್ತವೆ ಎನ್ನುವುದು ಇದಕ್ಕೆ ಕಾರಣ. ಪ್ರಭೇದವೊಂದರ ಎಲ್ಲ ಹಕ್ಕಿಗಳೂ ವಲಸೆ ಹೋಗುವುದಿಲ್ಲ. ಇದನ್ನು ಆಂಶಿಕ ವಲಸೆ ಎನ್ನುತ್ತಾರೆ. ದಕ್ಷಿಣದ ಖಂಡಗಳಲ್ಲಿ ಇದು ಸಾಮಾನ್ಯ. ಆಸ್ಟ್ರೇಲಿಯದ ಪರ್ಚರ್ಸ್ ವರ್ಗದ ಶೇ.32ರಷ್ಟು ಹಕ್ಕಿಗಳು ಆಂಶಿಕ ವಲಸೆಗಾರರು.

ಹವಾಮಾನ ಬದಲಾವಣೆ ಪರಿಣಾಮ:
ಆಸ್ಟ್ರೇಲಿಯದ ಪವನವಿಜ್ಞಾನ ಬ್ಯೂರೋದ ಸಂಶೋಧಕರ ಪ್ರಕಾರ, ವಸಂತ ಕಾಲದಲ್ಲಿ ಆಗಮಿಸಬೇಕಿದ್ದ ಹಕ್ಕಿಗಳು ಸ್ವಲ್ಪಮೊದಲೇ ಬರುತ್ತಿವೆ. ಪಕ್ಷಿಗಳ ವಲಸೆಯ ಕಾಲ ಋತುಗಳ ಬದಲಾವಣೆಯ ಬಹುಮುಖ್ಯ ಸೂಚನೆ. ಅದು ಬದಲಾಗಿದೆ ಎಂದರೆ, ಋತುಗಳು ಕೂಡ ಬದಲಾಗುತ್ತಿವೆ ಎಂದರ್ಥ. ಇದು ಪರಾಗಸ್ಪರ್ಶದ ಮೇಲೆ ಹಾಗೂ ಆಹಾರ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವು ಹಕ್ಕಿಗಳು ವಲಸೆಯನ್ನೇ ನಿಲ್ಲಿಸಿರುವುದೂ ಕಂಡುಬಂದಿದೆ. ಉದಾಹರಣೆಗೆ, ಪಶ್ಚಿಮ ಯುರೋಪ್‌ನ ಎರಡು ಪ್ರಭೇದದ ವಾರ್ಬಲರ್‌ಗಳು. ಐದು ಖಂಡಗಳ ನೂರಾರು ಪಕ್ಷಿ ಪ್ರಭೇದಗಳ ಅಧ್ಯಯನ ನಡೆಸಿದ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಜಾಗತಿಕ ತಾಪಮಾನ ಹೆಚ್ಚಿದಂತೆ ಪಕ್ಷಿಗಳು ಬೇಗ, ಅಂದರೆ, ಅವಧಿಗೆ ಮುನ್ನವೇ ವಲಸೆ ಹೋಗುತ್ತಿವೆ. ಇದರಿಂದ ಮೊಟ್ಟೆ ಇಡುವ ಕಾಲಾವಧಿಯಲ್ಲಿ ಬದಲಾವಣೆಯಾಗಲಿದ್ದು, ಮರಿಗಳ ಉಳಿವು ಸಂಕಷ್ಟಕ್ಕೆ ಸಿಲುಕುತ್ತದೆ.

ಪಕ್ಷಿ ಛಾಯಾಗ್ರಾಹಕಿ ಡಾ.ಲೀಲಾ ಅಪ್ಪಾಜಿ ಅವರ ಪ್ರಕಾರ, ‘‘ಕಳೆದ 2 ವರ್ಷಗಳಿಂದ ಋತುಮಾನ ಎಂಬುದೇ ಇಲ್ಲವಾಗಿದೆ. ಮಳೆಗಾಲ, ಬೇಸಿಗೆ ಎಂಬ ಕಾಲಮಾನದ ಪ್ರತ್ಯೇಕತೆ ಇಲ್ಲವಾಗುತ್ತಿದೆ. ಇದರಿಂದ ಹಕ್ಕಿಗಳು ಗೊಂದಲಕ್ಕೀಡಾಗುತ್ತವೆ. ಅವುಗಳ ವಾಸಸ್ಥಾನ ಹಾಳಾಗುತ್ತಿದೆ. ಮಾಂಸಕ್ಕಾಗಿ ಬೇಟೆ ಹೆಚ್ಚಳಗೊಂಡಿದೆ. ಒಟ್ಟಾರೆ ವಲಸೆ ಕಡಿಮೆಯಾಗಿದೆ. ಎಲ್ಲಿ ಬೇಟೆಗಾರರು ರಕ್ಷಕರಾಗಿ ಬದಲಾಗಿದ್ದಾರೋ ಅಲ್ಲಿ ಹಕ್ಕಿಗಳು ನಿರಾತಂಕವಾಗಿವೆ’’.

ವಲಸೆಗೆಂದು ಸಾವಿರಾರು ಕಿ.ಮೀ. ಪ್ರಯಾಣ ಮಾಡುವ ಹಕ್ಕಿಗಳು ಹಲವು ದೇಶಗಳನ್ನು ಹಾಯ್ದು ಬರಬೇಕಾಗುತ್ತದೆ. ಈ ದೇಶಗಳಲ್ಲಿ ಆಂತರಿಕ ಸಂಘರ್ಷ ಇಲ್ಲವೇ ಸಂರಕ್ಷಣೆಗೆ ಆದ್ಯತೆ ಇಲ್ಲವಾದಲ್ಲಿ, ಅಪಾಯ ತಪ್ಪಿದ್ದಲ್ಲ. ಮೊಟ್ಟೆಯಿಡುವಲ್ಲಿ ಮತ್ತು ಮಾರ್ಗ ಮಧ್ಯೆ ಬೇಟೆಗಾರರ ಬಲೆ, ಗುಂಡು ಹಾಗೂ ಪ್ರಾಣಿಗಳಿಗೆ ಸಿಲುಕುತ್ತವೆ. ವಲಸೆ ಹಕ್ಕಿಗಳ ಸಂರಕ್ಷಣೆಗೆ 1918ರ ಅಮೆರಿಕದ ವಲಸೆ ಹಕ್ಕಿಗಳ ಕಾಯ್ದೆ ಹಾಗೂ ಆಫ್ರಿಕನ್-ಯುರೇಷಿಯನ್ ಹಕ್ಕಿಗಳ ಒಪ್ಪಂದ ಸೇರಿದಂತೆ ಹಲವು ಅಂತರ್‌ರಾಷ್ಟ್ರೀಯ ಒಪ್ಪಂದಗಳಿವೆ. ಹೀಗಿದ್ದರೂ, ಹಕ್ಕಿಗಳ ಹತ್ಯೆ ನಿಂತಿಲ್ಲ. ಭಾರತಕ್ಕೆ ಆಗಮಿಸುವ ಸೈಬೀರಿಯನ್ ಕ್ರೇನ್‌ಗಳ ಸಂಖ್ಯೆ ಕುಸಿಯಲು ಅಫ್ಘಾನಿಸ್ಥಾನ ಮತ್ತು ಕೇಂದ್ರ ಏಶ್ಯದಲ್ಲಿ ನಡೆದ ಬೇಟೆ ಕಾರಣ. ವಿದ್ಯುತ್ ತಂತಿಗಳು, ಪವನ ವಿದ್ಯುತ್ ಕೇಂದ್ರಗಳು ಹಾಗೂ ಸಮುದ್ರದಲ್ಲಿನ ತೈಲ ರಿಗ್‌ಗಳು ಹಕ್ಕಿಗಳ ಸಾವಿಗೆ ಕಾರಣವಾಗುತ್ತಿವೆ.

ಹಕ್ಕಿಗಳು ಅಪಾರ ಸಂಖ್ಯೆಯಲ್ಲಿ ವಲಸೆ ಹೋಗುವುದರಿಂದ, ಪ್ರಭೇದವೊಂದು ನಾಶವಾಗುವ ಸಾಧ್ಯತೆಯೂ ಇದೆ. ಪ್ಯಾಸೆಂಜರ್ ಪಿಜನ್(ಎಕ್ಟೋಪಿಸ್ಟೆಸ್ ಮೈಗ್ರಟೋರಿಯಸ್)ಗಳು ವಲಸೆ ವೇಳೆ 1.6 ಕಿ.ಮೀ. ಅಗಲ ಮತ್ತು 480 ಕಿ.ಮೀ. ಉದ್ದಗಿನ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಸೂರ್ಯನನ್ನೇ ಮುಚ್ಚಿಬಿಡುತ್ತಿದ್ದವಂತೆ. ಗುಂಪು ಹಾಯ್ದುಹೋಗಲು ಹಲವು ದಿನ ತೆಗೆದುಕೊಳ್ಳುತ್ತಿತ್ತು ಎಂದು ದಾಖಲಾಗಿದೆ. ಈಗ ಈ ಪಕ್ಷಿಗಳು ನಿರ್ವಂಶವಾಗಿದ್ದು, ಅಪಾರ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದುದು ಇದಕ್ಕೆ ಕಾರಣ ಎನ್ನಲಾಗಿದೆ.

ಹಾರಾಡುವ ಈ ವಿಶಿಷ್ಟ ಜೀವಿಗಳು ಆಹಾರದ ರಕ್ಷಕರು. ಸಮಯಕ್ಕೆ ಸರಿಯಾಗಿ ಪರಾಗಸ್ಪರ್ಶ ನಡೆಯದೆ ಇದ್ದಲ್ಲಿ, ಆಹಾರ ಉತ್ಪಾದನೆ ಆಗುವುದಿಲ್ಲ. ಮನುಷ್ಯರು ಎಷ್ಟೇ ಬುದ್ಧಿವಂತರಾಗಿದ್ದರೂ, ಸಸ್ಯಗಳಂತೆ ದ್ಯುತಿ ಸಂಶ್ಲೇಷಣೆ ಮಾಡಲಾರರು. ನಮ್ಮ ಅಸ್ತಿತ್ವ ಸಸ್ಯಗಳ ಉಳಿವನ್ನು ಅವಲಂಬಿಸಿದ್ದು, ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಪಕ್ಷಿಗಳನ್ನು-ಕೀಟಗಳನ್ನು ಆಧರಿಸಿವೆ. ಪಕ್ಷಿಗಳಿಲ್ಲದೆ ಸಸ್ಯಗಳಿಲ್ಲ, ಸಸ್ಯಗಳಿಲ್ಲದೆ ನಾವು ಇಲ್ಲ. ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳಲ್ಲಿ ಆಹಾರ ಸೃಷ್ಟಿಯಾಗುವುದಿಲ್ಲ ಎನ್ನುವ ಪ್ರಜ್ಞೆ ನಮಗೆ ಬರಬೇಕಿದೆ.