ಬಿಜೆಪಿ, ಸಂಘಪರಿವಾರದಿಂದ ಟಿಪ್ಪು ಕೊಂದ ದ್ರೋಹವನ್ನು ಒಕ್ಕಲಿಗರ ತಲೆಗೆ ಕಟ್ಟುವ ಪ್ರಯತ್ನ: ತಲಕಾಡು ಚಿಕ್ಕರಂಗೇಗೌಡ
ಮಂಡ್ಯ, ಮಾ.2: ಬಿಜೆಪಿ, ಸಂಘಪರಿವಾರ ಟಿಪ್ಪು ಕೊಂದ ದ್ರೋಹವನ್ನು ಒಕ್ಕಲಿಗರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿವೆ. ಇತಿಹಾಸದಲ್ಲಿ ಇಲ್ಲದ ಉರಿಗೌಡ, ದೊಡ್ಡನಂಜೇಗೌಡ ಎಂಬ ಹೆಸರುಗಳನ್ನಿಟ್ಟಕೊಂಡು ರೈತ ಸಮುದಾಯಕ್ಕೆ ದೇಶದ್ರೋಹಿ ಸ್ಥಾನ ನೀಡುತ್ತಿವೆ ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಹೇಳಿದರು.
ಟಿಪ್ಪು ಹೇಗೆ ಸತ್ತ ಎಂಬ ಬಗ್ಗೆ ಯಾವುದೇ ಗೊಂದಲಗಳಿಲ್ಲ, ಕ್ಷಣಕ್ಷಣದ ಮಾಹಿತಿಯನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಅನಾಮಧೇಯ ವ್ಯಕ್ತಿ ಹಾರಿಸಿದ ಗುಂಡಿನಿಂದ ಟಿಪ್ಪುಸತ್ತ ಎನ್ನುವ ದಾಖಲೆಗಳಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ದಾಖಲೆಗಳಿಲ್ಲದ, ಆಧಾರವಿಲ್ಲದ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹಾಕಿದ ಆಧಾರ ರಹಿತ ಸಂದೇಶ ನಂಬಿ ಬಿಜೆಪಿ ಮುಖಂಡರು ಒಕ್ಕಲಿಗರ ಮೇಲೆ ದ್ರೋಹದ ಆರೋಪ ಹೊರಿಸುತ್ತಿದ್ದಾರೆ.ಈ ಆರೋಪದಿಂದ ಗಾಂಧೀಜಿಯನ್ನು ಕೊಂದ ನಾಥೂರಾಂ ಗೂಡ್ಸೆ ವಂಶಸ್ಥರ ಸ್ಥಿತಿ ಒಕ್ಕಲಿಗ ಸಮುದಾಯದ ಮೇಲೂ ಬರುವ ಅಪಾಯವಿದೆ. ಟಿಪ್ಪು ಒಕ್ಕಲಿಗರಿಗೆ ಭೂಮಿ ಕೊಟ್ಟಿದ್ದಾನೆ, ಅಂಥವರು ಟಿಪ್ಪುವನ್ನು ಕೊಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿಂದೆ ರಾಜರನ್ನು ಕೊಂದವರೇ ಮುಂದಿನ ರಾಜರಾಗುತ್ತಿದ್ದರು. ಉರಿಗೌಡ, ದೊಡ್ಡನಂಜೇಗೌಡರೇ ಟಿಪ್ಪುವನ್ನು ಕೊಂದ ಎಂದರೆ ಅವರನ್ನೇಕೆ ಮೈಸೂರು ರಾಜರನ್ನಾಗಿ ಮಾಡಲಿಲ್ಲ, ಏಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಬ್ರಿಟೀಷರು ಸಿಂಹಾಸನದಲ್ಲಿ ಕೂರಿಸಿದರು? ಈಗಲಾದರೂ ಟಿಪ್ಪು ಕೊಂದ ಉರಿಗೌಡ, ದೊಡ್ಡನಂಜೇಗೌಡರ ವಂಶಸ್ಥರಿಗೆ ನ್ಯಾಯ ಒದಗಿಸಿ ಮೈಸೂರು ಅರೆಮನೆಯನ್ನು ಬಿಟ್ಟಕೊಡುತ್ತೀರಾ ಎಂದು ಸವಾಲು ಹಾಕಿದರು.