ನೆನಪುಗಳ ಮೆರವಣಿಗೆಯ ಬಳ್ಳಾರಿ ರಂಗ ಸಮ್ಮೇಳನ

Update: 2023-03-03 08:55 GMT

ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಅಲ್ಲಿನ ರಂಗತೋರಣ ಸಂಸ್ಥೆಯು ಆಯೋಜಿಸಿದ್ದ ಕಂಪೆನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನ ಮೆಲುಕು ಹಾಕುವಂಥದ್ದು. ಕಲಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಕರ್ನಾಟಕ ನಾಟಕ ಅಕಾಡಮಿ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲಕರ-ಕಲಾವಿದರ ಸಂಘದ ಸಹಯೋಗದಲ್ಲಿ ಎರಡು ದಿನಗಳ ಸಮ್ಮೇಳನವು ರಂಗತೋರಣದ ಅಧ್ಯಕ್ಷ ಪ್ರೊ.ಆರ್. ಭೀಮಸೇನ ಹಾಗೂ ಕಾರ್ಯದರ್ಶಿ ಪ್ರಭುದೇವ ಕಪಗಲ್ಲು ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು.

ಬಳ್ಳಾರಿ ಎಂದರೆ ರಾಘವ

ಬಳ್ಳಾರಿ ಎಂದರೆ ಜೋಳದರಾಶಿ ದೊಡ್ಡನಗೌಡರು

ಬಳ್ಳಾರಿ ಎಂದರೆ ಎಲಿವಾಳ ಸಿದ್ಧಯ್ಯ

ಬಳ್ಳಾರಿ ಎಂದರೆ ಬೆಳಗಲ್ಲು ವೀರಣ್ಣ

ಬಳ್ಳಾರಿ ಎಂದರ ಸುಭದ್ರಮ್ಮ ಮನ್ಸೂರ

ಬಳ್ಳಾರಿ ಎಂದರೆ ಸಿರಿಗೇರಿ ನಾಗನಗೌಡರು

ಹೀಗೆ ಬಳ್ಳಾರಿಯ ರಂಗ ಪರಂಪರೆಯನ್ನು ಥಟ್ಟನೆ ಗುರುತಿಸಬಹುದು. ಬಳ್ಳಾರಿ ಎಂದರೆ ಬಿಸಿಲಷ್ಟೇ ಅಲ್ಲ, ಅಲ್ಲಿನ ಜನರ ರಂಗಪ್ರೀತಿ ಕಡುಬಿಸಿಲಿನಷ್ಟೇ ಪ್ರಖರ. ಜೊತೆಗೆ ಅಲ್ಲಿನ ರಂಗಕಲಾವಿದರು ಬಿಸಿಲಿನಷ್ಟೇ ಪ್ರಖರ. ಇಂಥ ಬಳ್ಳಾರಿ ಕುರಿತು ಪ್ರಸ್ತಾಪಿಸಲು ಕಾರಣವಿದೆ. ಕಳೆದ ವಾರ (ಫೆಬ್ರವರಿ ೨೬, ೨೭) ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಅಲ್ಲಿನ ರಂಗತೋರಣ ಸಂಸ್ಥೆಯು ಆಯೋಜಿಸಿದ್ದ ಕಂಪೆನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನ ಮೆಲುಕು ಹಾಕವಂಥದ್ದು. ಕಲಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಕರ್ನಾಟಕ ನಾಟಕ ಅಕಾಡಮಿ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲಕರ-ಕಲಾವಿದರ ಸಂಘದ ಸಹಯೋಗದಲ್ಲಿ ಎರಡು ದಿನಗಳ ಸಮ್ಮೇಳನವು ರಂಗತೋರಣದ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಹಾಗೂ ಕಾರ್ಯದರ್ಶಿ ಪ್ರಭುದೇವ ಕಪಗಲ್ಲು ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು.

ಸಮ್ಮೇಳನ ನಡೆದ ರಾಘವ ಕಲಾಮಂದಿರವು ಐವತ್ತರ ದಶಕದಲ್ಲಿ ಶಂಕುಸ್ಥಾಪನೆಗೊಂಡು, ಅರವತ್ತರ ದಶಕದಲ್ಲಿ ಟ್ರಸ್ಟ್ ರಚನೆಗೊಂಡಿತು. ಇಂಥ ಕಲಾಮಂದಿರದ ಆವರಣದಲ್ಲಿ ನಟರಾಜನ ಚಿತ್ರವಿದ್ದ ಧ್ವಜವನ್ನು ಆರೋಹಣ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಸಂಜೆ ಪಲ್ಲಕ್ಕಿಯಲ್ಲಿ ನಟರಾಜನ ವಿಗ್ರಹವನ್ನಿಟ್ಟು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಅನೇಕ ನಾಟಕ ಕಂಪೆನಿಗಳ ಮಾಲಕರು- ಕಲಾವಿದರು ತಮ್ಮ ಕಂಪೆನಿಗಳ ಬ್ಯಾನರುಗಳನ್ನು ಹಿಡಿದು ಭಾಗವಹಿಸಿದ್ದರು.

ಚಟಕ್ಕೆ ಚಾಂದಿನಿ: ರಾಘವ ಕಲಾಮಂದಿರವನ್ನು ಕಂಡ ಖುಷಿಯಾದವರು ಹಿರಿಯ ರಂಗಕಲಾವಿದ ಬಾಬಣ್ಣ ಕಲ್ಮನಿ. ೧೯೮೦ರಲ್ಲಿ ಬಿ.ಆರ್.ಅರಿಸಿನಗೋಡಿ ಅವರ ‘ಬಸ್ ಕಂಡಕ್ಟರ್’ ನಾಟಕವನ್ನು ಬಾಬಣ್ಣ ಕಲ್ಮನಿ ಅವರು ತಮ್ಮ ಕುಕನೂರು ಲಲಿತಕಲಾ ನಾಟ್ಯ ಸಂಘದ ವತಿಯಿಂದ ರಾಘವ ಕಲಾಮಂದಿರದಲ್ಲಿ ಆಡಿದ್ದರು. ಆ ನಾಟಕ ಆಗ ೧೫೦ ಪ್ರಯೋಗಗಳನ್ನು ಕಂಡಿತ್ತು ಎಂದು ಬೀಡಿ ಸೇದುತ್ತಾ ಬಾಬಣ್ಣ ಕಲ್ಮನಿ ನೆನಪಿಸಿಕೊಂಡರು. ಅವರೊಂದಿಗೆ ಪಾತ್ರ ನಿರ್ವಹಿಸುತ್ತಿದ್ದ ರಾಜಾಸಾಬ್ ಮಲ್ಲಾಪುರ ಅವರೊಂದಿಗೆ, ‘‘ಇಂದಿನ ಕಲಾವಿದರು ಚಟಕ್ಕೆ ಚಾಂದಿನಿ ಹಾಗೆ ಅಂದರೆ ಹಗಲು ಚಟ ಮಾಡಿ, ಚಾಂದಿನಿ ಹೊತ್ತಲ್ಲಿ ಪಾತ್ರ ಮಾಡೋರು. ನಮ್ಮ ಕಾಲದಲ್ಲಿ ರಾತ್ರಿ ಹತ್ತು ಗಂಟೆಗೆ ಆರಂಭವಾಗಿ ನಸುಕಿನ ಐದರವರೆಗೆ ನಡೆಯುತ್ತಿತ್ತು. ಆಗ ಮಲಗಿದರೆ ಮಧ್ಯಾಹ್ನ ಏಳುತ್ತಿದ್ದೆವು. ಊಟ ಮಾಡಿ ಮಲಗಿದರೆ ಸಂಜೆ ಹೊತ್ತಿಗೆ ಎದ್ದು ಬಣ್ಣ ಹಚ್ಚಿಕೊಂಡು ನಾಟಕ ಆಡುತ್ತಿದ್ದೆವು. ಆಗ ಚಟ ಮಾಡಲು ಸಮಯ ಇರಲಿಲ್ಲ’’ ಎಂದು ತಮ್ಮ ಗತವೈಭವಕ್ಕೆ ಮರಳಿದರು.  ಅಲ್ಲದೆ ‘‘ರಂಗಭೂಮಿ ಎಂದರೆ ಒಂದು ರೂಪಾಯಿಯಂತೆ. ಇದರ ಎಂಟಾಣೆಯಲ್ಲಿ ಕಲಾವಿದರ ರೂಪ ಆಕರ್ಷಿಸಬೇಕು. ಉಳಿದ ನಾಲ್ಕಾಣೆಯಲ್ಲಿ ಅಭಿನಯ ಇರಬೇಕು. ಇನ್ನೊಂದು ನಾಲ್ಕಾಣೆಯಲ್ಲಿ ಸಾಹಿತ್ಯ, ಸಂಗೀತ, ಸಂಭಾಷಣೆ ಮುಖ್ಯವಾಗಬೇಕು. ಹಿಂಗ ಒಂದು ರೂಪಾಯಿಯಷ್ಟು ಪೂರ್ತಿಯಾದರೆ ರಂಗಭೂಮಿ ಗೆದ್ದಂತೆ’’ ಎಂದು ವಿಶ್ಲೇಷಿಸಿದರು.

ಅವರ ಹಾಗೆ ಅಲ್ಲಿ ಸೇರಿದ್ದ ಅನೇಕ ಕಲಾವಿದರು ಎಲೆ, ಅಡಿಕೆ, ಸುಣ್ಣ, ತಂಬಾಕು ಹಂಚಿಕೊಂಡು ತಿನ್ನುತ್ತ, ಸುಖ-ದುಃಖಗಳನ್ನೂ ಹಂಚಿಕೊಂಡರು ಜೊತೆಗೆ ರಂಗಬದುಕನ್ನು ಮೆಲುಕು ಹಾಕಿದರು.

ಹೀಗೆಯೇ ಬಳ್ಳಾರಿ ಎಂದ ಕೂಡಲೇ ಒಂದೂವರೆ ವರ್ಷ ಒಂದೇ ನಾಟಕ ಪ್ರಯೋಗಗೊಂಡಿದ್ದನ್ನು ಕಂಪೆನಿ ನಾಟಕಗಳ ಮ್ಯಾನೇಜರ್ ವಿಜಯಪುರದ ಮಹಾದೇವಪ್ಪ ಹುಣಶ್ಯಾಳ ಸ್ಮರಿಸಿದರು. ಅದು ೧೯೭೫ರಲ್ಲಿ ಸುಳ್ಳದ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘವು ಕೆ.ಎನ್.ಸಾಳುಂಕೆ ಅವರ ‘ವರ ನೋಡಿ ಹೆಣ್ಣು ಕೊಡು’ ನಾಟಕವನ್ನು ಒಂದೂವರೆ ವರ್ಷದವರೆಗೆ ಆಡಿತ್ತು. ಒಟ್ಟು ೩೮೫ ಪ್ರಯೋಗಗಳನ್ನು ಕಂಡಿತ್ತು. ಈಚೆಗೆ ಈ ನಾಟಕವನ್ನು ‘ಸಂದಿಮನಿ ಸಂಗವ್ವ’ ಎಂದು ಚಿತ್ತರಗಿ ಕಂಪೆನಿಯ ಮಂಜುನಾಥ ಅವರು ಆಡಿ ಗೆದ್ದಿದ್ದಾರೆ.

ಮತ್ತೆ ಮಹಾದೇವಪ್ಪಹುಣಶ್ಯಾಳ ಅವರು ನೆನಪಿಗೆ ಜಾರಿ ‘ಕಿತ್ತೂರ ಚೆನ್ನಮ್ಮ’ ನಾಟಕವನ್ನು ಸುಳ್ಳದ ದೇಸಾಯಿ ಅವರ ಸಂಘವು ಆರು ತಿಂಗಳವರೆಗೆ ಆಡಿತ್ತು. ಈ ನಾಟಕದ ಶಿವಣ್ಣನ ಪಾತ್ರವನ್ನು ವರವಿ ಫಕೀರಪ್ಪನಿರ್ವಹಿಸಿದ್ದರು ಎಂದರು. ವರವಿ ಫಕೀರಪ್ಪಅವರಿಗೆ ಈಗ ೮೨ ವರ್ಷ ವಯಸ್ಸು. ಈಗಲೂ ಬೀಡಿ ಸೇದುತ್ತಾ ವೃತ್ತಿ ರಂಗಭೂಮಿ ಕುರಿತು ಖಡಕ್ಕಾಗಿ ಮಾತನಾಡುವ ವರವಿ ಫಕೀರಪ್ಪಅವರೊಂದಿಗೆ ಸಮ್ಮೇಳನದಲ್ಲಿ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಹಾಗೂ ರಂಗಕಲಾವಿದೆ ಉಮಾರಾಣಿ ಬಾರಿಗಿಡದ ಅವರು ಸಂವಾದ ನಡೆಸಿದರು. ಆಗ ವರವಿ ಫಕೀರಪ್ಪಅವರು ‘‘ರಂಗಭೂಮಿ, ವ್ಯಂಗ್ಯಭೂಮಿ ಹಾಗೂ ಮಂಗಭೂಮಿ ಆಗಿದೆ. ನಮ್ಮ ಕಾಲದಲ್ಲಿ ರಂಗಭೂಮಿ ಆಗಿತ್ತು. ನಂತರ ವ್ಯಂಗ್ಯಭೂಮಿ ಆಯಿತು. ಅಂದರೆ ಇತರ ಕಲಾವಿದರ ಪಾತ್ರಗಳನ್ನು ವ್ಯಂಗ್ಯವಾಡುವುದು ಹಾಗೂ ವ್ಯಂಗ್ಯ ಮಾಡುವುದಾಯಿತು. ಈಗೀಗ ಪಾತ್ರಗಳನ್ನು ಮಂಗ್ಯಾನ ಹಾಗೆ ಮಾಡುವುದು ಮಂಗಭೂಮಿಯಾಗಿದೆ. ಮೊಬೈಲ್ ಫೋನ್, ಟಿವಿ ನೋಡುತ್ತ ಪಾತ್ರ ಮಾಡುವ ಬದಲು ಆಸಕ್ತಿಯಿಂದ ಪಾತ್ರಗಳನ್ನು ಕಲಾವಿದರು ಮಾಡಬೇಕು’’ ಎಂದು ಕಿವಿಮಾತು ಹೇಳಿದರು. ಇವರ ಮಾತಿಗೆ ಪೂರಕವಾಗಿ ಹಿರಿಯ ರಂಗಕಲಾವಿದ ಜೇವರ್ಗಿ ರಾಜಣ್ಣ ಅವರು ‘‘ಅಶ್ಲೀಲ ಸಂಭಾಷಣೆ, ಐಟಂ ಸಾಂಗ್ ಇರುವ ನಾಟಕಗಳನ್ನು ಪ್ರೇಕ್ಷಕರೇ ತಿರಸ್ಕರಿಸುತ್ತಿದ್ದಾರೆ. ಇಂಥ ನಾಟಕಗಳನ್ನು ಆಡುವ ಕಂಪೆನಿಗಳ ಕಲೆಕ್ಷನ್ ಕಡಿಮೆಯಾಗಿ ಬಂದ್ ಆಗುವ ಸ್ಥಿತಿಯಲ್ಲಿವೆ’’ ಎಂದು ಎಚ್ಚರಿಸಿದರು.

ಇಂಥದ್ದೇ ಮಾತುಗಳನ್ನು ಆಡಿದವರು ಧಾರವಾಡದ ಹಿರಿಯ ರಂಗಕಲಾವಿದರಾದ ಎಂ.ಎಸ್.ಕೊಟ್ರೇಶ. ಅವರು ಮಾತನಾಡಿದ್ದು ವೇದಿಕೆ ಮೇಲಲ್ಲ. ಅವರ ಗೆಳೆಯರಾದ ಬಾಬಣ್ಣ ಕಲ್ಮನಿ, ರಾಜಾಸಾಬ್ ಅವರೊಂದಿಗೆ ನಡೆದ ಹರಟೆಯಲ್ಲಿ. ಕೊಟ್ರೇಶ ಅವರು ಹೇಳಿದ್ದು;

‘‘ರೂಪ ಶೃಂಗಾರದ

ಸಪ್ತ ಸ್ವರಗಳ

ನವರಸಗಳ ಅನಂತ

ಚೈತನ್ಯಧಾಮ ರಂಗಭೂಮಿ

ಇಂಥ ರಂಗಭೂಮಿಯಲ್ಲಿ ಮನುಷ್ಯ ಮಹಾದೇವನಾಗ್ತಾನ. ನರ ಹರನಾಗ್ತಾನ. ಕಿಂಕರ ಶಂಕರ ಆಗ್ತಾನ. ಆದ್ರ ರಂಗಭೂಮಿ ಅಂದ್ರ ಬೆಂಕಿ ಇದ್ದಂಗ. ಅದರ ಕಾವು ಎಷ್ಟು ತಗೋಬೇಕೋ ಅಷ್ಟೇ ತಗೋಬೇಕು. ಬಹಳ ಅಪ್ಪಿಕೊಳ್ಳಲು ಹೋದ್ರ ಸುಟ್ಟು ಹೋಗ್ತೀವಿ’’ಎಂದು ಎಚ್ಚರಿಕೆ ಮಾತುಗಳನ್ನು ಹೇಳಿದ್ದನ್ನು ಮರೆಯಲಾಗದು.

ಇಂಥದ್ದೇ ನೆನಪುಗಳ ಮೆರವಣಿಗೆಯು ಸಮ್ಮೇಳನದ ಉದ್ದಕ್ಕೂ ನಡೆಯಿತು.