ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರು: ಅಮಿತ್ ಶಾ

"ಜೆಡಿಎಸ್, ಕಾಂಗ್ರೆಸ್ ಕುಟುಂಬವಾದವನ್ನು ಪೋಷಿಸುವ ಪಕ್ಷಗಳು"

Update: 2023-03-03 14:29 GMT

ಬೀದರ್: ಬಿಜೆಪಿಯ (BJP) ವಿಜಯ ಸಂಕಲ್ಪ ಯಾತ್ರೆಯು ಬಡವರ ಕಲ್ಯಾಣದ ಸಂಕಲ್ಪವನ್ನು ಹೊಂದಿದೆ. ಇದು ರಾಜ್ಯದ ವಿಕಾಸದ ಸಂಕಲ್ಪದ ಯಾತ್ರೆಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದರು.

ಶುಕ್ರವಾರ ಇಲ್ಲಿನ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಯಾತ್ರೆಯು ಕಲ್ಯಾಣ ಕರ್ನಾಟಕದ ವಿವಿಧ ಕಡೆ ಸಂಚರಿಸಲಿದೆ. ಈ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಬೇಕಿದೆ ಎಂದು ಕಾರ್ಯಕರ್ತರನ್ನು ಕರೆ ನೀಡಿದರು.

ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರಿದ್ದಾರೆ. ಇವರು ಕರ್ನಾಟಕಕ್ಕೆ ಒಳಿತನ್ನು ಕೊಡಲು ಸಾಧ್ಯವೇ? ಕಾಂಗ್ರೆಸ್ ಬಳಿ ಗೆಲುವಿನ ಸೂತ್ರ ಉಳಿದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಕುಸಿಯುತ್ತಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಟೀಕೆಯಿಂದ ಕಮಲ ಇನ್ನಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ಅಮಿತ್ ಶಾ ಹೇಳಿದರು.

ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ಬಿಜೆಪಿ, ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಿದೆ. ಗರಿಷ್ಠ ಹಣವನ್ನೂ ಈ ಭಾಗಕ್ಕೆ ಕೊಟ್ಟಿದ್ದೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ಜೆಡಿಎಸ್‍ಗೆ ಕೊಡುವ ಮತ ಸಂಪೂರ್ಣ ಹಾಳಾಗುತ್ತದೆ. ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದು ಅವರು ಟೀಕಿಸಿದರು.

ಜಗಜ್ಯೋತಿ ಬಸವೇಶ್ವರರು ಪ್ರಜಾಪ್ರಭುತ್ವದ ಸಂದೇಶ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದರು ಎಂದು ಅಮಿತ್ ಶಾ ಹೇಳಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯಕ್ಕೆ ಸಾಲದ ಹೊರೆ ಕೊಟ್ಟದ್ದು ಕಾಂಗ್ರೆಸ್. ಜನರಿಗೆ ಮೋಸ ಮಾಡುವುದು, ಸುಳ್ಳು, ಭ್ರಷ್ಟಾಚಾರ ಎಂದರೆ ಅದು ಕಾಂಗ್ರೆಸ್. ಜಾತಿ, ಮತಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಹಿನ್ನಡೆಗೆ ಕಾಂಗ್ರೆಸ್ ಕಾರಣ. ನೈಜ ಸಾಮಾಜಿಕ ನ್ಯಾಯವನ್ನು ಬಿಜೆಪಿ ಮೀಸಲಾತಿ ಮೂಲಕ ಕೊಟ್ಟಿದೆ. ಇದು ಕಾಂಗ್ರೆಸ್ ಹೊಟ್ಟೆಯಲ್ಲಿ ತಳಮಳಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು. 

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ನೀಡಲಾಗುತ್ತಿದೆ. ನಮ್ಮದು ಜನಸಮಸ್ಯೆಗೆ ಸ್ಪಂದಿಸುವ-ನಿರ್ಣಾಯಕ ಸರಕಾರ. ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 4 ರಥಗಳು 224 ಕ್ಷೇತ್ರಗಳಿಗೆ ಭೇಟಿ ಕೊಡಲಿವೆ. ಮಾ.25ರಂದು ದಾವಣಗೆರೆಯಲ್ಲಿ ಬೃಹತ್ ಸಭೆ ನಡೆಯಲಿದ್ದು, ಪ್ರಧಾಣಿ ಮೋದಿ ಭಾಗವಹಿಸಲಿದ್ದಾರೆ. ಬಸವಕಲ್ಯಾಣ ಈ ಹಿಂದೆ ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಗಮನಿಸಿ. ಕಾಂಗ್ರೆಸ್ ಹಣ, ತೋಳ ಬಲದ ಮೂಲಕ ಗೆಲ್ಲುವುದು ತಿರುಕನ ಕನಸಷ್ಟೇ ಎಂದು ಯಡಿಯೂರಪ್ಪ ಸವಾಲೆಸೆದರು.

ಸಾರ್ವಜನಿಕ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ, ಸಚಿವರಾದ ಬಿ.ಶ್ರೀರಾಮುಲು, ಪ್ರಭು ಚೌಹಾಣ್, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಉಮೇಶ್ ಜಾಧವ್, ಶಾಸಕ ರಘುನಾಥ ಮಲ್ಕಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ: ಸಚಿವ ನಾಗೇಶ್

Similar News