ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳಿಂದ ಭೀತಿಯಲ್ಲಿರುವ ಬಿಜೆಪಿ ಹಿಂಸೆಗೆ ಕರೆ ನೀಡುತ್ತಿದೆ: ರಣದೀಪ್ ಸುರ್ಜೆವಾಲ

Update: 2023-03-03 14:59 GMT

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಘೋಷಿಸಿರುವ ಮೂರು ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿಯವರಲ್ಲಿ ಭಯ ಮೂಡಿಸಿದೆ. ಈ ಕಾರಣದಿಂದಾಗಿ ಅವರು ಸಿದ್ದರಾಮಯ್ಯ, ಡಿಕೆಶಿ ಅವರನ್ನು ಹತ್ಯೆ ಮಾಡಬೇಕೆಂದು ಕರೆ ನೀಡುತ್ತಿದ್ದಾರೆ. ಬಿಜೆಪಿಯವರು ಸಮಯ, ದಿನಾಂಕ ಗೊತ್ತು ಮಾಡಲೀ, ನಾನು ಸಿದ್ದು, ಡಿಕೆಶಿಯವರನ್ನು ಕರೆತರುತ್ತೇನೆ, ಬಿಜೆಪಿಯವರಿಗೆ ತಾಕತ್ತಿದ್ದರೇ, ತಾಯಿ ಹಾಲು ಕುಡಿದಿದ್ದರೇ ಹತ್ಯೆ ಮಾಡಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಸದಸ್ಯ ರಣದೀಪ್‍ಸಿಂಗ್ ಸುರ್ಜೇವಾಲ ಸವಾಲು ಹಾಕಿದ್ದಾರೆ.

ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನರ ಬದುಕಿನ ವಿಚಾರ ಹಾಗೂ ಅಹಿಂಸಾ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದರೆ, ಬಿಜೆಪಿ ಹಿಂಸಾತ್ಮಕ ರಾಜನೀತಿಯ ಇತಿಹಾಸ ಹೊಂದಿರುವ ಪಕ್ಷವಾಗಿದೆ. ಬಿಜೆಪಿಯವರು ಚುನಾವಣಾ ಸಂದರ್ಭದಲ್ಲಿ ಹಿಂಸಾತ್ಮಕ ರಾಜನೀತಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಹತ್ಯೆ ಮಾಡಲು ಬಿಜೆಪಿ ನಾಯಕರು ಕರೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಜನಸಾಮಾನ್ಯರ ಬದುಕು ನಾಶವಾಗಿದೆ, ಜನರ ಬದುಕು ನಾಶ ಮಾಡಿರುವ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿದೆ. ಸರಕಾರದ ಸಚಿವರು, ಶಾಸಕರಾದಿಯಾಗಿ ಇಡೀ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿಯವರಿಗೆ ಎಷ್ಟು ಹಣ ಬೇಕು ಹೇಳಲಿ, ನಾವು ಜನರಿಂದ ಹಣ ಸಂಗ್ರಹಿಸಿ ಕೊಡುತ್ತೇವೆ, ಆದರೆ ಬಿಜೆಪಿಯವರು ಕಮಿಷನ್ ದಂಧೆಗೆ ಬಲಿಯಾಗಿರುವ ಸಂತೋಷ್ ಪಾಟೀಲ್‍ನನ್ನು ಕರೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ತುಮಕೂರಿನ ಬಿಜೆಪಿ ಶಾಸಕ ಗುತ್ತಿಗೆದಾರರ ಬಳಿ 90 ಲಕ್ಷ ಲಂಚ ಕೇಳಿದ್ದಕ್ಕೆ ಕಂಟ್ರಾಕ್ಟರ್ ಅಸೋಸಿಯೇಷನ್ ಆಡಿಯೋ ಸಾಕ್ಷಿಯೊಂದಿಗೆ ಪ್ರಧಾನಿಗೆ ಪತ್ರ ಬರೆದು ನ್ಯಾಯ ಕೇಳಿದ್ದರು, ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಜೆಪಿ6 16 ಶಾಸಕರ, 8 ಮಂತ್ರಿಗಳ 40ಪರ್ಸೆಂಟ್ ಕಮಿಷನ್ ದಂಧೆಯಿಂದ ಬೇಸತ್ತು ಪ್ರಧಾನಿಗೆ ದೂರು ನೀಡಿದ್ದರು, ಆದರೆ ಪ್ರಧಾನಿ ಮೋದಿ ಇದುವರೆಗೂ ಈ ಬಗ್ಗೆ ಕ್ರಮವಹಿಸಲಿಲ್ಲ. ಸದ್ಯ ಮೈಸೂರಿನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಮಗ, ಕೆಎಸ್‍ಡಿಎಲ್ ಸಂಸ್ಥೆಯ ಎಂ.ಡಿ ಸಂಸ್ಥೆಯನ್ನು ಭ್ರಷ್ಟಾಚಾರದ ಕೂಪ ಮಾಡಿ 1.90 ಕೋ. ಲಂಚದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾನೆ, ಆತನ ಮನೆಯಲ್ಲಿ 6 ಕೋಟಿ ರೂ. ನಗದು ಪತ್ತೆಯಾಗಿದೆ. ಬಿಜೆಪಿಯವರು ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದ್ದರೂ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ ಈ ಬಗ್ಗೆ ಮಾತನಾಡದೇ ಸಿಎಂ ಸೇರಿದಂತೆ ಬಿಜೆಪಿಯ ಶಾಸಕರು, ಮಂತ್ರಿಗಳನ್ನು ಲೂಟಿ ಮಾಡಲು ಬಿಟ್ಟಿದ್ದಾರೆ ಎಂದು ಸರ್ಜೇವಾಲ ಆರೋಪಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ನಂದೀಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಸ್ಥಳಕ್ಕೆ ಹೋಗಿದ್ದ ಸರಕಾರದ ಸಚಿವರೊಬ್ಬರು ಮಂತ್ರಿಗಳ ಭ್ರಷ್ಟಾಚಾರದಿಂದಲೇ ಅಧಿಕಾರಿಗಳು ಸಾಯುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿದ್ದರು. ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಅವರದೇ ಪಕ್ಷದವರೇ ಸಾಕ್ಷಿ ಹೇಳುತ್ತಿದ್ದರೂ ಸಿಎಂ ಬೊಮ್ಮಾಯಿ ನಮ್ಮ ಬಳಿ ಸಾಕ್ಷಿ ಕೇಳುತ್ತಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ಅವರು ಸಿಎಂ ಖುರ್ಚಿಯನ್ನು 2 ಸಾವಿರ ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆಂದು ಆರೋಪಿಸಿದ್ದಾರೆ. ಇದು ಸುಳ್ಳಾಗಿದ್ದರೇ ಮೋದಿ, ಅಮಿತ್ ಶಾ ಯತ್ನಾಳ್ ಮೇಲೆ ಕ್ರಮವಹಿಸಬೇಕು, ನಿಜವಾಗಿದ್ದರೆ ಸಿಎಂ ಬೊಮ್ಮಾಯಿ ಸಿಎಂ ಖುರ್ಚಿಗೆ ಎಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನೂ ಹೇಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೂವರು ಮಹಿಳೆಯರಿಗೆ ಸುರ್ಜೇವಾಲ ಗ್ಯಾರಂಟಿ ಕಾರ್ಡ್ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಗೀರ್ ಅಹ್ಮದ್, ಮೋಟಮ್ಮ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಎಮ್ಮೆಲ್ಸಿ ಗಾಯತ್ರಿಶಾಂತೇಗೌಡ, ಮಾಜಿ ಶಾಸಕ ಶ್ರೀನಿವಾಸ್, ಮುಖಂಡರಾದ ಡಾ.ವಿಜಯ್‍ಕುಮಾರ್, ಸಚಿನ್ ಮೀಗಾ, ಬಿ.ಎಚ್.ಹರೀಶ್, ಶಿವಾನಂದಸ್ವಾಮಿ, ಎಚ್.ಪಿ.ಮಂಜೇಗೌಡ ಹಿರೇಮಗಳೂರು ಪುಟ್ಟಸ್ವಾಮಿ  ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Similar News