ಕಾಂಗ್ರೆಸ್ ಸರಕಾರ ಇದಿದ್ದರೆ ಭ್ರಷ್ಟಾಚಾರಿಗಳ ಮನೆಗಳ ಮೇಲೆ ದಾಳಿ ಆಗುತ್ತಿರಲಿಲ್ಲ: ಸಿ.ಟಿ. ರವಿ

Update: 2023-03-03 16:55 GMT

ಚಿಕ್ಕಮಗಳೂರು: ಕಾಂಗ್ರೆಸ್ ಸರಕಾರ ಇದಿದ್ದರೇ ಭ್ರಷ್ಟಾಚಾರಿಗಳ ಮನೆಗಳ ಮೇಲೆ ದಾಳಿ ಆಗುತ್ತಿರಲಿಲ್ಲ, ಕೇಸೂ ದಾಖಲಾಗುತ್ತಿರಲಿಲ್ಲ. ಭ್ರಷ್ಟರ ರಕ್ಷಣೆಯ ಕೆಲಸ ಆಗುತ್ತಿತ್ತು ಎಂದು ಬಿಜೆಪಿ ಶಾಸಕನ ಮಗನ ಮೇಲೆ ಲೋಕಾಯುಕ್ತ ದಾಳಿ ಘಟನೆ ಸಂಬಂಧ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರದ ಬದಲು ಕಾಂಗ್ರೆಸ್ ಸರಕಾರದ ಇದಿದ್ದರೆ ರೈಡ್ ಆಗುತ್ತಿರಲಿಲ್ಲ, ಕೇಸನ್ನು ಮುಚ್ಚಿ ಹಾಕುವ ಕೆಲಸ ಆಗುತ್ತಿತ್ತು ಎಂದರು.

ಕಾಂಗ್ರೆಸ್ ಸರಕಾರ ಎಸಿಬಿ ರಚನೆ ಮಾಡಿ 54 ಪ್ರಕರಣಗಳಿಗೆ ಕ್ಲೀನ್‍ಚಿಟ್ ನೀಡಿದರು. ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೆ ಕ್ಲೀನ್‍ಚಿಟ್ ನೀಡಿದರು. ಮರಳು ದಂಧೆ ಮಾಡಿದವರಿಗೂ ಕ್ಲೀನ್‍ಚಿಟ್ ನೀಡಿದರು ಎಂದ ಅವರು, ರಿಡ್ಯೂನಲ್ಲಿ 8ಸಾವಿರ ಕೋಟಿ ಸರಕಾರಕ್ಕೆ ನಷ್ಟ ಆಗಿದೆ ಎಂದು ಕೆಂಪಣ್ಣ ಆಯೋಗ ವರದಿ ನೀಡಿದೆ. ಕದ್ದ ಕಳ್ಳರು ಯಾರೆಂದು ಪ್ರಾಮಾಣಿಕ ತನಿಖೆಯಾಗಿದ್ದರೆ ಕಳ್ಳ ಯಾರು ಲೂಟಿ ಹೊಡೆದವರು ಯಾರೆಂದು ಗೊತ್ತಾಗುತ್ತಿತ್ತು ಎಂದರು.

ಲಂಚಪಡೆಯುವ ಕಳ್ಳರು ಯಾರೇ ಆಗಿದ್ದರೂ ಅವರನ್ನು ಸರಕಾರ ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಈ ಲೋಕಾಯುಕ್ತ ದಾಳಿಯೇ ಉತ್ತಮ ನಿದರ್ಶನ, ಅದೇ ಕಾರಣಕ್ಕೆ ರೈಡ್ ಆಗಿರೋದು ಎಂದು ತಿಳಿಸಿದರು. 

Similar News