ಎಲ್ಲದರಲ್ಲೂ ಎಚ್ಚರವಿರಲಿ: ರಾಷ್ಟ್ರೀಯ ಸುರಕ್ಷತಾ ದಿನದ ತತ್ವ

ಇಂದು ರಾಷ್ಟ್ರೀಯ ಸುರಕ್ಷತಾ ದಿನ

Update: 2023-03-04 07:54 GMT

ಭಾರತದಲ್ಲಿ ಪ್ರತಿವರ್ಷ ಸರಿಸುಮಾರು ಒಂದೂವರೆ ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ. ನಿತ್ಯವೂ ಸರಾಸರಿ 1,130 ಅಪಘಾತಗಳು ಮತ್ತು 422 ಸಾವುಗಳು ಅಥವಾ ಗಂಟೆಗೆ 47 ಅಪಘಾತಗಳು ಮತ್ತು 18 ಸಾವುಗಳು ಸಂಭವಿಸುತ್ತವೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ 2021ರಲ್ಲಿ ದೇಶದಲ್ಲಿ 4,12,432 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,53,972 ಮಂದಿ ಸಾವನ್ನಪ್ಪಿದ್ದಾರೆ ಮತ್ತು 3,84,448 ಮಂದಿ ಗಾಯಗೊಂಡಿದ್ದಾರೆ. 2021ರಲ್ಲಿ ರಸ್ತೆ ಅಪಘಾತಗಳು ಶೇ. 12.6ರಷ್ಟು ಹೆಚ್ಚಾಗಿವೆ. ಒಟ್ಟು ರಸ್ತೆ ಅಪಘಾತಗಳಲ್ಲಿ 1,28,825 ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎಕ್ಸ್ ಪ್ರೆಸ್ವೇ ಸೇರಿದಂತೆ), 96,382 ರಾಜ್ಯ ಹೆದ್ದಾರಿಗಳಲ್ಲಿ ಮತ್ತು 1,87,225 ಇತರ ರಸ್ತೆಗಳಲ್ಲಿ ಸಂಭವಿಸಿವೆ ಎಂದು ‘ಭಾರತದಲ್ಲಿ ರಸ್ತೆ ಅಪಘಾತಗಳು-2021’ ಎಂಬ ಆ ವರದಿ ಹೇಳುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಘಾತಗಳಲ್ಲಿ 56,007 ಜನರು ಸಾವನ್ನಪ್ಪಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿ 37,963 ಮತ್ತು ಇತರ ರಸ್ತೆಗಳಲ್ಲಿ 60,002 ಸಾವುಗಳು ಸಂಭವಿಸಿವೆ. 18ರಿಂದ 45 ವರ್ಷ ವಯಸ್ಸಿನವರು ಅಪಘಾತಗಳಿಗೆ ಹೆಚ್ಚು ಪ್ರಮಾಣದಲ್ಲಿ ಬಲಿಯಾಗಿದ್ದಾರೆ.

 2021ರಲ್ಲಿ ಅತಿ ವೇಗದ ಚಾಲನೆಯಿಂದ 1,07,236 ವ್ಯಕ್ತಿಗಳು ಸಾವನ್ನಪ್ಪಿದ್ದರೆ, ಕುಡಿದು ವಾಹನ ಚಲಾಯಿಸುವುದರಿಂದ 3,314 ಜನರು ಸಾವನ್ನಪ್ಪಿದ್ದಾರೆ. ಲೇನ್ ಅಶಿಸ್ತಿನಿಂದಾಗಿ 8,122 ಸಾವುಗಳು ಮತ್ತು ಸಂಚಾರ ದೀಪ ಉಲ್ಲಂಘನೆ ಯಿಂದ 679 ಸಾವುಗಳು ಸಂಭವಿಸಿವೆ. ಡ್ರೈವಿಂಗ್ ಮಾಡುವಾಗ ಸೆಲ್ ಫೋನ್ ಬಳಸಿ 2,982 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕಾರಣಗಳಿಂದ 31,639 ಸಾವುಗಳು ಸಂಭವಿಸಿವೆ ಎಂದೂ ಆ ವರದಿ ಹೇಳುತ್ತದೆ.

ಸಮೀಕ್ಷೆಯೊಂದು ಹೇಳುವಂತೆ, ಸಾಮಾನ್ಯವಾಗಿ ಮಿತಿಮೀರಿದ ವೇಗವೇ ಅಪಘಾತಗಳಿಗೆ ಹೆಚ್ಚಿನ ಕಾರಣ. ಶೇ. 56ಕ್ಕೂ ಹೆಚ್ಚಿನ ಅಪಘಾತಗಳು ಈ ಕಾರಣದಿಂದ ಸಂಭವಿಸುತ್ತವೆ. ಅಪಾಯಕಾರಿ, ಅಜಾಗರೂಕತೆ ಮತ್ತು ಓವರ್ಟೇಕಿಂಗ್ ಪರಿಣಾಮವಾಗಿ ಶೇ.27ಕ್ಕೂ ಹೆಚ್ಚು ಅಪಘಾತಗಳಾಗುತ್ತವೆ.

ರಸ್ತೆ ಅಪಘಾತವೂ ಸೇರಿದಂತೆ ಎಲ್ಲ ಅವಘಡಗಳನ್ನು ತಪ್ಪಿಸುವ, ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡು ವುದಕ್ಕೆಂದೇ ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತೀ ವರ್ಷ ಮಾರ್ಚ್ 4ರಂದು ಆಚರಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ದುರ್ಘಟನೆಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ತಿಳಿಸುವುದು ಈ ದಿನದ ಆಚರಣೆಯ ಉದ್ದೇಶ.

ಸುರಕ್ಷತಾ ತತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರಕಾರ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ರಚನೆ ಮಾಡಿದೆ. ಇದರ ಕಾರ್ಯಗಳಲ್ಲಿ ರಸ್ತೆ ಸುರಕ್ಷತೆ, ಕೆಲಸದ ಸ್ಥಳದ ಸುರಕ್ಷತೆ, ಮಾನವ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಜಾಗೃತಿಯೂ ಸೇರಿದೆ. ರಾಷ್ಟ್ರೀಯ ಸುರಕ್ಷತಾ ಮಂಡಳಿಯು ರಾಷ್ಟ್ರೀಯ ಮಟ್ಟದ ಸಂಸ್ಥೆ ಹಾಗೂ ಇದೊಂದು ಲಾಭರಹಿತ ಸಂಸ್ಥೆ.
1966ರ ಮಾರ್ಚ್ 4ರಂದು ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. 

ಈ ಸಂಸ್ಥೆಯ ಕೇಂದ್ರ ಕಚೇರಿ ಮುಂಬೈಯಲ್ಲಿದ್ದು, ಕೈಗಾರಿಕಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯನ್ನು ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ. ಜನರಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದ ಆಗುವ ಆರೋಗ್ಯದ ಮೇಲಿನ ದುಷ್ಪರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ವೈಜ್ಞಾನಿಕ ಚಿಂತನೆ, ರೋಗ ತಡೆಗಟ್ಟುವ ಮಾನಸಿಕ ಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶ ಇದರದ್ದಾಗಿದೆ. ಈ ನಿಟ್ಟಿನಲ್ಲಿ ಮಾರ್ಚ್ 6ರಿಂದ 10ರವರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನೂ ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಕೈಗಾರಿಕೆಗಳು ಹೆಚ್ಚಿರುವಲ್ಲಿ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ದಿನವನ್ನು ಆಚರಿಸುತ್ತವೆ. ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೈಗಾರಿಕಾ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಯಾವ ರೀತಿ ಕಡಿಮೆಮಾಡುವುದು ಎಂಬುದರ ಬಗ್ಗೆ ಮಾಹಿತಿ ವಿನಿಮಯ ನಡೆಸಲಾಗುತ್ತದೆ.

ರಾಷ್ಟ್ರೀಯ ಅವಘಡಗಳನ್ನು ನಾಲ್ಕು ರೀತಿಯಲ್ಲಿ ವಿಭಜಿಸಲಾಗಿದೆ. ಅವೆಂದರೆ, ಭೌಗೋಳಿಕ (ನೆರೆಹಾವಳಿ, ಸೈಕ್ಲೋನ್, ಭೂಕಂಪ, ಭೂಕುಸಿತ), ಕೈಗಾರಿಕಾ ಅವಘಡ (ವಿಷಾನಿಲ ದುರಂತ, ಬೆಂಕಿ ಅವಘಡ ಅಥವಾ ಸ್ಫೋಟ, ತೈಲಸೋರಿಕೆ), ಜೈವಿಕ ಅವಘಡ (ಸಾಂಕ್ರಾಮಿಕ ರೋಗಗಳು, ಆಹಾರ ಕಲಬೆರಕೆ, ವಿಷಪೂರಿತ ಆಹಾರ ಸೇವನೆ), ಮತ್ತು ಇತರ ಅವಘಡಗಳು (ರೈಲು, ಬಸ್ಸು, ವಿಮಾನ ದುರಂತ, ಕಟ್ಟಡ ಕುಸಿತ, ಕಾಲ್ತುಳಿತ, ಬಾಂಬ್ ಅವಘಡ).

ಯಾವುದೇ ರೀತಿಯ ಅವಘಡಗಳು ಯಾವುದೇ ಭಾಗದಲ್ಲಿ, ಯಾವಾಗ ಬೇಕಾದರೂ ಸಂಭವಿಸುವ ಸಾಧ್ಯತೆ ಇರುತ್ತದೆ. ಸೂಕ್ತ ರೀತಿಯ ಮುನ್ನೆಚ್ಚರಿಕೆ ವಹಿಸಿದಲ್ಲಿ ಹೆಚ್ಚಿನ ಜೀವಹಾನಿ, ಆಸ್ತಿಪಾಸ್ತಿ ಹಾನಿ ಮತ್ತು ರಾಷ್ಟ್ರೀಯ ಸಂಪನ್ಮೂಲದ ಹಾನಿಯನ್ನು ಕಡಿಮೆ ಮಾಡಲು ಸಾಧ್ಯ. ಇದನ್ನು ಮನವರಿಕೆ ಮಾಡಿಕೊಡುವುದು ಮತ್ತು ಸಾಧ್ಯವಾದಷ್ಟೂ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸುರಕ್ಷತಾ ದಿನ ಮಹತ್ವ ಪಡೆದಿದೆ.