ಹುಬ್ಬಳ್ಳಿ: ಉದ್ಯಮಿ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ನಗದು ಪತ್ತೆ

Update: 2023-03-04 13:17 GMT

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್  ನಿವಾಸದಲ್ಲಿ 8 ಕೋಟಿ ರೂ. ಪತ್ತೆಯಾದ ಬೆನ್ನಲ್ಲೆ ಹುಬ್ಬಳ್ಳಿಯ ಉದ್ಯಮಿಯೊಬ್ಬರ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ ಹುಬ್ಬಳ್ಳಿಯ ಭವಾನಿನಗರದ ಉದ್ಯಮಿ ರಮೇಶ ಬೋನಗೇರಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 500 ರೂ.ಮುಖಬೆಲೆಯ 3 ಕೋಟಿ ರೂ. ನಗದನ್ನು ಪತ್ತೆ ಹಚ್ಚಿದ್ದು, ಹಣದ ಮೂಲದ ಬಗ್ಗೆ ವಿಚಾರಣೆ ಕೈಗೊಂಡಿದೆ.

ಮನೆ ಮಾಲಕರಿಗೆ ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದೆ. ಈ ಪ್ರಕರಣ ಸಂಬಂಧ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ಮೂಲ ಏನು ಮತ್ತು ದೊಡ್ಡಮೊತ್ತದ ಹಣ ಸಂಗ್ರಹಿಸಿಡಲಾಗಿದ್ದ ಉದ್ದೇಶವೇನು ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದೆ.

Similar News