‘40 ಪರ್ಸೆಂಟ್ ಸರಕಾರ’ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ: ಕಾಂಗ್ರೆಸ್ ಲೇವಡಿ

Update: 2023-03-04 15:47 GMT

ಬೆಂಗಳೂರು: ಸರಕಾರದ ಹಣದಲ್ಲಿ ಚುನಾವಣೆ ಪ್ರಚಾರದ ಸಮಾವೇಶ ಆಯೋಜಿಸಿದ ಬಿಜೆಪಿ ನೈತಿಕ ಅಧಃಪತನಕ್ಕೆ ಇಳಿದಿದೆ. ‘40 ಪರ್ಸೆಂಟ್ ಸರಕಾರ’ದಲ್ಲಿ ಭ್ರಷ್ಟಾಚಾರದ ಫಲಾನುಭವಿಗಳಿದ್ದಾರೆಯೇ ಹೊರತು ಯೋಜನೆಗಳ ಫಲಾನುಭವಿಗಳಲ್ಲ. ಬಿಜೆಪಿಯ ಶೇ.40ರಷ್ಟು ಕಮಿಷನ್ ಫಲಾನುಭವಿಗಳಿಂದ ರಾಜ್ಯ ನಲುಗುತ್ತಿದೆ. ಜನರಿಗೆ ಯಾವ ಫಲವೂ ಇಲ್ಲದಿರುವಾಗ ಫಲಾನುಭವಿಗಳಾಗುವುದು ಹೇಗೆ!? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ’40 ಪರ್ಸೆಂಟ್ ಸರಕಾರ’ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ. ಜನತೆ-ಸಂತ್ರಸ್ತರು ಮಾತ್ರ! ಬಿಟ್ ಕಾಯಿನ್ ಹಗರಣದ ಫಲಾನುಭವಿ ನಳಿನ್ ಕುಮಾರ್ ಕಟೀಲ್ ಅವರೇ, ಹೇಳಿ, ತಾವು ಈ ಹಗರಣದಲ್ಲಿ ಎಷ್ಟು ಫಲ ಪಡೆದಿದ್ದೀರಿ? ಶ್ರೀಕಿ ಯಾನೆ ಶ್ರೀಕೃಷ್ಣ ಎಲ್ಲಿ ಹೋದ? ಬಿಟ್ ಕಾಯಿನ್ ತನಿಖೆ ಹಳ್ಳ ಹಿಡಿದಿದ್ದೇಕೆ? ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದೇಕೆ?’ ಎಂದು ವಾಗ್ದಾಳಿ ನಡೆಸಿದೆ.

‘40 ಪರ್ಸೆಂಟ್ ಸರಕಾರ’ದ ಮುಖ್ಯ ಫಲಾನುಭವಿ ಬಸವರಾಜ ಬೊಮ್ಮಾಯಿ ಅವರು. ಹಗರಣಗಳಿಗೆ ಶ್ರೀರಕ್ಷೆ ನೀಡುವುದೇ ಇವರ ಕೆಲಸ! -ಬಿಟ್ ಕಾಯಿನ್ ಹಗರಣ, ಪಿಎಸ್ಸೈ ಹಗರಣ, ಶೇ.40ರಷ್ಟು ಕಮಿಷನ್, ನೇಮಕಾತಿ ಅಕ್ರಮಗಳು, ಮಾಡಾಳ್ ಹಗರಣ, ಗಂಗಾ ಕಲ್ಯಾಣ, ನೀರಾವರಿ, ಕಾಕಂಬಿ, ಟೂಲ್‍ಕಿಟ್ ಹಗರಣ ಎಲ್ಲವೂ ಇವರದ್ದೇ ಸಾಧನೆಗಳು!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಪಿಎಸ್ಸೈ ಹಗರಣದಲ್ಲಿ ನಂ1 ಫಲಾನುಭವಿ-ಡಾ.ಅಶ್ವತ್ಥ ನಾರಾಯಣ. ಸಂತ್ರಸ್ತರು-56 ಸಾವಿರ ಅಭ್ಯರ್ಥಿಗಳು! ‘40 ಪರ್ಸೆಂಟ್ ಸರಕಾರ’ಕ್ಕೆ ತಾಕತ್ತಿದ್ದರೆ ನೇಮಕಾತಿ ಹಗರಣಗಳ ಸಂತ್ರಸ್ತರ ಸಮಾವೇಶ ಮಾಡಲಿ, ಒಂದೇ ಒಂದು ಕುರ್ಚಿಯೂ ಖಾಲಿ ಇರುವುದಿಲ್ಲ, ಕುರ್ಚಿ ತುಂಬಿಸಲು ಶ್ರಮಪಡಬೇಕಾಗಿಲ್ಲ, 500 ರೂ.ಹಣ ನೀಡಬೇಕಾಗಿಯೂ ಇಲ್ಲ ಸಾಧ್ಯವೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘40 ಪರ್ಸೆಂಟ್ ಸರಕಾರ’ದ ಮತ್ತೊಬ್ಬ ಫಲಾನುಭವಿ ಕೆ.ಎಸ್.ಈಶ್ವರಪ್ಪ ಅವರು. ಸಂತ್ರಸ್ತ-ಗುತ್ತಿಗೆದಾರ ಸಂತೋಷ್ ಪಾಟೀಲ್. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟಾಚಾರದ ರಕ್ಷಣೆಗೆ ತಾನು ಕಟಿಬದ್ದ ಎಂಬುದನ್ನು ಬಸವರಾಜ ಬೊಮ್ಮಾಯಿ ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಕೊರೋನಾದಿಂದ ಜನರೆಲ್ಲರೂ ಸಂತ್ರಸ್ತರು. ಆದರೆ ಫಲಾನುಭವಿ ಮಾತ್ರ- ಡಾ.ಸುಧಾಕರ್. ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ! ‘40 ಪರ್ಸೆಂಟ್ ಸರಕಾರ’ದಲ್ಲಿ ಅತಿ ಹೆಚ್ಚು ‘ಫಲ’ ಉಂಡಿರುವ ಫಲಾನುಭವಿ ಇವರು!!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Similar News