×
Ad

ಸಿದ್ದರಾಮಯ್ಯ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ: ಸಚಿವ ಡಾ.ಅಶ್ವತ್ಥನಾರಾಯಣರನ್ನು ಬಂಧಿಸಲು ಕೋರಿ ಡಿಜಿಪಿಗೆ ಮನವಿ

Update: 2023-03-04 22:24 IST

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊಲೆ ಮಾಡಲು ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಬೇಕೆಂದು ಕೋರಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದೆ.

ಆಕ್ರಮಣಕಾರಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಪೊಲೀಸರು ಇಲ್ಲಿಯ ವರೆಗೆ ಯಾವ ಕಾರಣಕ್ಕೆ ಪ್ರಕರಣ ದಾಖಲಾಗಿಲ್ಲ ಎಂದು ಒಕ್ಕೂಟ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‍ಸೂದ್, ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನಿರ್ದೇಶಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಈ ಕೂಡಲೇ ಪೊಲೀಸರು ಸಚಿವ ಅಶ್ವತ್ಥನಾರಾಯಣ ವಿರುದ್ಧ ಕ್ರಮ ಜರುಗಿಸದಿದ್ದರೆ ಮಾ.10ಕ್ಕೆ ರಾಜ್ಯದ ಎಲ್ಲ ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಜನಪರ ಸಂಘಟನೆಗಳನ್ನು ಒಳಗೊಂಡ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಲಾಯಿತು.

ಈ ವೇಳೆ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ಸದಸ್ಯರಾದ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಅನಂತ್ ನಾಯ್ಕ್, ಮಹಾಂತೇಶ್ ಎಸ್.ಕೌಲಗಿ, ಬಸವರಾಜ್ ಮಾಳ್ಗೆ, ಅನಿಲ್ ಕುಮಾರ್ ಬೆಲ್ದಾರ್, ಅಬ್ದುಲ್ ಮನಾನ್ ಸೇಟ್, ಮಲ್ಲಿಕಾರ್ಜುನ್ ಬಿರಾದರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News