ದಾವಣಗೆರೆ ಮನಪಾ ಚುನಾವಣೆ: ವಿನಾಯಕ ಪೈಲ್ವಾನ್ ಮೇಯರ್, ಯಶೋದಾ ಹೆಗ್ಗೆಪ್ಪ ಉಪಮೇಯರ್ ಆಗಿ ಆಯ್ಕೆ

Update: 2023-03-04 18:26 GMT

ದಾವಣಗೆರೆ: ಮಹಾನಗರ ಪಾಲಿಕೆಯ 4ನೇ ಅವಧಿಯ ಮಹಾಪೌರರಾಗಿ 7ನೇ ವಾರ್ಡ್‌ನ ಕಾಂಗ್ರೆಸ್‌ನ ಸದಸ್ಯ ವಿನಾಯಕ ಪೈಲ್ವಾನ್, ಉಪ ಮೇಯರ್ ಆಗಿ ಬಿಜೆಪಿಯ 27ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಯಶೋಧಾ ಹೆಗ್ಗೆಪ್ಪ ಆಯ್ಕೆಯಾಗಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಯರ್ ಆಗಿ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆ ಯಾದರೆ, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧಾ ಹೆಗ್ಗೆಪ್ಪ ಐದು ಮತಗಳ ಅಂತರದಲ್ಲಿ ಜಯಗಳಿಸಿದರು. ಯಶೋಧಾ ಹೆಗ್ಗೆಪ್ಪ 29 ಮತಗಳನ್ನು ಪಡೆದರೆ ಎದುರಾಳಿ ಕಾಂಗ್ರೆಸ್‌ನ ಶಿವಲೀಲಾ ಕೊಟ್ರಯ್ಯ 24 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಕಾರ್ಯ ನಿರ್ವಹಿಸಿದರು.

ಮೇಯರ್ ಸ್ಥಾನ ಎಸ್‌ಟಿಗೆ ಮೀಸಲಾಗಿದ್ದು, ಮೇಯರ್ ಸ್ಥಾನಕ್ಕೆ ಏರಲು ಅಗತ್ಯವಾದ ಬಹುಮತ ಹೊಂದಿದ್ದರೂ ಬಿಜೆಪಿಯಲ್ಲಿ ಪ. ಪಂಗಡದವರು ಇರಲಿಲ್ಲ. ಹಾಗಾಗಿ ಕಾಂಗ್ರೆಸ್‌ನ ವಿನಾಯಕ ಪೈಲ್ವಾನ್ ಅವರನ್ನು ಸೆಳೆದ ಬಿಜೆಪಿಯವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನೆರವಾದರು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಸವಿತಾ ಹುಲ್ಮನೆ ಗಣೇಶ್ ನಾಮಪತ್ರ ಸಲ್ಲಿಸಿದ ನಂತರದ ಕೆಲ ಹೊತ್ತಿನಲ್ಲಿ ವಿನಾಯಕ ಪೈಲ್ವಾನ್ ಮಾಜಿ ಮೇಯರ್ ಎಸ್.ಟಿ. ವೀರೇಶ್,ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಸೋಗಿ ಶಾಂತ ಕುಮಾರ್ ಅವರೊಟ್ಟಿಗೆ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಜಿ.ಎಸ್. ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಕೆ. ಚಮನ್‌ಸಾಬ್, ಉದಯ್‌ಕುಮಾರ್ ಇತರರು, ಬಿಜೆಪಿ ಯವರ ಜೊತೆಗೆ ಹೋಗಬೇಡ, ನಮ್ಮ ಜೊತೆಗೆ ಇರು ಎಂದು ಒತ್ತಾಯಿಸಿದರು. ವಿನಾಯಕ ಪೈಲ್ವಾನ್ ಅವರನ್ನು ಹಿಡಿದು ಸೆಳೆಯಲು ಯತ್ನಿಸಿದರು. ನಾನು ಎಲ್ಲಿಗೂ ಹೋಗಿಲ್ಲ. ಪಕ್ಷ ಬಿಟ್ಟಿಲ್ಲ ಎಂದು ಹೇಳುತ್ತಲೇ ನಾಮಪತ್ರ ಸಲ್ಲಿಸಲು ತೆರಳಿದರು.

ನಾಮಪತ್ರ ಸಲ್ಲಿಸಿ ಹೊರ ಬಂದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ವಿನಾಯಕ ಪೈಲ್ವಾನ್ ಅವರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ಪರಸ್ಪರ ಧಿಕ್ಕಾರ ಕೂಗಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಬಿಜೆಪಿ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ಕರೆದೊಯ್ದರು.

ಮಧ್ಯಾಹ್ನ 3ಗಂಟೆಗೆ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸಿದ ವಿನಾಯಕ ಪೈಲ್ವಾನ್ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನ ಕಂಡೊಡನೆ ಪಾದಕ್ಕೆ ನಮಸ್ಕರಿಸಿ, ಮೇಯರ್ ಆಗಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಶಾಮನೂರು ಶಿವಶಂಕರಪ್ಪ ಅವರ ಸೂಚನೆಯಂತೆ ಸವಿತಾ ಹುಲ್ಮನೆ ಗಣೇಶ್ ನಾಮಪತ್ರ ಹಿಂಪಡೆದ ಕಾರಣಕ್ಕೆ ವಿನಾಯಕ ಪೈಲ್ವಾನ್ ನೂತನ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.

ವಿನಾಯಕ ಪೈಲ್ವಾನ್ ಆಯ್ಕೆ ನಂತರವೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮೇಯರ್ ನಮ್ಮವರು ಎಂಬ ವಿಷಯಕ್ಕಾಗಿಯೇ ಕಿತ್ತಾಟ ಮುಂದುವರಿಯಿತು. ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಕೊಠಡಿಗೆ ಕರೆದೊಯ್ದು ಬಾಗಿಲು ಹಾಕಿಕೊಂಡರು. ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಪ್ರಹಸನ ಮುಂದುವರಿಯಿತು. ಅಂತಿಮವಾಗಿ ಬಿಜೆಪಿ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ಜೊತೆಗೆ ಕರೆದೊಯ್ದರು.

ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಮ್ಮ ಕಡೆಯಿಂದಲೇ ವಿನಾಯಕ ಪೈಲ್ವಾನ್ ಮೇಯರ್ ಆಗಿದ್ದಾರೆ ಎಂದು ತಿಳಿಸಿದರು. ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ, ರವೀಂದ್ರನಾಥ, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಮೋಹನ್ ಕೊಂಡಜ್ಜಿ, ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಕೆ.ಹರೀಶ್ ಕುಮಾರ್, ರವಿಕುಮಾರ್ ಎನ್., ಅಪರ ಜಿಲ್ಲಾಧಿಕಾರಿ ಲೋಕೇಶ್, ಪಾಲಿಕೆ ಆಯುಕ್ತ ರೇಣುಕಾ  ಇತರರು ಇದ್ದರು.

ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ಹೈಡ್ರಾಮ 
ದಾವಣಗೆರೆ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಇದುವರೆಗೂ ನಡೆಯದಂತಹ ಹೈಡ್ರಾಮ ನಡೆಯಿತು. ಮೇಯರ್ ಸ್ಥಾನಕ್ಕೆ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮೇಯರ್ ಆಗಿ ಆಯ್ಕೆಯಾದ ನಂತರವೂ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ, ತಳ್ಳಾಟ, ನೂಕಾಟ ನಿಲ್ಲಲೇ ಇಲ್ಲ. ಮೇಯರ್ ನಮ್ಮವರು ಎಂಬುದಾಗಿ ಬಿಜೆಪಿಯವರು ಪ್ರತಿಪಾದಿಸಿದರೆ ನಮ್ಮ ಪಕ್ಷಕ್ಕೇ ಸೇರಿದವರು ಎಂದು ಕಾಂಗ್ರೆಸ್‌ನವರು ವಾದಿಸಿದರು. ವಿನಾಯಕ ಪೈಲ್ವಾನ್ ಬಿಜೆಪಿಯವರೊಂದಿಗೆ ಸೇರಿಕೊಂಡು ನಾಮಪತ್ರ ಸಲ್ಲಿಸಿ, ಬೆಂಬಲದಿಂದ ಮೇಯರ್ ಆದರೂ, ತಾಂತ್ರಿಕವಾಗಿ ಕಾಂಗ್ರೆಸ್‌ನ ಸದಸ್ಯರಾಗಿಯೇ ಉಳಿದುಕೊಂಡರು. ಈ ಗೊಂದಲ ಸ್ಪಷ್ಟವಾಗಿ ಬಗೆಹರಿಯಲು ಕಾಲಾವಕಾಶ ಬೇಕಾಗುತ್ತದೆ.

Similar News