ಈ ವಾರ

Update: 2023-03-05 04:33 GMT

ಮತ್ತೆ ಮೋದಿ ರಾಜ್ಯ ಭೇಟಿ

ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿ ರಾಜ್ಯ ಭೇಟಿ ಹೆಚ್ಚುತ್ತಿದೆ. ಈ ವಾರ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಬೆಳಗಾವಿಯಲ್ಲಿ ರೋಡ್ ಶೋ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸಂಪೂರ್ಣ ರಾಜ್ಯ ಸರಕಾರದ ಯೋಜನೆಯಾದ ವಿಮಾನ ನಿಲ್ದಾಣ ತಮ್ಮ ಸಾಧನೆಯೆಂದು ಹೈಜಾಕ್ ಮಾಡುವ ಪ್ರಯತ್ನ ಮಾಡಿದರು. ತಾವಿರುವ ತನಕ ಕಾಂಗ್ರೆಸ್ ಎದ್ದೇಳಲು ಬಿಡುವುದಿಲ್ಲ. ಕೆಲವರು ತಮ್ಮ ಸಾವನ್ನು ಬಯಸುತ್ತಿದ್ದಾರೆ ಎಂದರು. ಪ್ರಧಾನಿ ಹುದ್ದೆಗೆ ಅದರದ್ದೇ ಆದ ಘನತೆಯಿದೆ. ರಾಜಕೀಯ ಭಾಷಣದ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ. ಒಂದು ವೇಳೆ ಪ್ರಧಾನಿ ಹತ್ಯೆಗೆ ಯಾರಾದರೂ ಪ್ರಯತ್ನಪಟ್ಟರೆ ಈ ದೇಶದ ಕಾನೂನು ಬಹಳ ಬಲಿಷ್ಠವಾಗಿಯೇ ಇದೆ. ಆದರೆ ಆಧಾರವೇ ಇಲ್ಲದೆ ಅನುಕಂಪ ಗಿಟ್ಟಿಸಲು ಬೇರೆ ಯಾರೋ ಮಾತಾಡಿದರೆ ಸರಿ, ಪ್ರಧಾನಿ ಮಾತಾಡಬಾರದು. ಕಳೆದ ವಾರ ಇವರದ್ದೇ ಪಕ್ಷದ ರಾಜ್ಯದ ಉನ್ನತ ಶಿಕ್ಷಣ ಸಚಿವ ವಿರೋಧ ಪಕ್ಷದ ನಾಯಕರನ್ನು ಹೊಡೆದು ಹಾಕಿ ಎಂದು ಕರೆಕೊಟ್ಟಿದ್ದು ಪ್ರಧಾನಿ ಗಮನಕ್ಕೆ ಬಾರದೇ ಹೋಗಿದ್ದು ವಿಪರ್ಯಾಸ. ಒಟ್ಟಿನಲ್ಲಿ ಇಂಥ ಭಾಷಣಗಳಿಂದ ಕಡಿಮೆಯಾಗುವುದು ಪ್ರಧಾನಿ ಹುದ್ದೆಯ ಘನತೆ.

ಮೂರು ತಾಸಿನ ಮುಷ್ಕರ

ರಾಜ್ಯ ಸರಕಾರಿ ನೌಕರರು 2 ಬೇಡಿಕೆಗಳನ್ನಿಟ್ಟು ಮುಷ್ಕರ ಮಾಡಿದರು. 7ನೇ ವೇತನ ಆಯೋಗದ ಜಾರಿ ಮತ್ತು ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ತರಬೇಕು ಎನ್ನುವುದು ಬೇಡಿಕೆ. ಸಚಿವಾಲಯದ ನೌಕರರ ಸಂಘವೂ ಸೇರಿ ಎಲ್ಲರೂ ಬೆಂಬಲ ನೀಡಿದ್ದರು. ಹಲವು ಸುತ್ತಿನ ಮಾತುಕತೆ ನಂತರವೂ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮುಷ್ಕರಕ್ಕೆ ಕರೆ ಕೊಟ್ಟರು. 1ನೇ ತಾರೀಕು ನಿಗದಿಯಂತೆ ಮುಷ್ಕರ ಆರಂಭವಾಗಿ ಸರಕಾರದ ಮಧ್ಯಪ್ರವೇಶದಿಂದ 3 ಗಂಟೆಯಲ್ಲೇ ಮುಷ್ಕರ ಮುಗಿಯಿತು. ಶೇ. 17 ವೇತನ ಹೆಚ್ವಳಕ್ಕೆ ಎಪ್ರಿಲ್‌ನಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಎನ್‌ಪಿಎಸ್‌ಕುರಿತು ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದೆ. ಇದನ್ನು ಒಪ್ಪಿಕೊಂಡು ಮುಷ್ಕರ ಕೈಬಿಟ್ಟಿದ್ದು ಷಡಕ್ಷರಿಯವರ ಏಕಪಕ್ಷೀಯ ನಿರ್ಧಾರ ಎಂದು ನೌಕರರ ಸಂಘದ ಕೆಲವರು ಆರೋಪಿಸಿದರು. ಇದು ಬಿಜೆಪಿ ಮತ್ತು ಷಡಕ್ಷರಿ ನಡುವಿನ ಚುನಾವಣಾ ಹೈಡ್ರಾಮ ಅಂತಲೂ ಹೇಳಲಾಯಿತು. ಷಡಕ್ಷರಿ ಅವರ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು.

ಸಾಕ್ಷ್ಯ ಕೇಳುತ್ತಿದ್ದವರು ಸಿಕ್ಕಿಬಿದ್ದರು

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ, ಬಿಡಬ್ಲುಎಸ್‌ಎಸ್‌ಬಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದರು. ಟೆಂಡರ್ ಒಂದಕ್ಕೆ ಸಂಬಂಧಿಸಿದಂತೆ 80 ಲಕ್ಷ ರೂ. ಕಮಿಷನ್ ಕೇಳಿ, ಮುಂಗಡವಾಗಿ 40 ಲಕ್ಷ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳಿಕ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ ರೂ. 8 ಕೋಟಿಗೂ ಅಧಿಕ ಹಣ ಪತ್ತೆಯಾಯಿತು. ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಬಂಧಿಸಲಾಗಿದೆ. ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆದಿದ್ದು, ಬಂಧಿತ ಪ್ರಶಾಂತ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಶಾಸಕ ವಿರೂಪಾಕ್ಷಪ್ಪಕೆಎಸ್‌ಡಿಎಲ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ವಿರುದ್ಧವೂ ಎಫ್‌ಐಆರ್ ಆಗಿದೆ. ಇಲ್ಲಿಯತನಕ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದ ಬಿಜೆಪಿ ಈಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದೆ.

ಪ್ರಾದೇಶಿಕ ಪಕ್ಷಗಳ ಗೆಲುವು

ದೇಶದ ಮೂರು ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. ಮೇಘಾಲಯದಲ್ಲಿ ತನ್ನ ಅಸ್ತಿತ್ವವನ್ನು ಸ್ಪಷ್ಟವಾಗಿ ತೋರಿಸಿದೆ. ತ್ರಿಪುರಾದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಎಡಪಕ್ಷ ಸಾಕಷ್ಟು ಸಾಧನೆ ಮಾಡಿದೆ. ಈ ಗೆಲುವು ಮುಂಬರಲಿರುವ ರಾಜ್ಯಗಳ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣಾ ದಿಕ್ಸೂಚಿ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಎನ್ನುವುದಕ್ಕಿಂತ ಅಲ್ಲಿನ ಪ್ರಾದೇಶಿಕ ಪಕ್ಷಗಳ ಪಾತ್ರ ದೊಡ್ಡದು. ಅವು ದೇಶಕ್ಕೆ ಹೆಚ್ಚು ಗೊತ್ತಿಲ್ಲದೇ ಇರುವುದರಿಂದ ಮತ್ತು ಬಿಜೆಪಿ ಮಿತ್ರ ಪಕ್ಷಗಳಾಗಿರುವುದರಿಂದ ಈ ಗೆಲುವಿನ ಕ್ರೆಡಿಟ್ ಬಿಜೆಪಿಗೆ ಹೋಗಿದೆ.

ಆಪ್ ಇಕ್ಕಟ್ಟು

ದಿಲ್ಲಿಯ ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾರನ್ನು ಬಂಧಿಸಿದೆ. ಕಳೆದ ಕೆಲವು ತಿಂಗಳಿಂದ ಸಿಸೋಡಿಯಾ ವಿಚಾರಣೆ ನಡೆದಿತ್ತು. ಸತ್ಯೇಂದ್ರ ಜೈನ್ ನಂತರ ಸಿಸೋಡಿಯಾ ಬಂಧನ ಆಗಿದೆ. ಇದು ರಾಜಕೀಯ ಹಗೆತನದ ಕ್ರಮ ಎಂದು ಆಪ್ ಮತ್ತು ವಿರೋಧ ಪಕ್ಷದವರು ಟೀಕಿಸಿದ್ದು, ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದಿದ್ದಾರೆ. ಈ ನಡುವೆ ರಾಜ್ಯ ಚುನಾವಣೆಗೆ ಆಪ್ ಸಿದ್ಧತೆ ನಡೆಸಿದ್ದು, ದಾವಣಗೆರೆಗೆ ಕೇಜ್ರಿವಾಲ್ ಭೇಟಿ ನೀಡುವುದರ ಮೂಲಕ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಅದೇ ಸಂದರ್ಭದಲ್ಲಿ ಆಪ್ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ ಸೋಲು ಹಾಗೂ ಆಪ್ ರಾಜಕೀಯ ಬೆಳವಣಿಗೆ ಬಿಜೆಪಿಯನ್ನು ಕಂಗೆಡಿಸಿರಬಹುದು. ಆದರೆ ಭ್ರಷ್ಟಾಚಾರದ ವಿಚಾರದಲ್ಲಿ ದೋಷಮುಕ್ತ ಆದರೆ ಮಾತ್ರ ಆಪ್ ನಿಲುವಿಗೆ ಬದ್ಧತೆ ಬರುತ್ತದೆ.

ಟೀಕೆಗೊಳಗಾದ ಶರಣಾಗತಿಯ ಧ್ವನಿ

ಚೀನಾ ಎದುರು ಭಾರತ ಯುದ್ಧ ಮಾಡಲಾರದು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಕ್ಕೆ ಹಲವಾರು ಮಿಲಿಟರಿ ಪರಿಣತರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ನೌಕಾಪಡೆಯ ಮಾಜಿ ಮುಖ್ಯಸ್ಥ, 1971ರ ಯುದ್ಧದಲ್ಲಿ ಭಾಗಿಯಾಗಿದ್ದ ಅರುಣ್ ಪ್ರಕಾಶ್, ‘‘ಆರ್ಥಿಕತೆ ಆಧಾರದಲ್ಲೇ ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ಅಳೆಯುವುದಾದರೆ, ಕ್ಯೂಬಾ, ಉತ್ತರ ಕೊರಿಯಾ, ಇರಾನ್‌ನಂಥ ದೇಶಗಳು ಅಮೆರಿಕ, ಚೀನಾದ ವಿರುದ್ಧ ಹೇಗೆ ನಿಂತಿವೆ?’’ ಎಂದು ಕೇಳಿದ್ದಾರೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅನಿಲ್ ದುಹೂನ್, ‘‘ಚುನಾವಣಾ ಭಾಷಣಗಳಲ್ಲಿನ ಕೆಚ್ಚೆದೆಯದ್ದೆನ್ನಲಾಗುವ ರಾಷ್ಟ್ರೀಯತೆ ಏನಾಯಿತು? ಮೋದಿಯವರ ಸ್ವಯಂಘೋಷಿತ ಕೆಚ್ಚೆದೆಯ ರಾಷ್ಟ್ರೀಯತೆ ಈಗ ಚೀನಾದ ಆಕ್ರಮಣ ಮತ್ತು ಬೆದರಿಕೆಗೆ ಶರಣಾಗಿದೆ’’ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ‘‘ಚೀನಾ ಎದುರು ಮೋದಿ ಸರಕಾರದ್ದು ಸಾವರ್ಕರ್ ನೀತಿ’’ ಎಂದು ವಾಗ್ದಾಳಿ ನಡೆಸಿದ್ದಾರೆ. ಭಾಷಣವೇ ಬೇರೆ, ಸರಕಾರ ನಡೆಸುವುದೇ ಬೇರೆ ಎಂಬುದು ಸರಕಾರ ನಡೆಸುವವರಿಗೆ ಈಗ ಗೊತ್ತಾಗಿರಬೇಕು. ಮಿಲಿಟರಿ ಪರಿಣತರು ಕೇಳುತ್ತಿರುವ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕಿದೆ.

ಜಾತಿ ನೋಡುವ ವ್ಯವಸ್ಥೆ

ಉತ್ತರ ಪ್ರದೇಶದ ಹಾಥರಸ್‌ನಲ್ಲಿ 2020ರಲ್ಲಿ ನಡೆದ 19 ವರ್ಷದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿನ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಉತ್ತರಪ್ರದೇಶದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನ್ಯಾಯಾಲಯ ಖುಲಾಸೆಗೊಳಿಸಿದೆ. ಸಂದೀಪ್ (20) ಎಂಬ ಇನ್ನೊಬ್ಬನನ್ನು ಕೊಲೆಗೆ ಸಮನಾಗದ ನರಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಕೋರ್ಟ್ ತೀರ್ಪು ಕೊಟ್ಟಿದೆ. ಆತನ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ. ಆದರೆ ಸಾಮೂಹಿಕ ಅತ್ಯಾಚಾರದ ತಪ್ಪಿತಸ್ಥರೆಂದು ಯಾರ ಮೇಲೆಯೂ ಕೇಸ್ ಹಾಕಲಾಗಿಲ್ಲ. ಅಲ್ಲಿಗೆ, ಅತ್ಯಾಚಾರವೇ ಅಲ್ಲ ಎಂಬ ಹಂತಕ್ಕೆ ಪ್ರಕರಣ ಬಂದು ನಿಂತಂತಾಗಿದೆ. ಸಾಯುವ ಸಂದರ್ಭದಲ್ಲಿ ಆಕೆ ತನ್ನ ಮೇಲೆ ಅತ್ಯಾಚಾರವಾದುದನ್ನೂ, ಅತ್ಯಾಚಾರ ಮಾಡಿದ್ದವರ ಹೆಸರನ್ನೂ ಹೇಳಿದ್ದಳು. ಅದಕ್ಕೂ ಬೆಲೆಯಿಲ್ಲದಂತಾಗಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಬಂದಿರುವ ಕೋರ್ಟ್ ತೀರ್ಪು ಆಕೆಯ ಕುಟುಂಬದ ಪಾಲಿಗೆ ತಂದಿರುವುದು ಹತಾಶೆಯನ್ನು ಮಾತ್ರ. ಈ ದೇಶದಲ್ಲಿ ಅತ್ಯಾಚಾರದಂತಹ ಹೇಯ ಅಪರಾಧಗಳಲ್ಲೂ ಸಂತ್ರಸ್ತೆಯ ಜಾತಿ ನೋಡಿ ಶಿಕ್ಷೆ ನೀಡುವ ಪ್ರಕ್ರಿಯೆಯ ವೇಗ ಹಾಗೂ ಶೈಲಿ ಬದಲಾಗುತ್ತಿದೆ ಎಂಬ ಆರೋಪ ಬಹಳ ಕಾಲದಿಂದಿದೆ. ಹಾಥರಸ್ ತೀರ್ಪಿನ ಬಳಿಕವೂ ಅದೇ ಆರೋಪ ಚರ್ಚೆಗೆ ಬಂದಿದೆ.

ಬೆಲೆ ಬರೆ

ಅಡುಗೆ ಅನಿಲದರದಲ್ಲಿ ಭಾರೀ ಏರಿಕೆಯಾಗಿದೆ. ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರ 50 ರೂ. ಹೆಚ್ಚಳವಾಗಿದೆ. ಅಂದರೆ ಗೃಹ ಬಳಕೆ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1,105.50 ರೂ. ಆಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 350.50 ರೂ. ಹೆಚ್ಚಿಸಲಾಗಿದ್ದು, 2,119.50 ರೂ. ಆಗಿದೆ. ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲೇ ನಮ್ಮ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಬಹುತೇಕ ಡಬಲ್ ಆಗಿಬಿಟ್ಟಿದೆ. ಅಂತರ್ ರಾಷ್ಟ್ರೀಯ ಮಾರ್ಕೆಟ್‌ನಲ್ಲಿ ಕಚ್ಚಾ ತೈಲ ಬೆಲೆ ಇಳಿದಾಗಲೂ ಇಲ್ಲಿ ಇಂಧನ ಹಾಗೂ ಎಲ್‌ಪಿಜಿ ಬೆಲೆ ಇಳಿಯುವುದೇ ಇಲ್ಲ. ಬದಲಿಗೆ ಬೆಲೆ ಜಾಸ್ತಿಯಾಗುತ್ತಲೇ ಹೋಗುತ್ತಿದೆ. ಬೆಲೆಯೇರಿಕೆ ವಿಚಾರದಲ್ಲಿ ಯುಪಿಎ ಸರಕಾರದ ಮೇಲೆ ಇನ್ನಿಲ್ಲದ ದಾಳಿ ಮಾಡಿ ಅಧಿಕಾರಕ್ಕೆ ಬಂದ ಈ ಸರಕಾರ ಮಾಡಿದ್ದೇನು ಎಂಬುದನ್ನು ವಿವರಿಸಬೇಕಾಗಿದೆ.