ಬಿಎಸ್‍ವೈ ಬಾಯಿ ಮುಚ್ಚಿಸಲು ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ: ಎಂ.ಬಿ.ಪಾಟೀಲ್

Update: 2023-03-05 12:55 GMT

ವಿಜಯಪುರ, ಮಾ. 5: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆದರಿಸಿ, ಬಾಯಿ ಮುಚ್ಚಿಸಲು ಅವರ ಆಪ್ತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮಾಡಿರುವ ಸಾಧ್ಯತೆಗಳಿವೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸಂಶಯ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ನೀವೇನಾದರೂ ಅಲುಗಾಡಿದರೆ ಸರಿ ಇರುವುದಿಲ್ಲ ಎಂಬುದನ್ನು ತೋರಿಸಲು ಈ ರೀತಿ ಮುನ್ನಚ್ಚರಿಕೆ ಕೊಡುವ ಪ್ರಯತ್ನ ಇದಾಗಿರಬಹುದು. ಹಾಗೆ ನೋಡಿದರೆ ಬಹಳ ಜನರ ಮೇಲೆ ಲೋಕಾಯುಕ್ತ ದಾಳಿ ನಡೆಸಬೇಕಿತ್ತು’ ಎಂದು ಹೇಳಿದರು.

‘ರೇವಣ ಸಿದ್ಧೇಶ್ವರ ಏತ ನೀರಾವರಿಗಾಗಿ ಸಚಿವ ಗೋವಿಂದ ಕಾರಜೋಳ ಏನು ಮಾಡಿದ್ದಾರೆ? ಈಗ ಬಂದು ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ಯೋಜನೆ ಕುರಿತು ಇನ್ನೂ ಬೋರ್ಡ್ ಮೀಟಿಂಗ್ ಆಗಿಲ್ಲ. ಎ.1ರಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಕೇವಲ 20 ದಿನಗಳಲ್ಲಿ ಇವರು ಮ್ಯಾಜಿಕ್ ಮಾಡುತ್ತಾರಾ?’ ಎಂದು ಪಾಟೀಲ್ ಪ್ರಶ್ನಿಸಿದರು.

‘ಕಾಂಗ್ರೆಸ್ ಗೆಲ್ಲುವ ದಾರಿಯಲ್ಲಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಯಲ್ಲಿ ಟೆಕೆಟ್ ಕೇಳುವವರೇ ಇಲ್ಲ. ಹೀಗಾಗಿ ಅವರು ಅರ್ಜಿ ಕರೆದಿಲ್ಲ. ಜನರ ಅಭಿಪ್ರಾಯ ಅವರಿಗೆ ಗೊತ್ತಾಗಿದೆ. ಎಲ್ಲರೂ ಗೆಲ್ಲುವ ಕುದುರೆ ಬೆನ್ನು ಹತ್ತುತ್ತಾರೆ. ಸೋಲುವ ಕುದುರೆಯನ್ನು ಯಾರು ಬೆಂಬಲಿಸುತ್ತಾರೆ ಎಂಬುದು ಬಿಜೆಪಿಗೆ ಗೊತ್ತಾಗಿದೆ. ವಿಜಯಪುರ ನಗರ ಮತಕ್ಷೇತ್ರದಿಂದ 27 ಜನ ಅರ್ಜಿ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ತೋರಿಸುತ್ತದೆ ಎಂದು ಪಾಟೀಲ್ ಭರವಸೆ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 130 ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣಗಳು ಇನ್ನೂ ಮುಂದುವರಿದರೆ ಕಾಂಗ್ರೆಸ್ 150ರಿಂದ 160 ಸ್ಥಾನಗಳನ್ನು ಗೆಲ್ಲಬಹುದು ಎಂದ ಅವರು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ಕೂಡಲೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

Similar News